ADVERTISEMENT

ರಾಣೆಬೆನ್ನೂರು | ಹೈಟೆಕ್‌ ಮಾರುಕಟ್ಟೆ; ಮತ್ತಷ್ಟು ತಡ

ಪುನಃ 3 ತಿಂಗಳ ಕಾಲಾವಕಾಶ ಕೋರಿದ ಕೆಎಚ್‌ಬಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 4:06 IST
Last Updated 8 ಆಗಸ್ಟ್ 2025, 4:06 IST
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಮಹಿಳೆಯರು ಮಾರುಕಟ್ಟೆಗೆ ಕಳುಹಿಸಲು ರೇಷ್ಮೆ ಗೂಡುಗಳನ್ನು ಸಿದ್ಧಪಡಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಮಹಿಳೆಯರು ಮಾರುಕಟ್ಟೆಗೆ ಕಳುಹಿಸಲು ರೇಷ್ಮೆ ಗೂಡುಗಳನ್ನು ಸಿದ್ಧಪಡಿಸಿದರು   

ರಾಣೆಬೆನ್ನೂರು: ಜಿಲ್ಲೆಯಲ್ಲಿರುವ ರೇಷ್ಮೆ ಬೆಳೆಗಾರರ ಅನುಕೂಲಕ್ಕೆಂದು ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು- ಹೂಲಿಹಳ್ಳಿ ಬಳಿ ನಿರ್ಮಿಸುತ್ತಿರುವ ‘ಹೈಟೆಕ್‌ ರೇಷ್ಮೆ ಮಾರುಕಟ್ಟೆ’ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ. ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸಬೇಕಾದ ಗುತ್ತಿಗೆದಾರರು, ಹೆಚ್ಚಿನ ಕಾಲಾವಕಾಶ ಕೋರಿದ್ದಾರೆ.

ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಯ ಪ್ರಗತಿ ಬಗ್ಗೆ ಇತ್ತೀಚೆಗೆ ಸಭೆಯಲ್ಲಿ ಮಾಹಿತಿ ನೀಡಿದ್ದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕಾರಿಗಳು, ಡಿಸೆಂಬರ್‌ನಲ್ಲಿ ಕೆಲಸ ಮುಗಿಸಿ ಕಟ್ಟಡ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಆದರೆ, ಯೋಜನೆಯ ನಿಯಮಾವಳಿ ಪ್ರಕಾರ ಸೆಪ್ಟೆಂಬರ್‌ 31ರಂದು ಕಾಮಗಾರಿ ಮುಗಿಸಬೇಕಿತ್ತು. ಕಚ್ಚಾ ಸಾಮಗ್ರಿ ಹಾಗೂ ಕಾರ್ಮಿಕರ ಕೊರತೆ ನೆಪ ಹೇಳುತ್ತಿರುವ ಗುತ್ತಿಗೆದಾರರು, ಪುನಃ ಮೂರು ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ‘ರೇಷ್ಮೆ ಮಾರುಕಟ್ಟೆ ನಿರ್ಮಾಣವಾದರೆ ನಮಗೆ ಅನುಕೂಲವಾಗುತ್ತದೆ’ ಎಂದು ತಿಳಿದಿದ್ದ ರೈತರಿಗೆ, ಕಾಮಗಾರಿ ಮತ್ತಷ್ಟು ದಿನ ತಡವಾಗುತ್ತಿರುವುದು ಬೇಸರ ಮೂಡಿಸಿದೆ.

ADVERTISEMENT

ಅತೀ ಹೆಚ್ಚು ರೇಷ್ಮೆ ಬೆಳೆಯುವ ಉತ್ತರ ಕರ್ನಾಟಕದ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಹಾವೇರಿಯಲ್ಲಿ ರೇಷ್ಮೆ ಬೆಳೆಯುವ ರೈತರು ಅದನ್ನು ಮಾರಾಟ ಮಾಡಲು ದೂರದ ರಾಮನಗರ ಹಾಗೂ ಶಿಡ್ಲಘಟ್ಟಕ್ಕೆ ಹೋಗಿ ಬರಬೇಕಿದೆ. ಸಾರಿಗೆ ವೆಚ್ಚವೂ ದುಬಾರಿಯಾಗುತ್ತಿದೆ.

‘ಹಾವೇರಿಯಲ್ಲಿ ಹೆಚ್ಚು ರೇಷ್ಮೆ ಬೆಳೆದರೂ ಖರೀದಿದಾರರಿಲ್ಲ. ಇದ್ದರೂ ಇಬ್ಬರು ಮಾತ್ರ ಇದ್ದಾರೆ. ಅವರು ಹೇಳಿದ್ದೆ ದರವಾಗುತ್ತಿದೆ. ಕಡಿಮೆ ದರಕ್ಕೆ ರೇಷ್ಮೆ ನೀಡಲು ಮನಸ್ಸು ಒಪ್ಪುವುದಿಲ್ಲ. ಹೀಗಾಗಿ, ವಾಹನಗಳನ್ನು ಬಾಡಿಗೆ ಮಾಡಿಕೊಂಡು ರಾಮನಗರಕ್ಕೆ ಹೋಗಿ ರೇಷ್ಮೆ ಮಾರುತ್ತಿದ್ದೇವೆ. ನಮ್ಮೂರಿನಲ್ಲೇ ಮಾರುಕಟ್ಟೆಯಾದರೆ, ಸಾರಿಗೆ ವೆಚ್ಚವೂ ಉಳಿಯಲಿದೆ’ ಎಂದು ಮೇವುಂಡಿ ರೈತರು ಹೇಳಿದರು.

ಗೃಹ ಮಂಡಳಿಗೆ ಗುತ್ತಿಗೆ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೂನಬೇವು- ಹೂಲಿಹಳ್ಳಿ ಬಳಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣಕ್ಕೆ ₹ 15 ಕೋಟಿ ಯೋಜನಾ ಮೊತ್ತವಿತ್ತು. ಮಾರುಕಟ್ಟೆ ನಿರ್ಮಿಸುವ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ₹ 11.99 ಕೋಟಿ ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ.

ಗೃಹ ಮಂಡಳಿ ಅಧಿಕಾರಿಗಳೇ ಉಸ್ತುವಾರಿ ವಹಿಸಿಕೊಂಡು ಕಟ್ಟಡ ನಿರ್ಮಿಸುತ್ತಿದ್ದಾರೆ. 2024ರ ನವೆಂಬರ್ 1ರಂದು ಕಾಮಗಾರಿ ಆರಂಭಿಸುವ ಸಂದರ್ಭದಲ್ಲಿ 11 ತಿಂಗಳಿನಲ್ಲಿ ಕೆಲಸ ಮುಗಿಸಬೇಕೆಂದು ಷರತ್ತು ವಿಧಿಸಲಾಗಿದೆ. ಆದರೆ, ಕೆಲಸಕ್ಕೆ ಹಲವು ಸಮಸ್ಯೆಗಳು ಎದುರಾಗಿದ್ದವು. ಇದೇ ಕಾರಣಕ್ಕೆ ಗೃಹ ಮಂಡಳಿಯವರು ಹೆಚ್ಚುವರಿಯಾಗಿ ಮೂರು ತಿಂಗಳು ಕಾಲಾವಕಾಶ ಕೋರಿದ್ದಾರೆ.

‘ಕೂನಬೇವು- ಹೂಲಿಹಳ್ಳಿ ಗ್ರಾಮದ ಸರ್ವೇ ನಂ. 123ರಲ್ಲಿ 5 ಎಕರೆ 1 ಗುಂಟೆ 8 ಆಣೆ ಜಾಗದಲ್ಲಿ ಹೈಟೆಕ್‌ ರೇಷ್ಮೆ ಗೂಡಿನ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೆಲ ಕೊರತೆಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಕಾಮಗಾರಿ ಮುಗಿಯಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲೆಯ 250 ಗ್ರಾಮಗಳ 3,047 ಹೆಕ್ಟೇರ್‌ ಪ್ರದೇಶದಲ್ಲಿ 8 ಸಾವಿರಕ್ಕೂ ಹೆಚ್ಚು ರೈತರು, ರೇಷ್ಮೆ ಬೆಳೆಯುತ್ತಿದ್ದಾರೆ. ಹೈಟೆಕ್ ಮಾರುಕಟ್ಟೆ ಆರಂಭವಾದರೆ, ಎಲ್ಲ ರೈತರಿಗೆ ಅನುಕೂಲವಾಗಲಿದೆ. ವಿಜಯಪುರ, ಜಮಖಂಡಿ, ಬಾಗಲಕೋಟೆ, ವಿಜಯನಗರ, ಕಾರವಾರ, ಬೆಳಗಾವಿ, ಗದಗ, ಧಾರವಾಡ, ಹುಬ್ಬಳ್ಳಿ ರೈತರಿಗೂ ಮಾರುಕಟ್ಟೆಯಲ್ಲಿ ರೇಷ್ಮೆ ಮಾರಾಟಕ್ಕೆ ಅವಕಾಶ ಸಿಗಲಿದೆ.

‘ಹಾವೇರಿಯಲ್ಲಿ ಮಾರುಕಟ್ಟೆ ಕೊರತೆಯಿಂದ ರೈತರು, ರಾಮನಗರಕ್ಕೆ ರೇಷ್ಮೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿಯೇ ಮಾರುಕಟ್ಟೆ ನಿರ್ಮಾಣವಾದರೆ, ಗೂಡು ವಹಿವಾಟು ಉತ್ತಮವಾಗಲಿದೆ. ಸ್ಥಳೀಯ ರೈತರ ಆದಾಯವೂ ವೃದ್ಧಿಸಲಿದೆ’ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಮಾಲತೇಶ ಎಸ್.‌ ಪಾಟೀಲ ತಿಳಿಸಿದರು.

ಹೇಗಿರಲಿದೆ ಮಾರುಕಟ್ಟೆ: ರೇಷ್ಮೆ ಮಾರುಕಟ್ಟೆಯ ಪ್ರವೇಶ ಪ್ಲಾಜಾದಲ್ಲಿ ಭದ್ರತಾ ಕೊಠಡಿ ಮತ್ತು ಪಾದಚಾರಿ ಪ್ರವೇಶ ಇರಲಿದೆ. ರೈತ ಮಿತ್ರ ಹೆಸರಿನಲ್ಲಿ ಕೊಠಡಿ,  ಸಹಾಯವಾಣಿ, ಅಗ್ನಿಶಾಮಕ ತಾಂತ್ರಿಕ ಬೆಂಬಲ ಕೊಠಡಿ ಮತ್ತು ಪೊಲೀಸ್‌ ಹೊರಠಾಣೆ ಇರಲಿದೆ. ವಿದ್ಯುತ್‌ ನಿರ್ವಹಣೆ ಕೊಠಡಿ, ನೆಲದಡಿಯ ಟ್ಯಾಂಕ್‌, ಕಾಂಕ್ರೀಟ್‌ ರಸ್ತೆ, ಕಾಂಪೌಂಡ್ ಇರಲಿದೆ.  

ಗುತ್ತಿಗೆದಾರರು ಕಾಲಹರಣ ಮಾಡದೇ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕೆಲಸವನ್ನು ವೇಗಗೊಳಿಸಬೇಕು. ತ್ವರಿತವಾಗಿ ಮಾರುಕಟ್ಟೆ ಆರಂಭಿಸಬೇಕು
ಹರೀಶ ಗುರುಶಾಂತಪ್ಪ ಕರೂರ ಚಳಗೇರಿ ರೈತ
ಹೈಟೆಕ್‌ ರೇಷ್ಮೆ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಡ ಕಾಮಗಾರಿ ಮುಗಿದ ಕೂಡಲೇ ರೇಷ್ಮೆ ಇಲಾಖೆಗೆ ಹಸ್ತಾಂತರಿಸಲಾಗುವುದು.
ಹುಸೈನಬಿ ಕೋಲಾರ ಪ್ರಭಾರಿ ಅಧಿಕಾರಿ ಕರ್ನಾಟಕ ಗೃಹ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.