ADVERTISEMENT

ಹಿಂದೂ–ಮುಸ್ಲಿಮರ ನಡುವೆ ಕೋಮುಸೌಹಾರ್ದ ಮೂಡಿಸಲು ಸೈಕಲ್‌ ಏರಿ ಹಜ್‌ ಯಾತ್ರೆ!

ಸಾಮರಸ್ಯ ಸಂದೇಶ ಸಾರುತ್ತಿರುವ ಬೆಂಗಳೂರಿನ ಮೊಹಮ್ಮದ್‌ ಹಬೀಬ್‌ ಖಾನ್‌

ಸಿದ್ದು ಆರ್.ಜಿ.ಹಳ್ಳಿ
Published 9 ಮಾರ್ಚ್ 2020, 7:31 IST
Last Updated 9 ಮಾರ್ಚ್ 2020, 7:31 IST
ಸೈಕಲ್‌ನಲ್ಲಿ ‘ಹಜ್‌ ಯಾತ್ರೆ’ ಕೈಗೊಂಡಿರುವ ಬೆಂಗಳೂರಿನ ಮೊಹಮ್ಮದ್‌ ಹಬೀಬ್‌ ಖಾನ್‌
ಸೈಕಲ್‌ನಲ್ಲಿ ‘ಹಜ್‌ ಯಾತ್ರೆ’ ಕೈಗೊಂಡಿರುವ ಬೆಂಗಳೂರಿನ ಮೊಹಮ್ಮದ್‌ ಹಬೀಬ್‌ ಖಾನ್‌   

ಹಾವೇರಿ: ಹಿಂದೂ–ಮುಸ್ಲಿಮರ ನಡುವೆ ಕೋಮುಸೌಹಾರ್ದ ಮತ್ತು ಶಾಂತಿ ಸಂದೇಶ ಸಾರಲು ಬೆಂಗಳೂರಿನಿಂದ ಮೆಕ್ಕಾ–ಮದೀನಾಗೆ ‘ಸೈಕಲ್‌ ಯಾತ್ರೆ’ ಕೈಗೊಂಡಿದ್ದಾರೆ ಬೆಂಗಳೂರಿನ ಮೊಹಮ್ಮದ್‌ ಹಬೀಬ್‌ ಖಾನ್‌.

ಮಾರ್ಚ್‌ 1ರಂದು ಬೆಂಗಳೂರಿನಿಂದ ಹೊರಟಿರುವ ಅವರು ತುಮಕೂರು, ಚಿತ್ರದುರ್ಗ, ದಾವಣಗೆರೆ ಮಾರ್ಗವಾಗಿ ಹಾವೇರಿ ತಲುಪಿದ್ದಾರೆ. ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಸಾಗಿ ಮಾರ್ಚ್‌ 11ರಂದು ಮುಂಬೈ ತಲುಪಲಿದ್ದಾರೆ. ಅಲ್ಲಿಂದ ಹಡಗು ಅಥವಾ ವಿಮಾನದ ಮೂಲಕ ದುಬೈ ತಲುಪಿ, ಮತ್ತೆ ಅಲ್ಲಿಂದ ಸೈಕಲ್‌ ಮೂಲಕ ಮೆಕ್ಕಾ–ಮದೀನಾಗೆ ಹೋಗುವ ಉದ್ದೇಶ ಹೊಂದಿದ್ದಾರೆ.

4,770 ಕಿ.ಮೀ. ಪ್ರಯಾಣ

ADVERTISEMENT

ಬೆಂಗಳೂರಿನಿಂದ ಮುಂಬೈ 984 ಕಿ.ಮೀ. ಮತ್ತು ದುಬೈನಿಂದ ಮೆಕ್ಕಾಗೆ 1,852 ಕಿ.ಮೀ ಸೇರಿದಂತೆ ಒಟ್ಟು 2,836 ಕಿ.ಮೀ. ದೂರವನ್ನು ಸೈಕಲ್‌ ಮೂಲಕ ಕ್ರಮಿಸಲಿದ್ದಾರೆ. ಒಟ್ಟಾರೆ 4,770 ಕಿ.ಮೀ. ಅಂತರವನ್ನು ಎರಡೂವರೆ ತಿಂಗಳಲ್ಲಿ ತಲುಪುವ ಗುರಿ ಇಟ್ಟುಕೊಂಡಿದ್ದಾರೆ.

ಶಿವಾಜಿನಗರದಲ್ಲಿ ಹಳೇ ಬೈಕ್‌ ಮತ್ತು ಕಾರುಗಳ ಉಪಕರಣಗಳ ವ್ಯಾಪಾರ ಮಾಡುವ ಹಬೀಬ್‌ ಖಾನ್‌ ಅವರು ತಿಂಗಳಿಗೆ ₹ 20 ಸಾವಿರ ದುಡಿಮೆ ಮಾಡುತ್ತಾರೆ. 42 ವರ್ಷದ ಅವರು ಅವಿವಾಹಿತರಾಗಿದ್ದು, ತಮ್ಮ ಸಹೋದರಿಯ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಎಸ್ಸೆಸ್ಸಲ್ಸಿ ಓದಿರುವ ಇವರಿಗೆ ಕನ್ನಡ, ಇಂಗ್ಲಿಷ್‌, ಉರ್ದು, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಆರು ಭಾಷೆಗಳು ಬರುತ್ತವೆ.

ಹೊಸ ಸೈಕಲ್‌ ಖರೀದಿ

‘ಫೆ.29ರಂದು ಬೆಂಗಳೂರಿನಲ್ಲಿ ₹ 15 ಸಾವಿರ ಕೊಟ್ಟು ಕೆ–ಕ್ರಾಸ್‌ ಎಂಬ ಹೊಸ ಸೈಕಲ್‌ ಅನ್ನು ಖರೀದಿಸಿದ್ದೇನೆ. ಪ್ರತಿನಿತ್ಯ 70ರಿಂದ 90 ಕಿ.ಮೀ. ಸೈಕಲ್‌ ತುಳಿಯುತ್ತಿದ್ದೇನೆ. ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಪ್ರಯಾಣ ಮಾಡಿ, ರಾತ್ರಿ ವೇಳೆ ದರ್ಗಾ, ಮಸೀದಿ, ಮದರಸಾಗಳಲ್ಲಿ ತಂಗುತ್ತೇನೆ. ನನ್ನ ಉದ್ದೇಶ ಅರಿತ ಹಿಂದೂ–ಮುಸ್ಲಿಂ ಬಾಂಧವರು ಊಟ, ಉಪಾಹಾರ ನೀಡುತ್ತಿದ್ದಾರೆ. ಜತೆಗೆ ಹಣದ ಸಹಾಯವನ್ನೂ ಮಾಡುತ್ತಾರೆ. ನನ್ನ ಪ್ರಯಾಣಕ್ಕೆ ವಕ್ಫ್‌ಬೋರ್ಡ್‌ನ ಅಕ್ಬರ್‌ ಸಾಹೇಬರು ನೆರವು ಅಪಾರ’ ಎನ್ನುತ್ತಾರೆ ಹಬೀಬ್‌ ಖಾನ್‌.

ಸೈಕಲ್‌ನ ಮುಂಭಾಗ ‘ಬೆಂಗಳೂರು ಟು ಹಜ್‌ ಬೈ ಸೈಕಲ್‌’ ಎಂಬ ನಾಮಫಲಕ ಮತ್ತು ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡಿದ್ದಾರೆ.

ದ್ವೇಷ ಮರೆತು ಪ್ರೀತಿ ಹಂಚಿ

‘ದಾರಿಯುದ್ದಕ್ಕೂ ಸಿಗುವ ಜನರು ನನ್ನ ನೋಡಿ ಕೈ ಬೀಸುತ್ತಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ. ಹಿಂದೂ–ಮುಸ್ಲಿಮರು ಅಣ್ಣ ತಮ್ಮಂದಿರಂತೆ ಸಹಬಾಳ್ವೆ ನಡೆಸಬೇಕು. ದ್ವೇಷ ಮರೆತು ಪ್ರೀತಿ ಹಂಚಬೇಕು ಎಂಬ ಸಂದೇಶವನ್ನು ನೀಡುತ್ತಿದ್ದೇನೆ. ಮೆಕ್ಕಾ–ಮದೀನಾಕ್ಕೆ ಹೋಗಿ, ದೇಶದ ಎಲ್ಲ ಬಾಂಧವರಿಗೆ ಒಳಿತಾಗಬೇಕು ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ’ ಎಂದು ಹಬೀಬ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.