ADVERTISEMENT

ಹಿರೇಕೆರೂರ | ನಿರ್ವಹಣೆ ಕೊರತೆ; ಸೊರಗಿದ ಉದ್ಯಾನ

ಹಿರೇಕೆರೂರು: ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಅಭಿವೃದ್ಧಿಗೆ ಜನರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:06 IST
Last Updated 19 ಜುಲೈ 2025, 4:06 IST
ಹಿರೇಕೆರೂರಿನ ಬಸವೇಶ್ವರ ನಗರದ ಉದ್ಯಾನದ ದುಸ್ಥಿತಿ
ಹಿರೇಕೆರೂರಿನ ಬಸವೇಶ್ವರ ನಗರದ ಉದ್ಯಾನದ ದುಸ್ಥಿತಿ   

ಹಿರೇಕೆರೂರ: ಪಟ್ಟಣದಲ್ಲಿರುವ ಬಹುತೇಕ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ದುಸ್ಥಿತಿಗೆ ತಲುಪಿವೆ. ಕಸ ಬೆಳೆದು, ಎಲ್ಲೆಂದರಲ್ಲಿ ನೀರು ನಿಂತು ಹಾಗೂ ಗಲೀಜು ಹೆಚ್ಚಾಗಿದ್ದರಿಂದ ಉದ್ಯಾನಗಳು ಅವ್ಯವಸ್ಥೆಯ ಆಗರಗಳಾಗಿವೆ.

ಪಟ್ಟಣದಲ್ಲಿ ಸುಮಾರು 15 ಸಾವಿರ ಜನಸಂಖ್ಯೆಯಿದ್ದು, ಹಲವರು ಬೆಳಿಗ್ಗೆ ಹಾಗೂ ಸಂಜೆ ವಾಯುವಿಹಾರ ಮಾಡಲು ಉದ್ಯಾನಗಳನ್ನು ಅವಲಂಬಿಸಿದ್ದಾರೆ. ಉದ್ಯಾನಗಳು ದುಸ್ಥಿತಿಯಲ್ಲಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ರೈತರು ಹೆಚ್ಚಾಗಿರುವ ಪಟ್ಟಣದಲ್ಲಿ ವ್ಯಾಪಾರಿಗಳು, ಶಿಕ್ಷಕರು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ವಾಸವಿದ್ದಾರೆ. ದೈನಂದಿನ ಜೀವನದ ಒತ್ತಡಗಳನ್ನು ಮರೆತು ಪ್ರಶಾಂತ ವಾತಾವರಣದಲ್ಲಿ ಕೆಲ ಹೊತ್ತು ವಾಯುವಿಹಾರ ನಡೆಸಬೇಕೆಂದರೆ, ಪಟ್ಟಣದಲ್ಲಿರುವ ಸಾರ್ವಜನಿಕ ಉದ್ಯಾನಗಳು ಹದಗೆಟ್ಟ ಸ್ಥಿತಿಗೆ ತಲುಪಿವೆ. ಉದ್ಯಾನಗಳು ಅಸುರಕ್ಷಿತ ತಾಣಗಳಾಗಿರುವುದರಿಂದ, ಜನರು ರಸ್ತೆ ಮೇಲೆಯೇ ವಾಯುವಿಹಾರ ಮಾಡುತ್ತಿದ್ದಾರೆ.

ADVERTISEMENT

ಪಟ್ಟಣದಲ್ಲಿ ಹಲವು ಬಡಾವಣೆಗಳು ತಲೆ ಎತ್ತಿವೆ. ಅಲ್ಲೆಲ್ಲ ಉದ್ಯಾನಕ್ಕೆಂದು ಪ್ರತ್ಯೇಕ ಜಾಗ ಮೀಸಲಿರಿಸಲಾಗಿದ್ದು, ಎಲ್ಲಿಯೂ ಸುಸಜ್ಜಿತ ವ್ಯವಸ್ಥೆಯಿಲ್ಲ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯಾನಗಳು, ಸೌಲಭ್ಯಗಳಿಂದ ವಂಚಿತವಾಗಿದೆ. ಕೇವಲ ಕಾಗದದಲ್ಲಿ ಮಾತ್ರ ಉದ್ಯಾನಗಳ ನಿರ್ವಹಣೆ ಆಗುತ್ತಿದ್ದು, ನಿರ್ವಹಣೆ ವಿಚಾರದಲ್ಲಿಯೂ ಅಕ್ರಮ ನಡೆಯುತ್ತಿರುವ ಆರೋಪ ವ್ಯಕ್ತವಾಗುತ್ತಿದೆ.

ಮಕ್ಕಳ ಆಟಿಕೆಗಳು ಹಾಳು: ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳು ಮುರಿದು ಹೋಗಿವೆ. ನಡಿಗೆ ಪಥಗಳಲ್ಲಿರುವ ಕಾಂಕ್ರಿಟ್ ಇಟ್ಟಿಗೆಗಳು ಕಿತ್ತು ಹೋಗಿವೆ. ಹಿರಿಯರ ವಿಶ್ರಾಂತಿಗೆ ಕುಳಿತುಕೊಳ್ಳಲು ನಿರ್ಮಿಸಿದ ಸಿಮೆಂಟ್ ಕುರ್ಚಿಗಳು ಹಾಳಾಗಿವೆ. ಕನಿಷ್ಠ ಮೂಲ ಸೌಕರ್ಯಗೂ ಮರಿಚಿಕೆಯಾಗಿದೆ. 

ಪಟ್ಟಣದ ಬಸವೇಶ್ವರ ನಗರ, ಜಿ.ಬಿ. ಶಂಕರರಾವ್ ವೃತ್ತ ಹಾಗೂ ಇತರೆ ಓಣಿಗಳಲ್ಲಿರುವ ಉದ್ಯಾನಗಳಲ್ಲಿ ಹುಲ್ಲು ಬೆಳೆದು, ಜಮೀನಿನಂತಾಗಿದೆ. ಸುಣ್ಣ–ಬಣ್ಣವಿಲ್ಲದೇ ಉದ್ಯಾನಗಳ ಗೋಡೆಗಳು ಅಂದ ಕಳೆದುಕೊಂಡಿವೆ.  ಉದ್ಯಾನ ಎದುರಿನ ರಸ್ತೆಯೂ ಕೆಸರಿನಿಂದ ಆವರಿಸಿದೆ. ಉದ್ಯಾನಗಳು ಕೆಲವ ಮೂತ್ರ ವಿಸರ್ಜನೆಗೆ ತಾಣಗಳಾಗಿ ಮಾರ್ಪಟ್ಟಿವೆ.

‘ಉದ್ಯಾನಗಳ ನಿರ್ವಹಣೆ ಇಲ್ಲದಿರುವುದರಿಂದ, ಹುಳುಗಳು ಹಾಗೂ ಹಾವುಗಳು ಓಡಾಡುತ್ತಿವೆ. ಇದರಿಂದಾಗಿ ಜನರು ಉದ್ಯಾನಗಳಲ್ಲಿ ಕಾಲಿಡಲು ಭಯಪಡುವ ಸ್ಥಿತಿಯಿದೆ. ಕೆಲವರು ಉದ್ಯಾನಗಳಲ್ಲಿಯೇ ಕುರಿ, ಆಕಳು ಮತ್ತು ಜಾನುವಾರು ಮೇಯಿಸುತ್ತಿದ್ದಾರೆ’ ಎಂದು ಜನರು ದೂರಿದರು.

ಶಂಕರರಾವ್ ವೃತ್ತದಲ್ಲಿರುವ ದುರ್ಗಾದೇವಿ ಉದ್ಯಾನದ ಬೇಲಿ ತುಕ್ಕು ಹಿಡಿದಿದೆ. ಈ ಉದ್ಯಾನದಲ್ಲಿ ಹಾಕಲಾಗಿರುವ ಬಣ್ಣದ ಸಿಮೆಂಟ್ ಬೆಂಚ್‌ಗಳು ಮುರಿದಿವೆ. ರಾತ್ರಿ ವೇಳೆ ಉದ್ಯಾನದಲ್ಲಿ ಕೆಲವರು ಮದ್ಯದ ಪಾರ್ಟಿ ಮಾಡುತ್ತಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ.

‘ಪಟ್ಟಣ ಪಂಚಾಯತಿಯವರು ಉದ್ಯಾನ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಲೇ ಉದ್ಯಾನಗಳು ಹಾಳಾಗಿವೆ. ಉದ್ಯಾನ ನಿರ್ವಹಣೆ ಅನುದಾನವನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪವಿದೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಜನರು ಆಗ್ರಹಿಸಿದರು.

ಹಿರೇಕೆರೂರಿನ ಜೆ.ಬಿ.ಶಂಕರರಾವ್ ವೃತ್ತದಲ್ಲಿರುವ ಉದ್ಯಾನದಲ್ಲಿ ಕುರಿ ಮೇಯಿಸುತ್ತಿರುವುದು

- ಉದ್ಯಾನಗಳಲ್ಲಿ ಹುಳು–ಹಾವು ವಾಯುವಿಹಾರಕ್ಕೆ ತೊಂದರೆ ಮಕ್ಕಳ ಆಟಿಕೆಗಳು ಹಾಳು

ಹೆಸರಿಗಷ್ಟೇ ಉದ್ಯಾನಗಳಿವೆ. ನಿರ್ವಹಣೆ ಮಾತ್ರೆ ಆಗುತ್ತಿಲ್ಲ. ಉದ್ಯಾನಗಳ ನಿರ್ವಹಣೆಗೆ ಪಟ್ಟಣ ಪಂಚಾಯಿತಿ ಗಮನನ ಹರಿಸಬೇಕು

-ದೇವೆಂದ್ರಪ್ಪ ಹಿರೇಕೆರೂರು ನಿವಾಸಿ

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಉದ್ಯಾನಗಳಿದ್ದು ನಿರ್ವಹಣೆ ಜವಾಬ್ದಾರಿಯನ್ನು ಸ್ತ್ರೀಶಕ್ತಿ ಸಂಘಗಳಿಗೆ ವಹಿಸಲಾಗಿದೆ. ನಿರ್ವಹಣೆ ಅನುದಾನವೂ ಸಂಘಗಳಿಗೆ ನಿಡುತ್ತಿದ್ದೇವೆ  ಕೋಡಿ ಭೀಮರಾಯ ಎನ್. -ಟಿ. ಮುಖ್ಯಾಧಿಕಾರಿ ಹಿರೇಕೆರೂರು ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.