
ಹಿರೇಕೆರೂರ: ತಾಲ್ಲೂಕಿನ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ಹಲವು ಗ್ರಾಮಗಳ ಜನರು ಶುದ್ಡಿ ಧಯುವ ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶದ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಕುಡಿಯಲೆಂದು ಸರ್ಕಾರ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಆದರೆ, ಬಹುತೇಕ ಕಡೆ ಯಂತ್ರಗಳು ಕೆಟ್ಟಿವೆ.
ಚನ್ನಳ್ಳಿ , ಸೇವಾಲಾಲ್ ನಗರ ತಾಂಡಾ ಮತ್ತು ವರಹ ಗ್ರಾಮದಲ್ಲಿ ಘಟಕ ಕೆಟ್ಟು ವರ್ಷಗಳೇ ಕಳೆದಿದೆ. ಅಧಿಕಾರಿಗಳು ಗ್ರಾಮದ ಕಡೆ ಮುಖ ಮಾಡಿಲ್ಲ. ಈ ಎರಡು ಗ್ರಾಮದವರು ಶುದ್ಧ ಕುಡಿಯುವ ನೀರು ಕುಡಿಯಲು ತರಲು 3 ಕಿ.ಮೀ.ನಿಂದ 5 ಕಿ.ಮೀ. ದೂರದ ಹಿರೇಕೆರೂರು ಪಟ್ಟಣಕ್ಕೆ ಹೋಗಬೇಕಾಗಿದೆ. ಪ್ರತಿದಿನವೂ ಕೆಲಸ ಬಿಟ್ಟು ದೂರದ ಊರುಗಳಿಗೆ ಅಲೆಯುವಂತಾಗಿದೆ.
ಯಂತ್ರಗಳನ್ನು ದುರಸ್ತಿಗೊಳಿಸದೇ ಆಡಳಿತ ವರ್ಗದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಿರೇಕೆರೂರ ತಾಲೂಕಿನ ಚನ್ನಳ್ಳಿ ಗ್ರಾಪಂ ವ್ಯಾಪ್ತಿಯ ಚನ್ನಳ್ಳಿ , ಸೇವಾಲಾಲ್ ನಗರ ತಾಂಡಾ ಮತ್ತು ವರಹ ಗ್ರಾಮದಲ್ಲಿ ಪ್ಲೋರೈಡ್ ಅಂಶ ಅಧಿಕವಾಗಿದೆ. ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ನಿತ್ಯವೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಯಂತ್ರಗಳು ಕೆಟ್ಟ ಬಳಿಕ ಕೇಳುವವರೇ ಇಲ್ಲ. ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾಪಂಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಜಿ.ಪಂ. ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಶಾಸಕರ ಗಮನಕ್ಕೆ ತಂದರೂ ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮದ ಹಿರಿಯರು ಆರೋಪಿಸಿದ್ದಾರೆ.
ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಅಸಮರ್ಪಕ ನಿರ್ವಹಣೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಹೆಸರಿಗಷ್ಟೇ ಶುದ್ಧ ನೀರಿನ ಘಟಕಗಳಿವೆ. ಅಲ್ಲಿ ನೀರು ಬರುತ್ತಿಲ್ಲ. ಪ್ರತಿ ಗ್ರಾಮದಲ್ಲೂ ಇಂಥದ್ದೇ ಪರಿಸ್ಥಿತಿ ಇದೆ. ದುರಸ್ತಿ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದು ನಿವಾಸಿಗಳು ಪ್ರಜಾವಾಣಿಗೆ ತಿಳಿಸಿದ್ದಾರೆ.
ನೀರಿನ ಘಟಕವನ್ನು ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಹಾಳಾಗಿರುವ ಕಾರಣ ಕುಡಿಯುವ ನೀರಿಗಾಗಿ ಅಲೇಯಬೇಕಿದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಘಟಕ ದುರಸ್ತಿಯಾದರೆ ಸುತ್ತಮುತ್ತಲಿನ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ
– ಚಂದ್ರಪ್ಪ ಬಿ ಲಮಾಣಿ ಸೇವಾಲಾಲ್ ನಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.