ADVERTISEMENT

ಐತಿಹಾಸಿಕ ತುಂಗಾರತಿ ಜ.23, 24ರಂದು

ಪುಣ್ಯಕೋಟಿ ಮಠದಲ್ಲಿ ಭಿತ್ತಿಪತ್ರ ಬಿಡುಗಡೆ: 20 ಕಲಾ ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 3:00 IST
Last Updated 2 ಜನವರಿ 2022, 3:00 IST
ಕುಮಾರಪಟ್ಟಣ ಸಮೀಪದ ಕೊಡಿಯಾಲ ಗ್ರಾಮದ ಪುಣ್ಯಕೋಟಿ ಮಠದ ಆವರಣದಲ್ಲಿ ಶನಿವಾರ ತುಂಗಾರತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅರುಣಕುಮಾರ ಪುಜಾರ ಭಿತ್ತಿಪತ್ರ ಬಿಡುಗಡೆ ಮಾಡಿದರು
ಕುಮಾರಪಟ್ಟಣ ಸಮೀಪದ ಕೊಡಿಯಾಲ ಗ್ರಾಮದ ಪುಣ್ಯಕೋಟಿ ಮಠದ ಆವರಣದಲ್ಲಿ ಶನಿವಾರ ತುಂಗಾರತಿ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅರುಣಕುಮಾರ ಪುಜಾರ ಭಿತ್ತಿಪತ್ರ ಬಿಡುಗಡೆ ಮಾಡಿದರು   

ಕುಮಾರಪಟ್ಟಣ: ‘ಉತ್ತರ ಭಾರತದ ಗಂಗಾ ನದಿಗೆ ‘ಗಂಗಾರತಿ’ ಪರಂಪರಾಗತವಾಗಿ ನಡೆಯುತ್ತಾ ಬಂದಿದೆ. ಅದೇ ಮಾದರಿಯಲ್ಲಿ ದಕ್ಷಿಣ ಭಾರತದ ಕೊಡಿಯಾಲ ಗ್ರಾಮದ ಪುಣ್ಯಕೋಟಿ ಮಠದ ವತಿಯಿಂದ ತುಂಗಭದ್ರಾ ನದಿ ತೀರದಲ್ಲಿ 3ನೇ ವರ್ಷದ ‘ತುಂಗಾರತಿ’ ನಡೆಯುತ್ತಿದೆ’ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಸಮೀಪದ ಕೊಡಿಯಾಲ ಗ್ರಾಮದ ಪುಣ್ಯಕೋಟಿ ಮಠದಲ್ಲಿ ಶನಿವಾರ 3ನೇ ತುಂಗಾರತಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಭಿತ್ತಿಪತ್ರ ಬಿಡುಗಡೆ ಹಾಗೂ ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಿಸರ್ಗ ಮಾತೆಯ ಸಂರಕ್ಷಣೆಗೆ ಪುಣ್ಯಕೋಟಿ ಮಠ ಮುನ್ನುಡಿ ಬರೆದಿದೆ ಎಂದರು.

ಶ್ರೀಮಠದ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯಿಂದ ₹50 ಲಕ್ಷ ಮಂಜೂರು ಮಾಡಿಸುವ ಭರವಸೆ ನೀಡಿದರಲ್ಲದೆ, ₹3 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಲಿದೆ. ಮಠದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತೇನೆ ಎಂದರು.

ADVERTISEMENT

ವಿಧಾನ ಪರಿಷತ್‌ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ರಾಣೆಬೆನ್ನೂರಿನ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮಹಿಳೆಯರಿಗೆ ಒಂದು ಸಾವಿರ ಹಸಿರು ಇಳಕಲ್‌ ಸೀರೆ ಮತ್ತು ಪುರುಷರಿಗೆ ಕೇಸರಿ ಶಾಲು ವಿತರಿಸಲಾಯಿತು.

ವಿಜಯ ಸಂಕಲ್ಪ ಯಾತ್ರೆ

ಜ.23 ಮತ್ತು 24ರಂದು ಪುಣ್ಯಕೋಟಿ ಬಳಿ ತುಂಗಭದ್ರಾ ನದಿ ದಂಡೆಯಲ್ಲಿ 3ನೇ ವರ್ಷದ ಐತಿಹಾಸಿಕ ತುಂಗಾರತಿ ಕಾರ್ಯಕ್ರಮ ಮತ್ತು ಗೋಮಾತಾ ಸಂರಕ್ಷಣಾ ವಿಜಯ ಸಂಕಲ್ಪ ಯಾತ್ರೆ ಜರುಗಲಿದೆ.

ಹರಿಹರದ ಹರಿಹರೇಶ್ವರ ದೇವಸ್ಥಾನದಿಂದ ಸಾರೋಟೋತ್ಸವ ಪ್ರಾರಂಭಗೊಂಡು ಕುಮಾರಪಟ್ಟಣದ ವಾಲ್ಮೀಕಿ ವೃತ್ತದ ಮೂಲಕ ವೇದಿಕೆ ತಲುಪಲಿದೆ. ಹುತಾತ್ಮ ಯೋಧರು, ಕೊರೊನಾ ಸೇನಾನಿಗಳು, ಗೋಮಾತೆ, ಅನ್ನದಾತರ ಭಾವಚಿತ್ರಗಳನ್ನು ನಾಲ್ಕು ಆನೆಗಳು ಹೊತ್ತು ಸಾಗಲಿವೆ. ನಾಡಿನ 20ಕ್ಕೂ ಹೆಚ್ಚು ಕಲಾ ತಂಡಗಳು ಪಾಲ್ಗೊಳ್ಳಲಿವೆ.

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಲಿದ್ದು, ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ರಾಣೆಬೆನ್ನೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ವಕೀಲ ಎಸ್‌.ಎಸ್‌.ರಾಮಲಿಂಗಣ್ಣನವರ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ನಾಗರಾಜ ಹಳ್ಳೆಳ್ಳಪ್ಪನವರ, ಗಿರೀಶಪ್ಪ ಹೆಗ್ಗಪ್ಪನವರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್‌ ಮಂಜಣ್ಣ ಪೂಜಾರ, ಅರಣ್ಯ ನಿಗಮ ನಿರ್ದೇಶಕಿ ಭಾರತಿ ಜಂಬಗಿ, ವಾಲ್ಮೀಕಿ ನಿಗಮ ನಿರ್ದೇಶಕ ಬಸವರಾಜ ಚಳಗೇರಿ, ಮಂಜುನಾಥ ಗೌಡಶಿವಣ್ಣನವರ, ಯುವ ಮುಖಂಡ ಪವನಕುಮಾರ ಮಲ್ಲಾಡದ, ನಗರಸಭೆ ಸದಸ್ಯೆ ಪ್ರಭಾವತಿ ತಿಳವಳ್ಳಿ, ಸಿದ್ದಪ್ಪ ಚಿಕ್ಕಬಿದರಿ, ಮಲ್ಲಜ್ಜ ಹೆಗ್ಗಪ್ಪನವರ, ಕರಿಯಪ್ಪ ಮಾಳಗೇರ, ಚರಣರಾಜ್‌ ಅಂಗಡಿ, ಗುರುಪ್ರಸಾದ್‌ ಆನ್ವೇರಿ, ಗ್ರಾ.ಪಂ ಸದಸ್ಯರು, ಹರಿಹರ, ಕೊಡಿಯಾಲ ಮತ್ತು ರಾಣೆಬೆನ್ನೂರಿನ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.