ಹಾವೇರಿ: ಅಳಿದುಳಿದ ಸೀರೆ– ತಗಡಿನಲ್ಲಿ ನಿರ್ಮಿಸಿದ ಶೆಡ್‌ಗಳು. ಮಳೆಗಾಲ ಬಂದರೆ ಶೆಡ್‌ನೊಳಗೆ ನುಗ್ಗುವ ನೀರು. ಅಕ್ಕ–ಪಕ್ಕದ ಗಲೀಜಿನಿಂದ ಹೆಚ್ಚಾದ ಸಾಂಕ್ರಾಮಿಕ ರೋಗಗಳು. ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳು– ವೃದ್ಧರು. ಮತದಾನದ ಹಕ್ಕಿದ್ದರೂ ಸಿಗದ ನಾಗರಿಕ ಸೌಲಭ್ಯಗಳು. ಕುಲ ಕಸುಬು ನಂಬಿ ಬದುಕು ಕಟ್ಟಿಕೊಂಡರೂ ದಕ್ಕದ ಸುರಕ್ಷಿತ ಸೂರು....
ಇಲ್ಲಿಯ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದ ಬಯಲು ಪ್ರದೇಶದಲ್ಲಿ ಶೆಡ್ ಹಾಗೂ ಜೋಪಡಿ ಕಟ್ಟಿಕೊಂಡು ವಾಸವಿರುವ ‘ಸುಡುಗಾಡು ಸಿದ್ಧರು’ ಅಲೆಮಾರಿ ಸಮುದಾಯದವರ ಬದುಕಿನ ವ್ಯಥೆಯಿದು.
ಶಾಂತಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿ ಶೆಡ್–ಜೋಪಡಿ ನಿರ್ಮಿಸಿಕೊಂಡು ಸುಮಾರು ವರ್ಷಗಳಿಂದ ವಾಸವಿದ್ದ ಸುಡುಗಾಡು ಸಿದ್ಧರ 33 ಕುಟುಂಬಗಳನ್ನು, ಪುನರ್ ವಸತಿ ಭರವಸೆ ನೀಡಿ ಎರಡೂವರೆ ವರ್ಷದ ಹಿಂದೆಯೇ ತೆರವು ಮಾಡಲಾಗಿತ್ತು. ಅದೇ ಸ್ಥಳದಲ್ಲಿ ಜಿ+1 ಮನೆಗಳ ನಿರ್ಮಾಣ ಕೆಲಸ ಆರಂಭವಾಗಿದ್ದು, ಇದುವರೆಗೂ ಕಾಮಗಾರಿ ಮುಗಿದಿಲ್ಲ. ನಾನಾ ಕಾರಣಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಈ ವರ್ಷವೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ಕಾಮಗಾರಿ ಸ್ಥಳದಲ್ಲಿ ಸಾಲಾಗಿ ಜಿ+1 ಮನೆಗಳನ್ನು ನಿರ್ಮಿಸಲಾಗಿದ್ದು, ಸಿಮೆಂಟ್ ಕೆಲಸ ನಡೆದಿದೆ. ಕೆಲ ಮನೆಗಳ ಸಿಮೆಂಟ್ ಕೆಲಸ ಮುಗಿದಿದ್ದು, ಬಣ್ಣ ಹಾಗೂ ಬಾಕಿ ಕೆಲಸಗಳು ಆಗಬೇಕಿದೆ. ಸರ್ಕಾರದ ಬಿಲ್ ಪಾವತಿಯಲ್ಲಿಯೂ ವಿಳಂಬವಾಗುತ್ತಿರುವ ಮಾತುಗಳು ಕೇಳಿಬರುತ್ತಿದ್ದು, ಅದರಿಂದಲೂ ಕೆಲಸ ಅರ್ಧಕ್ಕೆ ನಿಂತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮುಂದೊಂದು ದಿನ ತಮಗೆ ಸ್ವಂತ ಸೂರು ಸಿಗಬಹುದೆಂಬ ಭರವಸೆಯಲ್ಲಿಯೇ ಸುಡುಗಾಡು ಸಿದ್ಧರು ಖಾಸಗಿ ವ್ಯಕ್ತಿಗಳ ಜಾಗಗಳಲ್ಲಿ ಶೆಡ್– ಜೋಪಡಿ ನಿರ್ಮಿಸಿಕೊಂಡು ವಾಸವಿದ್ದಾರೆ. ಸುಡುಗಾಡು ಸಿದ್ಧರ ಸ್ವಂತ ಸೂರಿನ ಭರವಸೆ ಈಡೇರಿಸುವಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ವಿಫಲವಾಗಿರುವ ಆರೋಪ ವ್ಯಕ್ತವಾಗುತ್ತಿದೆ.
‘ಅಂದಿನ ಶಾಸಕ ಬಸವರಾಜ ಶಿವಣ್ಣನವರ ಮಾತಿನಂತೆ ಶಾಂತಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಸುಮಾರು ವರ್ಷಗಳಿಂದ ವಾಸವಿದ್ದೆವು. ಅದೇ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಹೇಳಿದ್ದ ಅಧಿಕಾರಿಗಳು, ನಮ್ಮನ್ನು ಸ್ಥಳದಿಂದ ತೆರವು ಮಾಡಿದರು. ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ಸಹ ನೀಡಿದ್ದರು. ಅವರ ಮಾತು ನಂಬಿ ನಾವೆಲ್ಲರೂ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಶೆಡ್–ಜೋಪಡಿ ಕಟ್ಟಿಕೊಂಡು ಮೂರು ವರ್ಷಗಳಿಂದ ವಾಸವಿದ್ದೇವೆ. ಆದರೆ, ಇದುವರೆಗೂ ಸ್ವಂತ ಮನೆ ಸಿಕ್ಕಿಲ್ಲ’ ಎಂದು ಸುಡುಗಾಡು ಸಿದ್ಧರು ಸಮುದಾಯದ ರಾಜೇಶ ಬಾದಗಿ ಅಳಲು ತೋಡಿಕೊಂಡರು.
‘ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಈಗ ನಾವು ವಾಸವಿದ್ದೇವೆ. ಅವರು ಸಹ, ಜಾಗ ಖಾಲಿ ಮಾಡುವಂತೆ ಪದೇ ಪದೇ ಹೇಳುತ್ತಿದ್ದಾರೆ. ನಾವು ಅವರ ಕೈ–ಕಾಲು ಹಿಡಿದು, ವಾಸ್ತವ್ಯ ಮುಂದುವರಿಸಿದ್ದೇವೆ. ಸರ್ಕಾರಿ ಜಾಗದಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ನಮಗೆ ತ್ವರಿತವಾಗಿ ಹಸ್ತಾಂತರಿಸಬೇಕು. ನಮ್ಮ ಹೆಸರಿಗೆ ಪಟ್ಟಾ ನೀಡಬೇಕು. ಸೌಲಭ್ಯವಿಲ್ಲದಿದ್ದರೂ ಸುರಕ್ಷಿತವಾದ ಸ್ವಂತ ಸೂರು ಇದೆಯೆಂದು ನೆಮ್ಮದಿಯಿಂದ ಬದುಕುತ್ತೇವೆ’ ಎಂದು ಆಗ್ರಹಿಸಿದರು.
20 ವರ್ಷಗಳಿಂದ ಶೆಡ್ ವಾಸ: ‘ಬಣ್ಣ ಬಣ್ಣದ ವೇಷವನ್ನು ಧರಿಸಿಕೊಂಡು, ತಲೆಗೆ ಪೇಟಾ ಮತ್ತು ಮುಖಕ್ಕೆ ವಿಭೂತಿ, ಕುಂಕುಮ ಹಚ್ಚಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಒಂದು ಕೈಯಲ್ಲಿ ಕೋಲು, ಶಂಖ ಮತ್ತೊಂದು ಕೈಯಲ್ಲಿ ಜಾಗಟೆಯನ್ನು ಹಿಡಿದುಕೊಂಡು ಸಂಚರಿಸುವ ಸುಡುಗಾಡು ಸಿದ್ಧರು ನಾವು. ಅಲೆಮಾರಿಗಳಾದರೂ ಮಕ್ಕಳ ಶಿಕ್ಷಣಕ್ಕಾಗಿ ಒಂದೇ ಕಡೆ ನೆಲೆಸಬೇಕೆಂಬ ಆಸೆ ನಮ್ಮದಾಗಿದೆ’ ಎಂದು ರಾಜೇಶ ಬಾದಗಿ ಹೇಳಿದರು.
‘ನಮ್ಮ ತಂದೆ–ತಾಯಿ ಕಾಲದಿಂದಲೂ ನಾವು ಹಾವೇರಿ ಜಿಲ್ಲೆಯಲ್ಲಿ ಸುತ್ತಾಡುತ್ತಿದ್ದೇವೆ. 20 ವರ್ಷಗಳ ಹಿಂದೆ ನಾವೆಲ್ಲರೂ ಹಾವೇರಿಯ ಅಶ್ವಿನಿನಗರದಲ್ಲಿ ಶೆಡ್ ನಿರ್ಮಿಸಿಕೊಂಡು ವಾಸವಿದ್ದೆವು. ಮನೆಗಳ ನಿರ್ಮಾಣಕ್ಕಾಗಿ ನಮ್ಮನ್ನು ಅಲ್ಲಿಂದ ತೆರವು ಮಾಡಿದರು. ನಂತರ, ದಾನೇಶ್ವರಿನಗರಕ್ಕೆ ಹೋದೆವು. ಅಲ್ಲಿಂದಲೂ ನಮ್ಮನ್ನು ತೆರವುಗೊಳಿಸಿದರು. ಅದೇ ಸಮಯದಲ್ಲಿ ಶಾಸಕ ಬಸವರಾಜ ಶಿವಣ್ಣನವರ ನಮ್ಮ ನೆರವಿಗೆ ಬಂದರು. ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿರುವ ಸರ್ಕಾರಿ ಜಾಗದಲ್ಲಿ ವಾಸವಿರುವಂತೆ ಹೇಳಿದರು. ಅವರ ಮಾತಿನಂತೆ ಶಾಂತಿನಗರಕ್ಕೆ ಬಂದೆವು’ ಎಂದು ತಿಳಿಸಿದರು.
‘ನಾವು ಶಾಂತಿನಗರಕ್ಕೆ ಬಂದಾಗ, ಏನೂ ಇರಲಿಲ್ಲ. ಕಾಡಿನ ರೀತಿಯ ವಾತಾವರಣವಿತ್ತು. ನಾವೇ ಎಲ್ಲವನ್ನೂ ಸ್ವಚ್ಛ ಮಾಡಿಕೊಂಡು ವಾಸವಾಗಿದ್ದೆವು. ಮೂರು ವರ್ಷಗಳ ಹಿಂದೆ ನಮ್ಮ ಬಳಿ ಬಂದಿದ್ದ ಅಧಿಕಾರಿಗಳು, ‘ಈ ಜಾಗದಲ್ಲಿ ಜಿ+1 ಮನೆ ಕಟ್ಟಿ ಕೊಡುತ್ತೇವೆ. ನೀವು ಇಲ್ಲಿಂದ ಬೇರೆಡೆ ಹೋಗಿ’ ಎಂದಿದ್ದರು. ಅವರ ಮಾತು ನಂಬಿ, ಖಾಸಗಿ ಜಾಗಕ್ಕೆ ಬಂದು ಶೆಡ್–ಜೋಪಡಿಯಲ್ಲಿ ಉಳಿದುಕೊಂಡಿದ್ದೇವೆ. ಆದರೆ, ಇದುವರೆಗೂ ನಮಗೆ ಮನೆ ನೀಡಿಲ್ಲ’ ಎಂದು ಹೇಳಿದರು.
ಬ್ಯಾಂಕ್ ಸಾಲ ಪ್ರಕ್ರಿಯೆ ಪೂರ್ಣ: ‘ಸುಡುಗಾಡು ಸಿದ್ಧರ 33 ಕುಟುಂಬಗಳಿವೆ ಮನೆ ನೀಡಬೇಕು. ಜಿ+1 ಮನೆಗಳ ಹಸ್ತಾಂತರಕ್ಕೆ ಫಲಾನುಭವಿಗಳಿಂದ ₹ 1 ಲಕ್ಷ ಹಾಗೂ ಬ್ಯಾಂಕ್ ಸಾಲದಿಂದ ₹ 2.20 ಲಕ್ಷ ಸಂಗ್ರಹಿಸಲಾಗುತ್ತಿದೆ. ಬ್ಯಾಂಕ್ ಸಾಲ ಪ್ರಕ್ರಿಯೆ ಸಹ ಮುಗಿದಿದ್ದು, ನಾವೆಲ್ಲರೂ ಬಾಂಡ್ ಮೇಲೆ ಸಹಿ ಮಾಡಿಕೊಟ್ಟಿದ್ದೇವೆ. ಮನೆ ಹಸ್ತಾಂತರವಾದ ನಂತರ, ತಿಂಗಳ ಕಂತು ತುಂಬುವ ಭರವಸೆಯನ್ನೂ ನೀಡಿದ್ದೇವೆ’ ಎಂದು ಹುಸೇನಪ್ಪ ಬಾದಗಿ ತಿಳಿಸಿದರು.
‘ನಾವು ದುಡಿಮೆ ನಂಬಿ ಬದುಕುವ ಜನ. ಹಣ ಕೂಡಿ ಇಡುವಷ್ಟು ಶ್ರೀಮಂತರಲ್ಲ. ನಮ್ಮ ಬಳಿ ₹ 1 ಲಕ್ಷ ಎಲ್ಲಿಂದ ಬರಬೇಕು. ನಮ್ಮಿಂದ ಹಣ ನೀಡಲು ಆಗುವುದಿಲ್ಲವೆಂದು ಹೇಳಿದ್ದೆವು. ಇದೇ ಕಾರಣಕ್ಕೆ ಅಲೆಮಾರಿ ಅಭಿವೃದ್ಧಿ ನಿಗಮವು ನಮಗೆ ಸಹಾಯ ಮಾಡಿದೆ. ಪ್ರತಿ ಕುಟುಂಬದ ವಂತಿಗೆಯನ್ನು ನಿಗಮವೇ ಸರ್ಕಾರಕ್ಕೆ ಭರಿಸಿದೆ. ಹಣ ಸಂದಾಯವಾದರೂ ಮನೆಗಳ ಹಸ್ತಾಂತರವಾಗದಿರುವುದು ನೋವು ತರಿಸಿದೆ’ ಎಂದು ಅಳಲು ತೋಡಿಕೊಂಡರು.
‘ಬಯಲು ಪ್ರದೇಶದಲ್ಲಿ ಶೆಡ್– ಜೋಪಡಿ ನಿರ್ಮಿಸಿಕೊಂಡು ವಾಸವಿರುವ ನನ್ನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಸ್ವಚ್ಛ ಪರಿಸರವಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಸೊಳ್ಳೆಗಳು ಹಾಗೂ ವಿಷ ಜಂತುಗಳ ಹಾವಳಿಯೂ ವಿಪರೀತವಾಗಿದೆ. ಮಳೆ ಬಂದರೆ, ಶೆಡ್‌ನೊಳಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗುತ್ತದೆ. ಮಳೆಗಾಲ ಬಂದರೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಅಲೆಮಾರಿ ಪಟ್ಟ ಕಳಚಿ, ಸ್ವಂತ ಸೂರಿನಲ್ಲಿ ವಾಸವಿರಬೇಕೆಂಬ ನಮ್ಮ ಬೇಡಿಕೆ ಇಂದಿಗೂ ಈಡೇರುತ್ತಿಲ್ಲ’ ಎಂದು ಹೇಳಿದರು.
ಮಳೆಗಾಲದಲ್ಲಿ ನರಕ ಯಾತನೆ: ‘ಬಯಲು ಪ್ರದೇಶದಲ್ಲಿ ಶೆಡ್– ಜೋಪಡಿಯಲ್ಲಿ ವಾಸವಿರುವ ನಾವು, ಮಳೆಗಾಲ ಬಂದರೆ ನರಕಯಾತನೆ ಅನುಭವಿಸುತ್ತಿದ್ದೇವೆ. ಶೆಡ್‌ನೊಳಗೆ ನೀರು ನುಗ್ಗುತ್ತದೆ. ನೀರಿನ ಜೊತೆ ಹಾವು, ಚೇಳುಗಳು ಒಳಗೆ ಬರುತ್ತವೆ’ ಎಂದು ಫಲಾನುಭವಿ ಗಂಗಾಧರ ಬಾದಗಿ ಅಳಲು ತೋಡಿಕೊಂಡರು.
‘ಕಳೆದ ಮುಂಗಾರಿನಲ್ಲಿ ಹೆಚ್ಚು ಮಳೆಯಾಗಿ, ಶೆಡ್‌ನೊಳಗೆ ನೀರು ನುಗ್ಗಿತ್ತು. ಶೆಡ್‌ಗಳು ಸಹ ಕಳಚಿ ಬಿದ್ದಿದ್ದವು. ಮಕ್ಕಳು–ವೃದ್ಧರ ಸಮೇತ ಅವರಿವರ ಜಾಗದಲ್ಲಿ ಮಲಗಿ ದಿನ ಕಳೆದೆವು. ಮಳೆ ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾಗಿ ವೃದ್ಧೆಯೊಬ್ಬರು ಮೃತಪಟ್ಟರು. ಸುರಕ್ಷಿತ ಸೂರಿಗಾಗಿ ಇಂದಿಗೂ ಕಾಯುತ್ತಿದ್ದೇವೆ. ವಾಸವಿದ್ದ ಜಾಗವನ್ನು ಸರ್ಕಾರದವರೇ ತೆರವು ಮಾಡಿದ್ದಾರೆ. ಈಗ ಅದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಈ ಮನೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮಳೆಗಾಲ ಆರಂಭಕ್ಕೂ ಮುನ್ನವೇ ಮನೆಗಳನ್ನು ನಮಗೆ ಹಸ್ತಾಂತರಿಸಬೇಕು’ ಎಂದು ಆಗ್ರಹಿಸಿದರು.
ಜಿ+1 ಮನೆಗಳಿಗಾಗಿ ಅಲೆಮಾರಿ ಅಭಿವೃದ್ಧಿ ನಿಗಮವು ₹ 33 ಲಕ್ಷ ಕೊಟ್ಟಿದೆ. ಇದುವರೆಗೂ ಮನೆಗಳ ಹಸ್ತಾಂತರವಾಗಿಲ್ಲ. ಸುಖಾಸುಮ್ಮನೇ ಕಾಲಹರಣ ಮಾಡಲಾಗುತ್ತಿದ್ದು ಕಾಮಗಾರಿಯೂ ವಿಳಂಬವಾಗುತ್ತಿದೆಶೆಟ್ಟಿ ವಿಭೂತಿ ಅಲೆಮಾರಿ ಸಮುದಾಯಗಳ ಜಿಲ್ಲಾ ಘಟಕದ ಅಧ್ಯಕ್ಷ
ಸರ್ಕಾರಿ ಜಾಗದಿಂದ ತೆರವು ಮಾಡಿದ ನಂತರ ಖಾಸಗಿ ಜಾಗದಲ್ಲಿ ಶೆಡ್‌ನಲ್ಲಿ ವಾಸವಿದ್ದೇವೆ. ಈಗ ಜಾಗ ಖಾಲಿ ಮಾಡುವಂತೆ ಖಾಸಗಿಯವರು ಹೇಳುತ್ತಿದ್ದು ಬದುಕು ಅಡಕತ್ತರಿಯಲ್ಲಿ ಸಿಲುಕಿದೆರಾಜೇಶ ಬಾದಲಗಿ ಸುಡುಗಾಡು ಸಿದ್ಧರು
ನಿಗಮದಿಂದ ಹಣ ಬಂದಿದ್ದು ಬ್ಯಾಂಕ್ ಸಾಲವೂ ಮಂಜೂರಾಗಿದೆ. ಅಷ್ಟಾದರೂ ಮನೆಗಳ ಹಸ್ತಾಂತರ ಮಾಡದೇ ಅನ್ಯಾಯ ಮಾಡಲಾಗುತ್ತಿದೆಹುಸೇನಪ್ಪ ಬಾದಗಿ ಸುಡುಗಾಡು ಸಿದ್ಧರು
‘₹ 33 ಲಕ್ಷ ಕೊಟ್ಟ ನಿಗಮ’
‘ಕುಲ ಕಸುಬು ನಂಬಿ ಬದುಕುತ್ತಿರುವ ಸುಡುಗಾಡು ಸಿದ್ಧರಿಂದ ಮನೆಗಳ ಹಂಚಿಕೆಗೆ ₹ 1 ಲಕ್ಷ ನೀಡಲು ಅಸಾಧ್ಯವೆಂಬುದು ಅಲೆಮಾರಿ ಅಭಿವೃದ್ಧಿ ನಿಗಮದ ಗಮನಕ್ಕೆ ಬಂದಿತ್ತು. ಅದೇ ಕಾರಣಕ್ಕೆ ನಿಗಮ 33 ಫಲಾನುಭವಿಗಳಿಗೆ ₹ 33 ಲಕ್ಷವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದೆ’ ಎಂದು ಫಲಾನುಭವಿಗಳು ಹೇಳಿದರು. ‘₹ 33 ಲಕ್ಷ ಹಸ್ತಾಂತರ ಮಾಡಿದರೂ ಮನೆಗಳ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ. 2025ರ ಆಗಸ್ಟ್‌ನಲ್ಲಿಯೇ ಮನೆಗಳ ಹಸ್ತಾಂತರ ಮಾಡುವುದಾಗಿ ನೀಡಿದ್ದ ಭರವಸೆಯೂ ಈಡೇರಿಲ್ಲ. ಇದರಿಂದ ಸುಡುಗಾಡು ಸಿದ್ಧರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಸರ್ಕಾರ ಕೊಟ್ಟ ಮಾತಿನಂತೆ ನಮಗೆ ತ್ವರಿತವಾಗಿ ಮನೆಗಳನ್ನು ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿದರು.
‘ದೀಪಾವಳಿ ನಂತರ 33 ಮನೆ ಹಸ್ತಾಂತರ’
‘ನಾಗೇಂದ್ರನಮಟ್ಟಿಯ ಶಾಂತಿನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮದಿಂದ ಜಿ+1 ಮಾದರಿಯಲ್ಲಿ 480 ಮನೆಗಳನ್ನು ನಿರ್ಮಿಸಲಾಗುತ್ತಿದೆ. ದೀಪಾವಳಿ ಹಬ್ಬದ ನಂತರ ಸುಡುಗಾಡು ಸಿದ್ಧರ ಸಮಯದಾಯದ 33 ಕುಟುಂಬಗಳಿಗೆ 33 ಮನೆಗಳನ್ನು ಹಸ್ತಾಂತರಿಸಲು ಸಿದ್ಧತೆ ನಡೆದಿದೆ’ ಎಂದು ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಸದಸ್ಯ ಸಂಜೀವಕುಮಾರ ನೀರಲಗಿ ತಿಳಿಸಿದರು. ಜಿ+1 ಮನೆಗಳ ಸ್ಥಿತಿ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು ‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗುತ್ತಿಗೆದಾರನಿಗೆ ಈಗಾಗಲೇ ₹ 26 ಕೋಟಿ ಸಂದಾಯ ಮಾಡಲಾಗಿದೆ. ಕೆಲ ಸ್ಥಳೀಯರಿಂದ ಕಾಮಗಾರಿ ವಿಳಂಬವಾಗುತ್ತಿರುವುದು ಗಮನದಲ್ಲಿದ್ದು ಸಮಸ್ಯೆ ಸರಿಪಡಿಸಲಾಗುವುದು’ ಎಂದರು. ‘ಮುಂದಿನ ಮೂರು ತಿಂಗಳಿನಲ್ಲಿ 480 ಮನೆಗಳನ್ನು ಪೂರ್ಣವಾಗಿ ನಿರ್ಮಿಸುವುದಾಗಿ ಗುತ್ತಿಗೆದಾರರು ಸಮಯ ಪಡೆದಿದ್ದಾರೆ. ಅಲೆಮಾರಿ ಅಭಿವೃದ್ಧಿ ನಿಗಮದವರು ಈಗಾಗಲೇ ₹33 ಲಕ್ಷ ನೀಡಿದ್ದಾರೆ. ಅದೇ ಹಣದಲ್ಲಿ ಸುಡುಗಾಡು ಸಿದ್ಧರು ಸಮುದಾಯದವರಿಗೆ 33 ಮನೆಗಳನ್ನು ಕೊಡುತ್ತೇವೆ. ಡಿಸೆಂಬರ್‌ನಲ್ಲಿ ಉಳಿದ ಮನೆಗಳ ಹಂಚಿಕೆ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದರು. ‘33 ಮನೆಗಳನ್ನು ಸುಡುಗಾಡು ಸಿದ್ಧರು ಸಮುದಾಯದವರಿಗೆ ಹಂಚಿಕೆ ಮಾಡಿದ ನಂತರ ಅವರಿಗೆ ಮೂಲ ಸೌಕರ್ಯ ನೀಡಬೇಕು. ಹೀಗಾಗಿ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಕುಡಿಯುವ ನೀರಿನ ಟ್ಯಾಂಕರ್ ಸಹ ಕಟ್ಟಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ ಚರಂಡಿ ಹಾಗೂ ನೀರಿನ ವ್ಯವಸ್ಥೆ ಸಹ ಅಚ್ಚುಕಟ್ಟಾಗಿ ಮಾಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.