ADVERTISEMENT

ರಾಣೆಬೆನ್ನೂರು | ಹಾಳಾಗುತ್ತಿದೆ ಹೊನ್ನತ್ತಿ ಕೆರೆ: ಅಭಿವೃದ್ಧಿ ಮರೀಚಿಕೆ

ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ: ವಲಸೆ ಪಕ್ಷಿಗಳ ಆಗಮನಕ್ಕೆ ಕುತ್ತು

ಮುಕ್ತೇಶ ಕೂರಗುಂದಮಠ
Published 14 ಜುಲೈ 2025, 2:14 IST
Last Updated 14 ಜುಲೈ 2025, 2:14 IST
ರಾಣೆಬೆನ್ನೂರು ತಾಲ್ಲೂಕಿನ ಹೊನ್ನತ್ತಿ ಕೆರೆಯ ತುಂಬಿದ್ದು, ಕೆರೆ ಸುತ್ತ ಗಿಡಗಂಡಿ ಆಳೆತ್ತರ ಮುಳ್ಳು ಬೆಳೆದು ನಿಂತಿದೆ. 
ರಾಣೆಬೆನ್ನೂರು ತಾಲ್ಲೂಕಿನ ಹೊನ್ನತ್ತಿ ಕೆರೆಯ ತುಂಬಿದ್ದು, ಕೆರೆ ಸುತ್ತ ಗಿಡಗಂಡಿ ಆಳೆತ್ತರ ಮುಳ್ಳು ಬೆಳೆದು ನಿಂತಿದೆ.    

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ಹೊನ್ನತ್ತಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆ ನಿಧಾನವಾಗಿ ಶಿಥಿಲಾವಸ್ಥೆಯತ್ತ ಸಾಗುತ್ತಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೊನ್ನತ್ತಿ, ಹೊನ್ನಮ್ಮ ದೇವಿ ದೇವಸ್ಥಾನದ ಮೂಲಕ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಗುಡಿ ಹೊನ್ನತ್ತಿ ಮತ್ತು ಕೆರಿಮಲ್ಲಾಪುರ ಗ್ರಾಮಗಳ ಮಧ್ಯ ದೊಡ್ಡ ಕೆರೆ ಇದೆ. ಈ ಕೆರೆಯು ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೂರುಗಳು ವ್ಯಕ್ತವಾಗುತ್ತಿವೆ.

ಎಲ್ಲೆಂದರಲ್ಲಿ ಕಸ ಬೆಳೆದಿರುವ ಕೆರೆಯಲ್ಲಿಯೇ ಬಾತು ಕೋಳಿಗಳು ಓಡಾಡುತ್ತವೆ. ಹಲವು ಪಕ್ಷಿಗಳು ಬಂದು ಹೋಗುತ್ತವೆ. ಇಷ್ಟೆಲ್ಲ ಪ್ರೇಕ್ಷಣೀಯ ಸ್ಥಳವಾದರೂ ಕೆರೆ ಅಭಿವೃದ್ಧಿಯಾಗುತ್ತಿಲ್ಲವೆಂಬ ನೋವು ಸ್ಥಳೀಯರದ್ದಾಗಿದೆ.

ADVERTISEMENT

ಗ್ರಾಮೀಣ ಬದುಕಿನ ಜೀವನಾಡಿ ಆಗಿರುವ ಕೆರೆಗಳು ಕುಡಿಯುವ ನೀರು, ಅಂತರ್ಜಲ ಹೆಚ್ಚಿಸಲು ಆಸರೆಯಾಗಿವೆ. ಅತಿಕ್ರಮಣ, ಹೂಳು ತುಂಬಿ, ದುರಸ್ತಿ ಕಾಣದ ಏರಿ, ದಿಕ್ಕು ತಪ್ಪಿದ ನೀರು ನಿರ್ವಹಣಾ ಪದ್ದತಿಯಿಂದ ಹೊನ್ನತ್ತಿ ಕೆರೆ ಕ್ರಮೇಣ ಶಿಥಿಲಾವಸ್ಥೆಗೆ ತಲುಪುತ್ತಿದೆ.

‘ಕೆರೆಯ ಸುತ್ತಲೂ ಕುಳಿತುಕೊಳ್ಳಲು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಬೇಕಾದ ಮೂಲ ಸೌಕರ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಿ ಈ ಕೆರೆ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಿದರೆ ಅನುಕೂಲವಾಗುತ್ತದೆ‘ ಎಂದು ಗ್ರಾಮಸ್ಥರು ಆಗ್ರಹಿಸಿದರು.

ದೇವಿ ದರ್ಶನ: ಹೋಳಿ ಹುಣ್ಣಿಮೆ ದಿನದಂದು ಹೊನ್ನಮ್ಮ ದೇವಿ ದೇವಸ್ಥಾನದ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರತಿ ಹುಣ್ಣಿಮೆಯಂದೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಭಕ್ತರು ಗ್ರಾಮಕ್ಕೆ ಬಂದು ಹೋಗುತ್ತಾರೆ.

ಪ್ರಾಚೀನಕಾಲದ ಹೊನ್ನತ್ತಿ ಕೆರೆ ಈ ಭಾಗದ ಜನರ ಜೀವನಾಡಿಯಾಗಿದೆ. ಆದರೆ, ಕೆರೆ ಸಂಪೂರ್ಣ ಮಲೀನವಾಗುತ್ತಿರುವುದು ನೋವಿನ ಸಂಗತಿ. ಕೆರೆ ನೀರನ್ನು ಜನರು ಬಳಕೆ ಮಾಡಲು ಸಾಧ್ಯವಿಲ್ಲದಂತ ಸ್ಥಿತಿ ನಿರ್ಮಾಣವಾಗಿದೆ.

ಕೆರೆ ಅಂಗಳದಲ್ಲಿ ಜಾಲಿ ಮುಳ್ಳಿನ ಕಂಟಿಗಳು ಬೆಳೆದಿವೆ. ಮೀನುಗಾರರಿಗೂ ಅನಾನುಕೂಲವಾಗಿದೆ. ಪದೇ ಪದೇ ಮೀನಿನ ಬಲೆಗಳು ಹರಿಯುತ್ತಿವೆ. ಕೆರೆ ಸುತ್ತಲಿನ ಕೆಲ ನಿವಾಸಿಗಳು, ಮಲ ಮೂತ್ರ ವಿಸರ್ಜನೆಯ ತ್ಯಾಜ್ಯವನ್ನು ಕೆರೆ ಬಿಡುತ್ತಿರುವ ಆರೋಪಗಳಿವೆ. ಅಲ್ಲದೇ, ಕೆರೆ ದಡವೂ ಜೂಜುಕೋರರ ಅಡ್ಡೆ ಮತ್ತು ಅಕ್ರಮ ಚಟುವಟಿಕೆಗಳ  ತಾಣವಾಗಿದೆ.

ಹೊನ್ನತ್ತಿ ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ಅಥವಾ ಗ್ರಾಮ ಪಂಚಾಯಿತಿ ಅವರು ಅಭಿವೃದ್ಧಿ ಮಾಡುವ ಮೂಲಕ ಕಾಯಕಲ್ಪ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕೆಲವರು ಕೆರೆ ದಡದಲ್ಲಿ ಕುಳಿತು ಜನ್ಮ ದಿನಾಚರಣೆ ಮತ್ತು ಔತಣಕೂಟ ನಡೆಸುತ್ತಿದ್ದಾರೆ. ಮದ್ಯದ ಬಾಟಲಿ ಹಾಗೂ ಪ್ಲಾಸ್ಟಿಕ್‌ಗಳನ್ನು ಸ್ಥಳದಲ್ಲೇ ಎಸೆದು ಹೋಗುತ್ತಿದ್ದಾರೆ. ಜನರ ಜೀವನಾಡಿಯಾದ ಕೆರೆ, ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತರುವ ತಾಣವಾಗಿ ಮಾರ್ಪಟ್ಟಿದೆ. ಇದೆಲ್ಲ ಗೊತ್ತಿದ್ದರೂ ಕೆರೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಹೊನ್ನತ್ತಿ ಕೆರೆಯ ಹೊರ ನೋಟ
ಕೆರೆಯ ಸ್ವಚ್ಛತೆಗಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೆರೆಯ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಬೇಕಾಗಿದೆ
ಶೋಭಾ ನಿಟ್ಟೂರ ಹೊನ್ನತ್ತಿ ಗ್ರಾ.ಪಂ. ಅಧ್ಯಕ್ಷೆ
ಕೆರೆ ಅಭಿವೃದ್ಧಿಗಾಗಿ ಗ್ರಾ.ಪಂ.ಯಲ್ಲಿ ಅನುದಾನವಿಲ್ಲ. ಈಚೆಗೆ ಸುರಿದ ಮಳೆಗೆ ಕೆರೆ ಕೋಡಿ ಬಿದ್ದು ನೀರು ರಸ್ತೆ ಮತ್ತು ರೈತರ ಜಮೀನುಗಳಲ್ಲಿ ನುಗ್ಗಿತ್ತು. ಜೆಸಿಬಿಯಿಂದ ಯಂತ್ರದಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸಲಾಗಿದೆ
ಶೇಖಪ್ಪ ಪೂಜಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 

ತಡೆಗೋಡೆ ನಿರ್ಮಾಣ

ಗ್ರಾಮದ ಕೆರೆಗೆ ತುಂಗಾ ಮೇಲ್ದಂಡೆ ಕಾಲುವೆಯಿಂದ ನಿರಂತರವಾಗಿ ನೀರು ಹರಿಬಿಡಲಾಗುತ್ತಿದೆ. ಇದರ ಜೊತೆಗೆ ಮಳೆ ನೀರು ಕೆರೆಯನ್ನು ಸೇರುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆ ತುಂಬಿ ಹೆಚ್ಚಾದ ನೀರು ಕೆಲ ಮನೆಗಳಿಗೆ ನುಗ್ಗಿತ್ತು. ಕೆರೆಮಲ್ಲಾಪುರ ಗ್ರಾಮಸ್ಥರು ಆತಂಕಗೊಂಡಿದ್ದರು. ಈ ಸಮಸ್ಯೆ ಮತ್ತೊಮ್ಮೆ ಬಾರದಂತೆ ಹನುಮಂತದೇವರ ಗುಡಿ ಬಳಿ ತಡೆಗೋಡೆ ನಿರ್ಮಿಸಲಾಗಿದೆ.

ಮುಂಗೋಲಿಯನ್‌ ಪಕ್ಷಿಗಳು

ಹೊನ್ನತ್ತಿ ಕೆರೆಗೆ ಮುಂಗೋಲಿಯನ್‌ ಪಕ್ಷಿಗಳು ಆಗಾಗ ಬಂದು ಹೋಗುತ್ತವೆ. ಇವು ನೀರಿನಲ್ಲಿ ವಾಸವಾಗಿದ್ದರೂ ಮೀನು ಹುಳು ತಿನ್ನುವುದಿಲ್ಲ. ಕಾಳು ಕಡಿ ಮತ್ತು ಮೆಣಸಿನಕಾಯಿ ತರಕಾರಿ ಚಿಗುರನ್ನು ಮಾತ್ರ ತಿನ್ನುತ್ತವೆ. ನೀರು ಕಲುಷಿತಗೊಳ್ಳುತ್ತಿರುವುದರಿಂದ ವಲಸೆ ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗುತ್ತಿರುವ ದೂರುಗಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.