ADVERTISEMENT

ಹಾವೇರಿ | ಹೋರಿ ಸ್ಪರ್ಧೆಗೆ ಅನುಮತಿ ಕಡ್ಡಾಯ: ಇಲ್ಲಿವೆ ಷರತ್ತುಗಳು

ಹಟ್ಟಿ ಹಬ್ಬ: ನಾಲ್ವರು ಸಾವು ಪ್ರಕರಣ, 18 ಷರತ್ತು ಪಾಲಿಸಿದರಷ್ಟೇ ಅನುಮತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:02 IST
Last Updated 25 ಅಕ್ಟೋಬರ್ 2025, 5:02 IST
ಹಾವೇರಿ ವೀರಭದ್ರೇಶ್ವರ ದೇವಸ್ಥಾನ  ಮುಂಭಾಗದ ರಸ್ತೆಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಆಚರಣೆಯ ದೃಶ್ಯ
ಹಾವೇರಿ ವೀರಭದ್ರೇಶ್ವರ ದೇವಸ್ಥಾನ  ಮುಂಭಾಗದ ರಸ್ತೆಯಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಆಚರಣೆಯ ದೃಶ್ಯ   

ಹಾವೇರಿ: ಜಿಲ್ಲೆಯಾದ್ಯಂತ ದೀಪಾವಳಿ ಸಂದರ್ಭದಲ್ಲಿ ಏರ್ಪಡಿಸಿದ್ದ ಹೋರಿ ಬೆದರಿಸುವ ಆಚರಣೆ ಹಾಗೂ ಹೋರಿ ಮೆರವಣಿಗೆ ವೇಳೆ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ಕಡ್ಡಾಯಗೊಳಿಸಿದೆ.

ರಾಜ್ಯದಲ್ಲಿ ಆಯೋಜಿಸುವ ಹೋರಿ ಬೆದರಿಸುವ ಸ್ಪರ್ಧೆ, ಹೋರಿಗಳ ಓಟ ಹಾಗೂ ಎತ್ತಿನಗಾಡಿ ಓಟದ ಆಯೋಜನೆ ಕುರಿತು 2022ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದೇ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾವೇರಿ ಜಿಲ್ಲಾಡಳಿತ ಮುಂದಾಗಿದೆ.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ, ‘ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಹೋರಿ ಮೆರವಣಿಗೆ ಅಥವಾ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಬಗ್ಗೆ 2022ರಲ್ಲಿಯೇ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಕರ್ನಾಟಕ ತಿದ್ದುಪಡಿ) ಕಾಯ್ದೆ ಅನ್ವಯ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ’ ಎಂದರು.

ADVERTISEMENT

ಆಯೋಜಕರ ವಿರುದ್ಧ ಪ್ರಕರಣ: ‘ಅನುಮತಿ ಪಡೆಯದೇ ಹಾವೇರಿಯಲ್ಲಿ ಹೋರಿ ಬೆದರಿಸುವ ಆಚರಣೆ ನಡೆಸಿ ವೃದ್ಧ ಚಂದ್ರಶೇಖರ್ ಅವರ ಸಾವಿಗೆ ಕಾರಣವಾದ ಆರೋಪದಡಿ ಆಯೋಜಕರಾದ ದೇಸಾಯಿಗಲ್ಲಿಯ ರಾಜು ಡೊಳ್ಳಿನ, ಡಿಳ್ಳೆಪ್ಪ ಡೊಳ್ಳಿನ, ಮಹೇಶ ಕನವಳ್ಳಿ, ಅಣ್ಣಪ್ಪ ಡೊಳ್ಳಿನ ಹಾಗೂ ಹೋರಿ ಮಾಲೀಕನ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಾವೇರಿ ಶಹರ ಠಾಣೆ ಪೊಲೀಸರು ತಿಳಿಸಿದರು.

ಹೋರಿ ಮಾಲೀಕ ಆರೋಪಿ: ‘ಹಾವೇರಿ ತಾಲ್ಲೂಕಿನ ದೇವಿಹೊಸೂರು ಗ್ರಾಮದಲ್ಲಿ ಹಬ್ಬದ ಮೆರವಣಿಗೆ ವೇಳೆ ಹೋರಿ ಗುದ್ದಿ ವೃದ್ಧ ಘನಿಸಾಬ್ ಮೃತಪಟ್ಟಿದ್ದು, ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಹೋರಿ ಮಾಲೀಕ ತಿಪ್ಪಣ್ಣ ಸಿದ್ದಪ್ಪ ಆಲದಕಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಹೇಳಿದರು.

‘ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದಲ್ಲಿ ಭರತ್ ಎಂಬುವವರ ಸಾವಿಗೆ ಕಾರಣವಾದ ಆರೋಪದಡಿ ಹೋರಿ ಮಾಲೀಕ ರವಿ ಬಸವಣ್ಣೆಪ್ಪ ಗೌಳಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆಡೂರು ಪೊಲೀಸರು ತಿಳಿಸಿದರು.

ಮೃತ–ಆಯೋಜಕರ ವಿರುದ್ಧ ಎಫ್‌ಐಆರ್: ‘ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿ ಗ್ರಾಮದಲ್ಲಿ ಹೋರಿ ಗುದ್ದಿ ಶ್ರೀಕಾಂತ್ ಗುರುಶಾಂತಪ್ಪ ಕೋಣನಕೇರಿ ಅವರು ಮೃತಪಟ್ಟಿದ್ದಾರೆ. ಅವರದ್ದೇ ಹೋರಿಯಿಂದ ಈ ಅವಘಡ ಸಂಭವಿಸಿತ್ತು. ಶ್ರೀಕಾಂತ್ ಹಾಗೂ ಸ್ಪರ್ಧೆ ಆಯೋಜಕರು ಇಬ್ಬರನ್ನೂ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹಾನಗಲ್ ಪೊಲೀಸರು ತಿಳಿಸಿದರು.

‘ಶ್ರೀಕಾಂತ್ ಅವರು ತಮ್ಮ ಹೋರಿ ಸಮೇತ ಗ್ರಾಮದ ರಸ್ತೆಗೆ ಬಂದು ಓಡಿಸಿದ್ದರು. ನಂತರ, ವಾಪಸು ತಮ್ಮ ಮನೆಗೆ ಹೋಗುವಾಗ ನಿರ್ಲಕ್ಷ್ಯ ವಹಿಸಿದ್ದರು. ಸರಿಯಾಗಿ ಹೋರಿಗಳನ್ನು ಹಿಡಿದುಕೊಂಡಿರಲಿಲ್ಲ. ಬೆದರಿದ್ದ ಹೋರಿ, ಶ್ರೀಕಾಂತ್ ಅವರ ಎದೆಗೆ ತಿವಿದಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಹುಬ್ಬಳ್ಳಿಯ ಕೆಎಂಸಿ–ಆರ್‌ಐ (ಕಿಮ್ಸ್‌) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದರು.

ಹೋರಿ ಸ್ಪರ್ಧೆಗೆ ವಿಧಿಸಿರುವ ಷರತ್ತುಗಳು

* ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸುವವರು 15 ದಿನಕ್ಕೂ ಮುನ್ನವೇ ಸಂಬಂಧಪಟ್ಟ ತಹಶೀಲ್ದಾರ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕು.

* ಅರ್ಜಿ ಪರಿಶೀಲಿಸುವ ತಹಶೀಲ್ದಾರ್ ಅವರು ಶಿಫಾರಸು ಸಮೇತ ಜಿಲ್ಲಾಧಿಕಾರಿಗೆ ವರದಿ ನೀಡಬೇಕು. * ಜಿಲ್ಲಾಧಿಕಾರಿಯವರು ಸ್ಪರ್ಧೆ ಆಯೋಜನೆಯಿಂದ ಆಗುವ ಸಾಧಕ–ಬಾಧಕಗಳನ್ನು ಪರಿಶೀಲಿಸಿ ಲಿಖಿತ ಆದೇಶದ ಮೂಲಕ ಅನುಮತಿ ನೀಡಬಹುದು ಅಥವಾ ತಿರಸ್ಕರಿಸಬಹುದು.

* ಸ್ಪರ್ಧೆ ಆಯೋಜನೆ ಪರಿಶೀಲಿಸಲು ಜಿಲ್ಲಾಧಿಕಾರಿಯವರು ಸಮಿತಿ ರಚಿಸಬೇಕು. ಕಂದಾಯ ಪೊಲೀಸ್ ಯುವ ಸಬಲೀಕರಣ ಮತ್ತು ಕ್ರೀಡಾ ಪಶು ಸಂಗೋಪನೆ ಇಲಾಖೆಗಳ ಅಧಿಕಾರಿಗಳು ಹಾಗೂ ಒಬ್ಬ ಪ್ರತಿನಿಧಿ ಇರಬೇಕು.

* 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮೀರಿದ ಜಾಗದಲ್ಲಿ ಸ್ಪರ್ಧೆ ಆಯೋಜಿಸುವಂತಿಲ್ಲ.

* ಹೋರಿಗಳು ಓಡಲು ಜಾಗದಲ್ಲಿ ಗರಿಷ್ಠ 100 ಮೀಟರ್ ಉದ್ದ ಹಾಗೂ 7.5 ಮೀಟರ್ ಅಗಲವಾದ ಸುಸಜ್ಜಿತ ಟ್ರ್ಯಾಕ್ ನಿರ್ಮಿಸಬೇಕು.

* ಹೋರಿಗಳನ್ನು ಪ್ರಚೋದಿಸಿ ಓಡಿಸಲು ಬಾರಕೋಲು ಚಾಟಿ ಕೋಲು ಹಾಗೂ ಇತ್ಯಾದಿ ವಸ್ತುಗಳನ್ನು ಬಳಸುವಂತಿಲ್ಲ.

* ಹೋರಿಗಳು ಉದ್ರೇಕದಿಂದ ಓಡಲೆಂದು ಯಾವುದೇ ಔಷಧ ನೀಡುವಂತಿಲ್ಲ. ಹೋರಿಗಳ ದೇಹದ ಯಾವುದೇ ಭಾಗಕ್ಕೂ ಮೆಣಸಿನಕಾಯಿ ಪುಡಿ ಹಾಗೂ ಇತರೆ ವಸ್ತುಗಳನ್ನು ಲೇಪಿಸುವಂತಿಲ್ಲ.

* ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹೋರಿಗಳ ದೇಹಸ್ಥಿತಿ ಬಗ್ಗೆ ಪಶು ವೈದ್ಯರಿಂದ ದೈಹಿಕ ಸಾಮರ್ಥ್ಯ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.

* ಸ್ಪರ್ಧೆ ನಡೆಯುವ ವೇಳೆ ಹೋರಿಗಳು ಗಾಯಗೊಂಡರೆ ತುರ್ತು ಚಿಕಿತ್ಸೆಗೆ ಬೇಕಾದ ಪಶು ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕು.

* ಸ್ಪರ್ಧೆಯಲ್ಲಿ ಯಾವುದೇ ವ್ಯಕ್ತಿಗೆ ಗಾಯವಾದರೆ ಅವರಿಗೆ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಇರಬೇಕು. ಪ್ರಥಮ ಚಿಕಿತ್ಸೆ ಆಂಬುಲೆನ್ಸ್‌ ಸಿದ್ಧವಿರಬೇಕು.

* ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳಿಗೆ ಸೂಕ್ತ ಆಶ್ರಯ ಶುದ್ಧ ಕುಡಿಯುವ ನೀರು ಹಾಗೂ ಪೌಷ್ಠಿಕ ಮೇವು ವ್ಯವಸ್ಥೆ ಮಾಡಬೇಕು.

* ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ 1960ರ ನಿಯಮಗಳನ್ನು ಪಾಲಿಸಬೇಕು. ಪ್ರಾಣಿಗಳಿಗೆ ಹಿಂಸೆ ನೀಡಿದರೆ ಆಯೋಜಕರು–ಮಾಲೀಕರು ಹಾಗೂ ಸ್ಪರ್ಧೆಗೆ ಸಹಕರಿಸಿದ ಎಲ್ಲರ ವಿರುದ್ಧ ಕ್ರಮವಾಗಲಿದೆ.

* ಹೋರಿ ಬೆದರಿಸುವ ಸ್ಪರ್ಧೆಯನ್ನು ಲಾಭಕ್ಕಾಗಿ ಆಯೋಜಿಸಿ ಟಿಕೆಟ್ ಮಾರಾಟ ಮಾಡುವಂತಿಲ್ಲ.

* ಜಿಲ್ಲಾಧಿಕಾರಿ ನೀಡುವ ಆದೇಶವನ್ನು 3 ದಿನಗಳ ಮುಂಚಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು.

* ಹೋರಿಗಳಿಗೆ ಯಾವುದೇ ನೋವು ಆಗದಂತೆ ಮಾಲೀಕರು ನೋಡಿಕೊಳ್ಳಬೇಕು. ಆಯೋಜಕರು ನಿಗಾ ವಹಿಸಬೇಕು.

* ಸ್ಪರ್ಧೆಯ ಆರಂಭದಿಂದ ಅಂತ್ಯದವರೆಗೂ ವಿಡಿಯೊ ಚಿತ್ರೀಕರಣ ಮಾಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು.

* ಸ್ಪರ್ಧೆ ನಡೆಯುವಾಗ ತಹಶೀಲ್ದಾರ್ ಅವರು ಖುದ್ದು ಹಾಜರಿರಬೇಕು. ನಿಯಮ ಪಾಲನೆ ಆಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.