ADVERTISEMENT

ಹೋರಿ ಹಬ್ಬ: ಷರತ್ತು ಸಡಿಲಿಕೆಗೆ ಹೋರಿ ಮಾಲೀಕರು–ಅಭಿಮಾನಿಗಳ ಒತ್ತಾಯ

ಹಾವೇರಿ ಜಿಲ್ಲಾಧಿಕಾರಿ ಭೇಟಿಯಾದ ನಿಯೋಗ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:25 IST
Last Updated 8 ನವೆಂಬರ್ 2025, 4:25 IST
‘ಹೋರಿ ಹಬ್ಬಕ್ಕೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು’ ಎಂದು ಒತ್ತಾಯಿಸಿ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು
‘ಹೋರಿ ಹಬ್ಬಕ್ಕೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸಬೇಕು’ ಎಂದು ಒತ್ತಾಯಿಸಿ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು   

ಹಾವೇರಿ: ‘ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲು ವಿಧಿಸಿರುವ 18 ಷರತ್ತುಗಳಲ್ಲಿ ಕೆಲ ಷರತ್ತುಗಳನ್ನು ಕೈಬಿಡಬೇಕು. ಗ್ರಾಮೀಣ ಜನಪದ ಕ್ರೀಡೆಯ ಸೊಗಡಿನಲ್ಲಿ ಶಾಂತಿಯುತವಾಗಿ ಹೋರಿ ಬೆದರಿಸುವ ಸ್ಪರ್ಧೆ ಸಂಘಟಿಸಲು ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದ ಮೂಲಕ ಭೇಟಿ ನೀಡಿದ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೂ ಮನವಿ ಪತ್ರ ರವಾನಿಸಿದರು. ಅಖಿಲ ಕರ್ನಾಟಕ ರೈತರ ಜನಪದ ಕ್ರೀಡೆ ಹೋರಿಹಬ್ಬ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

‘ಸರ್ಕಾರ ವಿಧಿಸಿರುವ ಷರತ್ತುಗಳಿಂದಾಗಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ಒಂದೊಂದಾಗಿ ರದ್ದಾಗುತ್ತಿವೆ. ನಮ್ಮ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ ಸ್ಪರ್ಧೆ ಆಯೋಜಿಸಲು ಅವಕಾಶ ನೀಡಬೇಕು’ ಎಂದು ಹೋರಿ ಮಾಲೀಕರು–ಅಭಿಮಾನಿಗಳು ಆಗ್ರಹಿಸಿದರು.

ADVERTISEMENT

ಪಾಂಡವರ ಕಾಲದಿಂದಲೂ ಆಚರಣೆ: ‘ಮಹಾಭಾರತದ ಪಾಂಡವರ ಕಾಲದಿಂದಲೂ ಹೋರಿ ಹಬ್ಬದ ಆಚರಣೆ ಚಾಲ್ತಿಯಲ್ಲಿದೆ. ಈಗ ಉತ್ತರ ಕರ್ನಾಟಕದಾದ್ಯಂತ ಹೋರಿಹಬ್ಬ ಆಚರಿಸಲಾಗುತ್ತದೆ. ಅದರಲ್ಲೂ ಹಾವೇರಿ ಜಿಲ್ಲೆಯ ಹೋರಿ ಹಬ್ಬ, ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ’ ಎಂದು ಅಭಿಮಾನಿಗಳು ಹೇಳಿದರು.

‘ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ರೈತರು, ಹೋರಿಗಳನ್ನು ಅಲಂಕರಿಸಿ ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ. ಜೊತೆಗೆ, ಹೋರಿ ಸ್ಪರ್ಧೆಯಲ್ಲೂ ಪಾಲ್ಗೊಳ್ಳುತ್ತಾರೆ. ಈ ಆಚರಣೆ ರೈತರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹೋರಿ ಹಬ್ಬಕ್ಕೆಂದು ಪ್ರತ್ಯೇಕವಾಗಿ ಹೋರಿಗಳನ್ನು ಸಾಕುವ ರೈತರಿದ್ದಾರೆ. ಅಂಥ ಹೋರಿಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ’ ಎಂದು ತಿಳಿಸಿದರು.

ನಾಲ್ಕು ಸಾವು ನೆಪದಲ್ಲಿ ನಿಯಂತ್ರಣ: ‘ದೀಪಾವಳಿ ಹಬ್ಬದಂದು ಹೋರಿ ಬೆದರಿಸುವ ಆಚರಣೆ ಸಂದರ್ಭದಲ್ಲಿ ನಾಲ್ವರು ಮೃತಪಟ್ಟರೆಂಬ ಕಾರಣಕ್ಕೆ, ಹಾವೇರಿ ಜಿಲ್ಲೆಯಾದ್ಯಂತ ಹೋರಿ ಹಬ್ಬ ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಈ ಕ್ರಮ ಸರಿಯಲ್ಲ. ಕೆಲ ಷರತ್ತುಗಳನ್ನು ಮಾರ್ಪಡಿಸಿ ಹೋರಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು. ಯಾವುದೇ ಅನಾಹುತವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಹೇಳಿದರು.

‘ಹೋರಿ ಹಬ್ಬ ಆಚರಣೆಗೂ 15 ದಿನಕ್ಕೂ ಮುನ್ನ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಪಶು ಸಂಗೋಪನಾ ಇಲಾಖೆ ವೈದ್ಯರಿಂದ ಹೋರಿಯ ಆರೋಗ್ಯದ ಪ್ರಮಾಣ ಪತ್ರ ಪಡೆಯಬೇಕು. ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಪಾಲಿಸಲು ಹಲವು ಅಡಚಣೆಗಳಿವೆ. ಈ ಐದು ಪ್ರಮುಖ ಷರತ್ತುಗಳನ್ನು ಸಡಿಲಿಸಬೇಕು. ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಕಾಯ್ದೆ ಹೆಸರಿನಲ್ಲಿ ಹಬ್ಬಕ್ಕೆ ಸಮಸ್ಯೆ ಮಾಡುವುದು ಸರಿಯಲ್ಲ’ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಅನುದಾನ ಕೊಡಿ: ‘ಜಲ್ಲಿಕಟ್ಟು ಹಾಗೂ ಕಂಬಳ ಆಚರಣೆಗೂ ಈ ಹಿಂದೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೂಲಕ ಹಬ್ಬದ ಆಚರಣೆಗೆ ಅವಕಾಶ ಸಿಕ್ಕಿತು. ಇದೇ ರೀತಿಯಲ್ಲಿಯೇ ಹೋರಿ ಹಬ್ಬಕ್ಕೂ ಅವಕಾಶ ನೀಡಬೇಕು. ಸರ್ಕಾರವೇ ಹೋರಿ ಹಬ್ಬದ ಆಚರಣೆಗೆ ಅನುದಾನ ನೀಡಬೇಕು’ ಎಂದು ಅಭಿಮಾನಿಗಳು ಆಗ್ರಹಿಸಿದರು.

‘ಹೋರಿ ಹಬ್ಬಕ್ಕೆ ಅವಕಾಶ ಕೋರಿ ಶಾಂತಿಯುತವಾಗಿ ಮನವಿ ನೀಡುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ, ಗಂಭೀರ ಸ್ವರೂಪದ ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಹೈಕೋರ್ಟ್ ವಕೀಲ ಸಂದೀಪ ಪಾಟೀಲ, ಹೋರಾಟ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಸವರಾಜ ಬಂಡಿವಡ್ಡರ, ಪ್ರಕಾಶ ಬುರಡಿಕಟ್ಟಿ, ಮುತ್ತಣ್ಣ ಚಳಗೇರಿ, ಪ್ರಕಾಶ ಬುಡರಿಕಟ್ಟಿ, ದೇವಪ್ಪ ಡೊಳ್ಳಿನ, ಅವಿನಾಶ ಹತ್ತಿಮತ್ತೂರ, ರಾಘು ಯಳ್ಳೂರ, ಸಂತೋಷ ಹರಿಜನ, ಪ್ರತಾಪ್ ಹುಬ್ಬಳ್ಳಿ, ನಟರಾಜ ಹೊಸೂರು, ಮಾಲತೇಶ ಘಂಟೇರ, ಅಮರ ಬೆಲ್ಲದ, ಗುರುರಾಜ ವಂಟನವರ,  ಮಲ್ಲಪ್ಪ ನಾಗರವಳ್ಳಿ, ಶ್ರೀಶೈಲ ಬೆಳವಾಡಿ ಹಾಗೂ ಇತರರು ಇದ್ದರು.

‘ರಾಜ್ಯ ಸರ್ಕಾರಕ್ಕೆ ಮಾಹಿತಿ’

‘ಹೋರಿ ಹಬ್ಬದ ಸಂದರ್ಭದಲ್ಲಿ ಈ ವರ್ಷ ನಾಲ್ವರು ಮೃತಪಟ್ಟಿದ್ದಾರೆ. ತಿಳವಳ್ಳಿಯಲ್ಲಿ ಚಿಕಿತ್ಸೆ ಸಿಗಲಿಲ್ಲವೆಂದು ಜನರು ಪ್ರತಿಭಟನೆ ಮಾಡಿದ್ದಾರೆ. ದೊಡ್ಡ ಅವಘಡಗಳನ್ನು ತಡೆಯುವ ಉದ್ದೇಶದಿಂದ ಸರ್ಕಾರ 18 ಷರತ್ತು ವಿಧಿಸಿದೆ. ಇದರ ತಿದ್ದುಪಡಿಗೆ ಆಗ್ರಹಿಸುತ್ತಿರುವ ಜನರ ಅಭಿಪ್ರಾಯವನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು ‘ರಾಜ್ಯ ಸರ್ಕಾರದ ಹಂತದಲ್ಲಿ ಈ ಷರತ್ತುಗಳ ನಿಯಮವಾಗಿದೆ. ಈ ಬಗ್ಗೆ ಸರ್ಕಾರದ ಅಧಿಕಾರಿಗಳ ಜೊತೆ ಮಾತನಾಡುವೆ’ ಎಂದರು.

ಷರತ್ತು ತಿದ್ದುಪಡಿ ಮಾಡದಿದ್ದರೆ ಜಲ್ಲಿಕಟ್ಟು ಹಾಗೂ ಕಂಬಳ ಮಾದರಿಯಲ್ಲಿ ಹೋರಿ ಹಬ್ಬಕ್ಕೂ ಅವಕಾಶ ಕೊಡಿಸುವಂತೆ ಕೋರಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತೇವೆ
–ಸಂದೀಪ ಪಾಟೀಲ, ಹೈಕೋರ್ಟ್ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.