ರುಕ್ಸಾನಾಬಾನು ಮುಕ್ತುಂಸಾಬ್ ಶೇಖಸನದಿ
ಹಾವೇರಿ: ಮದುವೆ ಊಟಕ್ಕೆ ಸಿದ್ಧಪಡಿಸಿದ್ದ ಬಿಸಿ ಸಾಂಬಾರಿನ ಪಾತ್ರೆಯಲ್ಲಿ ಬಿದ್ದು ಗಾಯಗೊಂಡಿದ್ದ ಎರಡೂವರೆ ವರ್ಷದ ರುಕ್ಸಾನಾಬಾನು ಮುಕ್ತುಂಸಾಬ್ ಶೇಖಸನದಿ ಎಂಬ ಬಾಲಕಿ ಹುಬ್ಬಳ್ಳಿಯ ಹುಬ್ಬಳ್ಳಿ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದು, ತಡಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರದ ನಿವಾಸಿಯಾಗಿದ್ದ ಬಾಲಕಿ ರುಕ್ಸಾನಾಬಾನು ತನ್ನ ಪೋಷಕರ ಜೊತೆ ಮದುವೆಗೆ ಬಂದಿದ್ದಾಗ ಅವಘಡ ಸಂಭವಿಸಿದೆ. ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಡಸ ಪೊಲೀಸರು ತಿಳಿಸಿದರು.
‘ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ಶರೀಫಸಾಬ ಯರಗುಪ್ಪಿ ಅವರ ಮನೆಯಲ್ಲಿ ಜೂನ್ 14ರಂದು ಮದುವೆ ನಡೆಯುತ್ತಿತ್ತು. ಸಂಬಂಧಿಕರಾಗಿದ್ದ ಬಾಲಕಿಯ ಪೋಷಕರು, ಮದುಗೆ ಬಂದಿದ್ದರು. ಮದುವೆ ಊಟಕ್ಕೆಂದು ದೊಡ್ಡ ಪಾತ್ರೆಯಲ್ಲಿ ಸಾಂಬಾರ ಸಿದ್ಧಪಡಿಸಿ, ಕಟ್ಟೆಯ ಪಕ್ಕದಲ್ಲಿ ಇರಿಸಲಾಗಿತ್ತು.’
‘ಆಟವಾಡುತ್ತ ಕಟ್ಟೆಯ ಬಳಿ ಬಂದಿದ್ದ ಬಾಲಕಿ, ಆಯತಪ್ಪಿ ಸಾಂಬಾರ ಪಾತ್ರೆಯಲ್ಲಿ ಬಿದ್ದಿದ್ದರು. ಇದರಿಂದಾಗಿ ಬಾಲಕಿಯ ಹೊಟ್ಟೆ, ಕೈ, ಕಾಲು ಸೇರಿದಂತೆ ದೇಹದ ಹಲವು ಕಡೆ ತೀವ್ರ ಗಾಯಗಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿಯ ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.