ಪ್ರಾತಿನಿಧಿಕ ಚಿತ್ರ
ಬ್ಯಾಡಗಿ: ನಗರ ಆಶ್ರಯ ಸಮಿತಿ ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದ್ದು, ಅನರ್ಹ ಮತ್ತು ಮೃತಪಟ್ಟಿರುವ ವ್ಯಕ್ತಿಗಳ ಹೆಸರಿನಲ್ಲಿ ನಿವೇಶನ ಹಕ್ಕುಪತ್ರ ನೀಡಲಾಗಿದೆ. ಕೂಡಲೇ ಅದನ್ನು ಸರಿಪಡಿಸದೇ ಹೋದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ಎಚ್ಚರಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಹಣದ ವ್ಯವಹಾರ ನಡೆದಿದೆ ಎನ್ನುವ ಸಂಶಯ ವ್ಯಕ್ತಪಡಿಸಿದರು.
ಕಳೆದ 14 ವರ್ಷಗಳಿಂದ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿದವರಿಗೆ ನಿವೇಶನದ ಹಕ್ಕು ಪತ್ರ ಸಿಕ್ಕಿಲ್ಲ. ಈ ಹಿಂದೆ ಆಯ್ಕೆ ಪಟ್ಟಿಯಲ್ಲಿದ್ದವರ ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಕೂಡಲೆ ಪಟ್ಟಿಯನ್ನು ರದ್ದುಪಡಿಸಿ ಅರ್ಹರಿಗೆ ಮಾತ್ರ ಹಕ್ಕು ಪತ್ರ ನೀಡುವಂತೆ ಆವರು ಒತ್ತಾಯಿಸಿದರು.
ಕಳೆದ ನ.3ರಂದು ವಸತಿ ಸಚಿವರು ಹಕ್ಕುಪತ್ರ ವಿತರಣೆಗೆ ಚಾಲನೆ ನೀಡಿದ್ದು, ನಿಜವಾದ ಬಡವರಿಗೆ ಅನ್ಯಾಯವಾಗಿದೆ. ಕೂಡಲೇ ಪಟ್ಟಿಯನ್ನು ರದ್ದುಗೊಳಿಸಿ ಹೊಸ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ನಗರ ಆಶ್ರಯ ಸಮಿತಿ ದಾಖಲೆ ಪರಿಶೀಲನೆ ನಡೆಸಿ ಹೊಸ ಪಟ್ಟಿಯನ್ನು ಸಿದ್ದಗೊಳಿಸಬೇಕು. ಸದ್ಯ 419 ಫಲಾನುಭವಿಗಳನ್ನು ಗುರುತಿಸಿ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನುಳಿದ ಸಾವಿರಾರು ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.
ಇನ್ನುಳಿದ ಬಡವರಿಗೆ 27 ಎಕರೆ ಭೂಮಿಯನ್ನು ಗುರುತಿಸಲಾಗುತ್ತದೆ. ಎಂದು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದ್ದಾರೆ. ಕೂಡಲೇ ಆ ಜಾಗೆಯನ್ನು ಪುರಸಭೆಗೆ ಹಸ್ತಾಂತರಿಸುವ ಮೂಲಕ 2ನೇ ಹಂತದ ನಿವೇಶನಗಳನ್ನು ವಿತರಿಸಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಳೆದ 2023ರಲ್ಲಿ ಜಿ+ ಮನೆ ನೀಡುವುದಾಗಿ 550 ಜನ ಮಹಿಳೆಯರಿಂದ ತಲಾ ₹ 30 ಸಾವಿರ ಹಣವನ್ನು ರಾಜೀವ್ ಗಾಂಧಿ ಹೌಸಿಂಗ್ ನಿಗಮಕ್ಕೆ ಪಾವತಿಸಲಾಗಿದೆ. ಇದರಲ್ಲಿ ನಿವೇಶನ ಸಿಗದವರ ಗತಿ ಏನು. ಬಡ್ಡಿ ಸಾಲ ತಂದು ನಿಮಗೆ ಹಣ ಸಂದಾಯ ಮಾಡಿದ್ದಾರೆ. ಅವರ ಹಣವನ್ನು ಮುಖ್ಯಾಧಿಕಾರಿ ಬಡ್ಡಿ ಸಮೇತ ವಾಪಸ್ ನೀಡಬೇಕು. ಇಲ್ಲದೆ ಹೋದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.