ADVERTISEMENT

ಹುಕ್ಕೇರಿ ಮಠದ ಅದ್ಧೂರಿ ರಥೋತ್ಸವ

‘ನಮ್ಮೂರ ಜಾತ್ರೆ’: ಮೆರವಣಿಗೆಯಲ್ಲಿ ಗಮನಸೆಳೆದ ಬೇಡರ ವೇಷ, ಜಗ್ಗಲಿಗೆ ತಂಡ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 15:24 IST
Last Updated 6 ಜನವರಿ 2020, 15:24 IST
ಹಾವೇರಿಯಲ್ಲಿ ಸೋಮವಾರ ಹುಕ್ಕೇರಿಮಠದ ಉಭಯಶ್ರೀಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿತು  ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ 
ಹಾವೇರಿಯಲ್ಲಿ ಸೋಮವಾರ ಹುಕ್ಕೇರಿಮಠದ ಉಭಯಶ್ರೀಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿತು  ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ    

ಹಾವೇರಿ: ‘ನಮ್ಮೂರ ಜಾತ್ರೆ’ ಅಂಗವಾಗಿ ಹುಕ್ಕೇರಿಮಠದ ಉಭಯಶ್ರೀಗಳ ಭಾವಚಿತ್ರದ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಗರದಲ್ಲಿ ಸೋಮವಾರ ವೈಭವದಿಂದ ನಡೆಯಿತು.

ಲಿಂ.ಶಿವಬಸವ ಮಹಾಶಿವಯೋಗಿ ಹಾಗೂ ಶಿವಲಿಂಗ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಪುಷ್ಪಾಲಂಕೃತ ರಥೋತ್ಸವದಲ್ಲಿ ಉಭಯಶ್ರೀಗಳ ಭಾವಚಿತ್ರಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವಶ್ರೀ, ಕೂಡಲದ ಗುರುಮಹೇಶ್ವರಶ್ರೀ, ಶಂಕರಲಿಂಗಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಭಯಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ಕಲಾತಂಡಗಳ ಮೆರುಗು

ಹುಕ್ಕೇರಿಮಠದಿಂದ ಹೊರಟ ಮೆರವಣಿಗೆಯು ಸಕಲ ವಾದ್ಯ ವೈಭವ ಹಾಗೂ ಕಲಾತಂಡಗಳೊಂದಿಗೆ ಕಳೆಗಟ್ಟಿತು.ಶಿರಸಿಯ ಬೇಡರ ವೇಷ, ಸುಳ್ಯದ ಜಗ್ಗಲಿಗೆ, ಶ್ಯಾಗೋಟಿ ಕೋಲಾಟ, ರಾಣೆಬೆನ್ನೂರಿನ ಹನುಮಾನ್‌ ಬ್ಯಾಂಡ್‌, ಲಿಂಗದೇವರಕೊಪ್ಪದ ಸಮಾಳ ಮೇಳ, ಇಜಾರಿಲಕಮಾಪುರದ ಜಾಂಜ್‌, ದಾವಣಗೆರೆಯ ನಂದಿಕೋಲು, ಹಾವೇರಿಯ ಸದಾಶಿವ ಗೊಂಬೆ ಬಳಗ, ಮಾದನಹಿಪ್ಪರಗಿಯ ಪುರವಂತಿಕೆ ಮುಂತಾದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಐರಣಿಯ ಆನೆಯು ಉತ್ಸವದ ಕೇಂದ್ರ ಬಿಂದುವಾಗಿತ್ತು. ಹುಕ್ಕೇರಿಮಠದ ಶ್ರೀಗಳಿಗೆ ನಮಿಸಿ, ಭಕ್ತರ ಮನಗೆದ್ದಿತು.

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಬೀದಿಯ ಎರಡೂ ಬದಿಯ ಮನೆಗಳ ಮಹಡಿಗಳನ್ನು ಏರಿ ಜನರು ಕುಳಿತಿದ್ದರು. ಕೆಲವರು ಮರ, ಮೆಟ್ಟಿಲುಗಳ ಮೇಲೆ ನಿಂತು ಶ್ರೀಗಳಿಗೆ ನಮಿಸಿದರು. ಮೆರವಣಿಗೆಯು ಮನೆಗಳ ಮುಂದೆ ಬಂದಾಗ, ಭಕ್ತರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಸುರಿಸುವ ಮೂಲಕ ಧನ್ಯರಾದರು. ಕೆಲವರು ಕಲಾವಿದರಿಗೆ ಟೀ, ಕಾಫಿ, ಪಾನಕ ನೀಡಿ ಸೇವೆ ಸಲ್ಲಿಸಿದರು. ಕರಡಿ ವಾದ್ಯದ ನಾದಕ್ಕೆ ಜನರು ನಿಂತಲ್ಲೇ ಕುಣಿಯತೊಡಗಿದರು. ಮಹಿಳೆಯರು ರಥವನ್ನು ಮುಟ್ಟಿ ನಮಸ್ಕರಿಸಿದರು.

ರಥ ಬೀದಿಯನ್ನು ಜನರು ತಳಿರು ತೋರಣಗಳಿಂದ ಸಿಂಗರಿಸಿದ್ದರು. ಮಹಿಳೆಯರು ಮನೆಗಳ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ ರಥವನ್ನು ಸ್ವಾಗತಿಸಿದರು. ಕೆಲವರು ತಮ್ಮ ಮನೆ, ಅಂಗಡಿಗಳಿಗೆ ದೀಪಾಲಂಕಾರ ಮಾಡಿದ್ದು ವಿಶೇಷವಾಗಿತ್ತು.

ಆಟಿಕೆಗಳಿಗೆ ಮುಗಿಬಿದ್ದ ಮಕ್ಕಳು

ಹುಕ್ಕೇರಿ ಮಠದ ಜಾತ್ರೆ ಅಂಗವಾಗಿ ಮೆರವಣಿಗೆ ನಡೆಯುವ ಬೀದಿಯ ಎರಡೂ ಬದಿಗಳಲ್ಲಿ ಮಕ್ಕಳ ಆಟಿಕೆಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಪೀಪಿ, ಕೊಳಲು, ಗೊಂಬೆ, ಬಲೂನು, ಪುಟಾಣಿ ಕಾರು, ಕನ್ನಡಕ, ಟೋಪಿಗಳನ್ನು ಕೊಳ್ಳಲು ಮಕ್ಕಳು ಪೋಷಕರೊಂದಿಗೆ ಮುಗಿಬಿದ್ದರು. ತಳಿರು ತೋರಣ, ಹೂಕುಂಡ, ಗೃಹ ಅಲಂಕಾರಿಕ ವಸ್ತುಗಳು, ದೇವರ ಫೋಟೊಗಳು, ರಂಗೋಲಿ ಸಾಮಗ್ರಿ ಮುಂತಾದವುಗಳ ಖರೀದಿ ಭರಾಟೆ ಜೋರಾಗಿತ್ತು.

ಬಾಯಲ್ಲಿ ನೀರೂರಿಸುವ ಜಿಲೇಬಿ, ಮಿಠಾಯಿ, ಮಿರ್ಚಿ ಬಜ್ಜಿ, ಗಿರ್ಮಿಟ್‌, ಬೋಂಡ, ವಡೆ, ಹುರಿದ ಶೇಂಗಾ, ಬಟಾಣಿ, ಕಬ್ಬಿನ ಹಾಲು, ತಂಪು ಪಾನೀಯ, ಐಸ್‌ಕ್ರೀಮ್‌ ಮುಂತಾದ ತಿಂಡಿ ತಿನಿಸುಗಳ ಮಾರಾಟ ಭರ್ಜರಿಯಾಗಿತ್ತು.

ಮೆರವಣಿಗೆಯಲ್ಲಿ ಶಾಸಕ ನೆಹರು ಓಲೇಕಾರ, ಮಾಜಿ ಶಾಸಕ ಶಿವರಾಜ ಸಜ್ಜನ, ಜಿ.ಪಂ. ಸದಸ್ಯ ಕೊಟ್ರೇಶಪ್ಪ ಬಸೇಗೆಣ್ಣಿ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ ಸೇರಿದಂತೆ ವಿವಿಧ ಗಣ್ಯರು, ಮಠಾಧೀಶರು, ಸಂತರು, ಮಠಧ ಭಕ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.