ADVERTISEMENT

ಹುಲ್ಲತ್ತಿ | ಪಟ್ಟಣಕ್ಕೆ ಹತ್ತಿರ: ಸೌಲಭ್ಯದಿಂದ ದೂರ 

ಮುಕ್ತೇಶ ಕೂರಗುಂದಮಠ
Published 5 ಫೆಬ್ರುವರಿ 2025, 4:41 IST
Last Updated 5 ಫೆಬ್ರುವರಿ 2025, 4:41 IST
ರಾಣೆಬೆನ್ನೂರು ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹೊರ ನೋಟ
ರಾಣೆಬೆನ್ನೂರು ತಾಲ್ಲೂಕಿನ ಹುಲ್ಲತ್ತಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹೊರ ನೋಟ    

ರಾಣೆಬೆನ್ನೂರು: ತಾಲ್ಲೂಕಿನ ಹುಲ್ಲತ್ತಿ ಪಟ್ಟಣಕ್ಕೆ 5 ಕಿ.ಮೀ. ಹತ್ತಿರವಿದ್ದರೂ ಮೂಲಸೌಲಭ್ಯಗಳಿಂದ ದೂರ ಉಳಿದಿದೆ. ರಸ್ತೆ, ಚರಂಡಿ ಸೌಕರ್ಯಗಳಿಲ್ಲದೇ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ನಗರದ ಮುಕ್ತಿಧಾಮದಿಂದ ಹುಲ್ಲತ್ತಿ ಗ್ರಾಮಕ್ಕೆ ತೆರಳುವ ರಸ್ತೆ ಎರಡು ಬದಿಗೆ ಜಾಲಿ ಮುಳ್ಳಿನ ಕಂಠಿ ಬೆಳೆದು ರಸ್ತೆಯನ್ನು ಅಕ್ರಮಿಸಿ, ತೆಗ್ಗುಗುಂಡಿಗಳು ಬಿದ್ದಿವೆ. ಮಳೆಗಾಲದಲ್ಲಿ ಹೆಚ್ಚಿನ ನೀರು ರಸ್ತೆ ಮೇಲೆ ಹರಿಯುವುದರಿಂದ ವಾಹನ ಸಂಪರ್ಕ ಕಡಿತಗೊಳ್ಳುತ್ತದೆ.

ಗ್ರಾಮದಲ್ಲಿ 125ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, 800ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಮಳೆಯಾಶ್ರಿತ ಬೇಸಾಯ ಅವಲಂಭಿಸಿರುವ ಗ್ರಾಮಸ್ಥರು ದಿನಾಲು ಹೊಟ್ಟೆ ಹೊರೆಯಲು ಪಟ್ಟಣಕ್ಕೆ ಹಾದಿ ಹಿಡಿಯುವ ಸ್ಥಿತಿ ಇದೆ. ಇದುವರೆಗೂ ಬಸ್ ಸೌಲಭ್ಯವಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಆಟೊ, ಟಂಟಂ ಗಾಡಿ ಹಿಡಿದು ಹೋಗಬೇಕು.

ADVERTISEMENT

ಯುವಕರಿಗೆ ಕನ್ಯೆ ಕೊಡಲು ಯಾರು ಮುಂದೆ ಬರುತ್ತಿಲ್ಲ. ಕುಗ್ರಾಮ ಎಂದು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಈ ಗ್ರಾಮವು ಹಿಂದುಳಿದ ಗ್ರಾಮವಾಗಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸವಾಗಿದ್ದು, ಉದ್ಯೋಗಕ್ಕಾಗಿ ಸೀಡ್ಸ್ ಕಂಪನಿ, ಹೋಟೆಲ್, ಹಮಾಲಿ, ಗಾರ್ಮೆಂಟ್ಸ್, ಕಟ್ಟಡ ಕಾರ್ಮಿಕರು, ಕೃಷಿ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಪಟ್ಟಣವನ್ನೇ ಅವಲಂಭಿಸಿದ್ದಾರೆ.

ಹುಲ್ಲತ್ತಿ ಬಳಿಯ ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಾಜ್ಯ ಹೆದ್ದಾರಿ- 57 ರಿಂದ ಕೇವಲ 800 ಮೀ ಅಂತರವಿರುವ ಹುಲ್ಲತ್ತಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು. 5 ದಶಕಗಳಿಂದ ಸಾರ್ವಜನಿಕವಾಗಿ ವಹಿವಾಟಿನಲ್ಲಿದ್ದು, ಅಧಿಕೃತವಾಗಿ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಜನತೆ ಒತ್ತಾಸೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಲೊಕೋಪಯೋಗಿ ಇಲಾಖೆಯ ಉಪವಿಭಾಗದ ಎಇಇ ರಾಮಪ್ಪ ಹನುಮಂತ ದೊಡ್ಡಮನಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಈ ರಾಜ್ಯ ಹೆದ್ದಾರಿಯಿಂದ ಹುಲ್ಲತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಧ್ಯದಲ್ಲಿ ಬರುವಂತಹ ಜಮೀನುಗಳ ಸರ್ವೆ ನಂಬರಗಳ ಮಾಹಿತಿ ಪಡೆದುಕೊಂಡ ಶೀಘ್ರದಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿ ಅಧಿಕೃತ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.

ಇಲ್ಲಿ 154 ವರ್ಷಗಳ ಪುರಾತನ ಇತಿಹಾಸ ಹೊಂದಿದ ಆಂಜನೇಯಸ್ವಾಮಿ ಭಾವೈಕ್ಯದ ದೇವಸ್ಥಾನವಿದೆ. ಕಾರ್ತೀಕ ಮಾಸದ ಹೊಸ್ತಿಲ ಹುಣ್ಣಿಮೆಗೆ ಪಲ್ಲಕ್ಕಿ , ದಾಸಪ್ಪರು ಮತ್ತು ಜೋಗುತಿಯರ ಉತ್ಸವ, ಬಾಳೆ ಹಣ್ಣಿನ ಭೂತದ ಸೇವೆ ನಡೆಯತ್ತದೆ. ಸದ್ಯ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆದಿದ್ದು, ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಬೇಕು ಎಂದು ರವಿ ಓಲೇಕಾರ ಒತ್ತಾಯಿಸಿದರು.

ಕಳೆದ 5 ದಶಕಗಳಿಂದ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ವರೆಗೂ ಹೋರಾಟ ಮಾಡುತ್ತ ಬಂದಿದ್ದೇವೆ. ಸರ್ವೆ ಕಾರ್ಯ ಬಿಟ್ಟರೆ ರಸ್ತೆ ನಿರ್ಮಾಣವಾಗಿಲ್ಲ
ಜಗದೀಶ ಕೆರೂಡಿ, ಅಧ್ಯಕ್ಷ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿ
ಹುಲ್ಲತ್ತಿ ಗ್ರಾಮಕ್ಕೆ ತೆರಳುವ ರಸ್ತೆ ಅಭಿವೃದ್ದಿ ಪಡಿಸಲು ಸರ್ಕಾರದಿಂದ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು
ಪ್ರಕಾಶ ಕೋಳಿವಾಡ ಶಾಸಕ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.