ADVERTISEMENT

ಅಪಹರಣ ಪ್ರಕರಣ: ಪತ್ನಿ ಹುಡುಕಿಕೊಡುವಂತೆ ಪತಿ ಕಣ್ಣೀರು

ಪೊಲೀಸ್‌ ಅಧಿಕಾರಿಯ ಮೇಲೆ ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 16:19 IST
Last Updated 10 ಏಪ್ರಿಲ್ 2021, 16:19 IST
ವೀರೇಶ ಮತ್ತು ದಿವ್ಯಶ್ರೀ ದಂಪತಿ
ವೀರೇಶ ಮತ್ತು ದಿವ್ಯಶ್ರೀ ದಂಪತಿ   

ಹಾವೇರಿ: ‘ಹರಪನಹಳ್ಳಿತಾಲ್ಲೂಕು ಬೆಣ್ಣಿಹಳ್ಳಿಯ ಸಂಬಂಧಿಕರ ಮನೆಗೆ ಹೋದ ಸಂದರ್ಭದಲ್ಲಿ ಪೊಲೀಸರ ಸೋಗಿನಲ್ಲಿ ಬಂದ ನಾಲ್ವರು ನನ್ನ ಪತ್ನಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅಪಹರಣವಾಗಿ 20 ದಿನ ಕಳೆದರೂ ಪತ್ನಿ ಪತ್ತೆಯಾಗಿಲ್ಲ. ಪತ್ನಿ ಹುಡುಕಿಕೊಡಲು ಸ್ಥಳೀಯ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ರಾಣೆಬೆನ್ನೂರು ನಗರದವೀರೇಶ ಅಡಿವೆಪ್ಪನವರ ದೂರಿದರು.

‘ಮಾರ್ಚ್‌ 20ರಂದು ನಡೆದ ಅಪಹರಣದ ಬಗ್ಗೆ ರಾಣೆಬೆನ್ನೂರು ನಗರ ಠಾಣೆಗೆ ದೂರು ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಪತ್ನಿ ದಿವ್ಯಶ್ರೀ ಐದು ತಿಂಗಳ ಗರ್ಭಿಣಿಯಾಗಿದ್ದು, ಆಕೆಯ ಆರೋಗ್ಯದ ಬಗ್ಗೆ ತೀವ್ರ ಚಿಂತೆಯಾಗಿದೆ’ ಎಂದು ದುಃಖ ತೋಡಿಕೊಂಡಿದ್ದಾರೆ.

‘ನಾವು ಪರಸ್ಪರ ಪ್ರೀತಿಸಿ 2020ರ ಜೂನ್‌ 28ರಂದು ಮದುವೆಯಾಗಿದ್ದೇವೆ. ಇದು ದಿವ್ಯಶ್ರೀ ಅವರ ಕುಟುಂಬದ ಹಿರಿಯ ಪೊಲೀಸ್‌ ಅಧಿಕಾರಿಗೆ ಹಾಗೂ ಅವರ ಮನೆಯವರಿಗೆ ಇಷ್ಟವಿರಲಿಲ್ಲ. 2021ರ ಮಾರ್ಚ್‌ 10ರಂದುತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಿದ್ದೇವೆ’ ಎಂದರು.

ADVERTISEMENT

‘ಶಿವಮೊಗ್ಗದ ಹಿರಿಯ ಪೊಲೀಸ್‌ ಅಧಿಕಾರಿಗಳೇ ನನ್ನ ಪತ್ನಿಯನ್ನು ಅಪಹರಣ ಮಾಡಿಸಿ, ನನ್ನನ್ನು ಪತ್ನಿಯಿಂದ ದೂರ ಮಾಡಿದ್ದಾರೆ. ದಿವ್ಯಶ್ರೀ ಅವರ ತಂದೆ ದಿ.ಪ್ರೊ.ಎನ್‌.ಎಸ್‌. ಕಟಗಿ ಅವರು ರಾಣೆಬೆನ್ನೂರು ನಗರದಲ್ಲಿ ಈ ಹಿಂದೆ ಬಾಡಿಗೆಗೆ ವಾಸವಿದ್ದ ಮನೆಯನ್ನು ಪೊಲೀಸರು ಮಹಜರು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ನನ್ನ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ತಳ್ಳುವ ಹುನ್ನಾರ ಮಾಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಹಿನ್ನೆಲೆ:ರಾಣೆಬೆನ್ನೂರಿನ ಉಮಾಶಂಕರನಗರದ ನಿವಾಸಿ ವೀರೇಶ ಅಡಿವೆಪ್ಪವರ ವೃತ್ತಿಯಿಂದ ಕಾರು ಚಾಲಕ. ಇವರ ಮನೆಯ ಪಕ್ಕದಲ್ಲೇ ದಿವ್ಯಶ್ರೀ ಅವರು ತಂದೆ–ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಂದೆ ಮರಣದ ನಂತರ, ತಾಯಿಯ ತವರು ಮನೆ ಶಿವಮೊಗ್ಗಕ್ಕೆ ಹೋಗಿ ತಾಯಿ ಮತ್ತು ಮಗಳು ನೆಲೆಸಿದ್ದರು.

ನಂತರ ವೀರೇಶ ಕೂಡ ಶಿವಮೊಗ್ಗದಲ್ಲೇ ಕಾರು ಚಾಲಕನಾಗಿ ಕೆಲಸ ಆರಂಭಿಸಿದ.ಈ ಸಂದರ್ಭದಲ್ಲಿ ದಿವ್ಯಶ್ರೀ ಮತ್ತು ವೀರೇಶ ಅವರ ನಡುವೆ ಸ್ನೇಹ ಬೆಳೆದು, ನಂತರ ವಿವಾಹವಾಗಿದ್ದರು ಎನ್ನಲಾಗಿದೆ.

‘ನನ್ನನ್ನು ಯಾರು ಕಿಡ್ನಾಪ್‌ ಮಾಡಿಲ್ಲ. ನನ್ನ ತಾಯಿ ಜೊತೆ ಹೋಗಿದ್ದೇನೆ ಎಂದು ದಾವಣಗೆರೆ ಠಾಣೆಗೆ ದಿವ್ಯಶ್ರೀ ವರದಿ ನೀಡಿದ್ದಾರೆ. ಶೀಘ್ರದಲ್ಲೇ ಪ್ರಕರಣ ರಾಣೆಬೆನ್ನೂರು ಠಾಣೆಗೆ ವರ್ಗವಾಗಲಿದೆ’ ಎಂದುರಾಣೆಬೆನ್ನೂರು ಠಾಣೆ ಇನ್‌ಸ್ಪೆಕ್ಟರ್‌ ಎಂ.ಐ.ಗೌಡಪ್ಪಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.