
ಸವಣೂರು: ತಾಲ್ಲೂಕಿನ ಹೂವಿನಶಿಗ್ಲಿ ವಿರಕ್ತಮಠದ 47ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಕರ ಸಂಕ್ರಮಣಕಾಲದ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಮಹಾ ರಥೋತ್ಸವವು ಅತ್ಯಂತ ವೈಭವಪೂರ್ಣವಾಗಿ ನೆರವೇರಿತು.
ಪ್ರಾಥಕಾಲ ಲಿಂ. ನಿರಂಜನ ಶ್ರೀಗಳ ಕರ್ತೃ ಗದ್ದುಗೆ ರುದ್ರಾಭಿಷೇಕ, ವಿಶೇಷ ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ನೆರವೇರಿದವು. ನಂತರ ಸೂರಣಗಿ ಹಾಗೂ ಯಲವಿಗಿ ಗ್ರಾಮದ ಪುರವಂತರ ಮೇಳದ ವೀರಗಾಸೆಯೊಂದಿಗೆ, ಲಿಂ. ನಿರಂಜನ ಶ್ರೀಗಳ ಭಾವಚಿತ್ರದ ಹಾಗೂ ಗುರು ಗುಹೇಸಿದ್ದೇಶ್ವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಅತ್ಯಂತ ಶೃದ್ಧಾ ಭಕ್ತಿಯಿಂದ ನೆರವೇರಿತು.
ಸಂಜೆ 4 ಗಂಟೆಗೆ ಸಹಸ್ರ ಭಕ್ತ ಸಮೂಹ ಹಾಗೂ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀಮಠದ ಚನ್ನವೀರ ಸ್ವಾಮೀಜಿ ಅವರ ತುಲಾಭಾರ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಬಳಿಕ ನಡೆದ ಮಹಾ ರಥೋತ್ಸವಕ್ಕೆ ಬೆಳಗಾವಿಯ ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಶಿ. ಬಾಳೇಹೊಸೂರ ಚಾಲನೆ ನೀಡಿದರು.
ಡೊಳ್ಳು, ನಂದಿಕೋಲು, ಕೀಲು ಕುದುರೆ ನೃತ್ಯ ಸೇರಿದಂತೆ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀಮಠದ ಮಹಾದ್ವಾರದಿಂದ ಆರಂಭಗೊಂಡ ಮಹಾರಥೋತ್ಸವಕ್ಕೆ ಸಹಸ್ರಾರು ಸದ್ಭಕ್ತರು, ಭಕ್ತಿ ಭಾವದಿಂದ ಬಾಳೆಹಣ್ಣು, ಉತ್ತತ್ತಿಗಳನ್ನು ರಥಕ್ಕೆ
ಎಸೆದರು.
ಶ್ರೀಮಠದ ಮಹಾದ್ವಾರದಿಂದ ಆರಂಭಗೊಂಡ ಮಹಾರಥೋತ್ಸವ ವನ್ನು ಗ್ರಾಮದ ಪಾದಗಟ್ಟೆ ವರೆಗೆ ಎಳೆಯಲಾಯಿತು. ಪುನಃ ಶ್ರೀಮಠದ ಮಹಾದ್ವಾರಕ್ಕೆ ಸಮಾರೋಪಗೊಂಡಿತು. ರಥೋತ್ಸವ ತೆರಳುವ ಬೀದಿಗಳಲ್ಲಿ ಜಗಜ್ಯೋತಿ ಬಸವೇಶ್ವರರ ಹಾಗೂ ಲಿಂ.ನಿರಂಜನ ಶ್ರೀಗಳ ಜಯಘೋಷ ಮೊಳಗಿದವು.
ರಥೋತ್ಸವದಲ್ಲಿ ಶ್ರೀಮಠದ ಚನ್ನವೀರ ಶ್ರೀಗಳು, ಕುಂದಗೋಳದ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು, ಗುಡ್ಡದಾನ್ವೇರಿ ಶಿವಯೋಗಿಶ್ವರ ಸ್ವಾಮೀಜಿ, ಹಿರೇಮಲ್ಲನಕೇರಿ ಅಭಿನವ ಚನ್ನಬಸವ ಸ್ವಾಮೀಜಿ ನೆರದಿದ್ದ ಭಕ್ತರಿಗೆ ಆಶೀರ್ವದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.