ADVERTISEMENT

ಹಾವೇರಿ | ‘ಐಐಎಫ್‌ಎಲ್‌’ ನಕಲಿ ಆ್ಯಪ್; ಲೆಕ್ಕಾಧಿಕಾರಿಗೆ ₹75.42 ಲಕ್ಷ ವಂಚನೆ

ಸಂತೋಷ ಜಿಗಳಿಕೊಪ್ಪ
Published 5 ಸೆಪ್ಟೆಂಬರ್ 2025, 3:55 IST
Last Updated 5 ಸೆಪ್ಟೆಂಬರ್ 2025, 3:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಹಣಕಾಸು ವ್ಯವಹಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಐಎಫ್‌ಎಲ್ (ಇಂಡಿಯಾ ಇನ್ಫೊಲೈನ್ ಫೈನಾನ್ಸ್ ಲಿಮಿಟೆಡ್) ಕಂಪನಿ ಹೆಸರಿನಲ್ಲಿ ನಕಲಿ ಆ್ಯಪ್ ಸೃಷ್ಟಿಸಿ, ಜಿಲ್ಲೆಯ ಲೆಕ್ಕಾಧಿಕಾರಿಯೊಬ್ಬರಿಂದ ಹಂತ ಹಂತವಾಗಿ ₹75.42 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಜುಲೈ 13ರಿಂದ ಆಗಸ್ಟ್ 14ರ ವರೆಗಿನ ಅವಧಿಯಲ್ಲಿ ನಡೆದಿರುವ ವಂಚನೆ ಬಗ್ಗೆ ಲೆಕ್ಕಾಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಹಾವೇರಿಯ ಸೆನ್ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಾದ ನೇಮ್‌ಕುಮಾರ ಹಾಗೂ ಸ್ನೇಹಾ ಶಾರದಾ ಎಂಬುವವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಐಎಫ್‌ಎಲ್‌, ದೇಶ ಹಾಗೂ ವಿದೇಶದಲ್ಲೂ ಹಣಕಾಸು ವ್ಯವಹಾರ ನಡೆಸುತ್ತಿದೆ. ಇದೇ ಕಂಪನಿಯ ಪ್ರತಿನಿಧಿಗಳೆಂದು ಲೆಕ್ಕಾಧಿಕಾರಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ಕಂಪನಿಯ ಹೆಸರು ಹೋಲುವ ರೀತಿಯಲ್ಲಿದ್ದ ಜಾಲತಾಣದ ಲಿಂಕ್ ಕಳುಹಿಸಿದ್ದರು. ನಂತರ, ನಕಲಿ ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿಸಿದ್ದರು. ಬಳಿಕವೇ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಲೆಕ್ಕದಲ್ಲಿ ಪಳಗಿದ್ದ ದೂರುದಾರ:

‘ರಾಣೆಬೆನ್ನೂರಿನ ನಿವಾಸಿಯಾದ ದೂರುದಾರ, ಲೆಕ್ಕದಲ್ಲಿ ಪಳಗಿದವರು. ತಮ್ಮದೇ ಸಂಸ್ಥೆಯೊಂದನ್ನು ರಚಿಸಿಕೊಂಡು, ವ್ಯಾಪಾರಿಗಳು ಹಾಗೂ ಕಂಪನಿಗಳಿಗೆ ಲೆಕ್ಕ ಪತ್ರಗಳ ಸೇವೆ ನೀಡುತ್ತಿದ್ದರು. ಅವರ ಕೆಲಸಕ್ಕೆ ಪತ್ನಿ ಸಹ ಸಹಕಾರ ನೀಡುತ್ತಿದ್ದಾರೆ. ಇಬ್ಬರೂ ಸೇರಿ ಕೆಲಸ ಮಾಡುತ್ತ, ಹಣ ಉಳಿತಾಯ ಮಾಡಿದ್ದರು. ಅದೇ ಹಣವನ್ನು ಈಗ ವಂಚಕರು ದೋಚಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ದೂರುದಾರರಿಗೆ ಐಐಎಫ್‌ಎಲ್‌ ಬಗ್ಗೆ ಹಾಗೂ ಆ ಕಂಪನಿಯ ಕಾರ್ಯವೈಖರಿಯ ಜ್ಞಾನವೂ ಇತ್ತು. ಇದನ್ನು ಹೇಗೋ ತಿಳಿದುಕೊಂಡಿದ್ದ ಆರೋಪಿಗಳು, ಅದೇ ಕಂಪನಿ ಹೆಸರಿನಲ್ಲಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.

ಕರೆ ಮಾಡಿ ಪರಿಚಯ:

‘ದೂರುದಾರರ ಮೊಬೈಲ್‌ಗೆ ಜುಲೈ 13ರಂದು ನಾಲ್ಕು ಪ್ರತ್ಯೇಕ ನಂಬರ್‌ಗಳಿಂದ ಕರೆ ಮಾಡಿದ್ದ ಆರೋಪಿಗಳು, ತಾವು ಐಐಎಫ್‌ಎಲ್‌ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡಿದ್ದರು. ಬಳಿಕವೇ ಐಐಎಫ್‌ಐ ಫೈನಾನ್ಸ್ ಹೆಸರಿನ ಎರಡು ಜಾಲತಾಣಗಳ ಲಿಂಕ್‌ ಕಳುಹಿಸಿದ್ದರು. ಐಐಎಫ್ಎಲ್‌ ವಿಐಪಿ ವೆಲ್ತ್ ಪಾಟ್ನರ್ ಗ್ರೂಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ, ಬಹಳಷ್ಟು ಲಾಭ ಬರುವುದಾಗಿ ನಂಬಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಮಾತು ನಂಬಿದ್ದ ದೂರುದಾರ, ಹೂಡಿಕೆ ಮಾಡಲು ಮುಂದಾಗಿದ್ದರು. ಅವಾಗಲೇ ಆರೋಪಿಗಳು, ಆ್ಯಪ್‌ ಇನ್‌ಸ್ಟಾಲ್ ಮಾಡಿಸಿದ್ದರು. ಆರಂಭದಲ್ಲಿ ಸ್ವಲ್ಪ ಹಣವನ್ನು ದೂರುದಾರರು, ಆ್ಯಪ್‌ಗೆ ಹಾಕಿದ್ದರು. ಆ್ಯಪ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಹೂಡಿಕೆ ಹಾಗೂ ಲಾಭದ ಹಣ ತೋರಿಸಿತ್ತು. ಹಣ ಹೆಚ್ಚಾಗಿದ್ದನ್ನು ಗಮನಿಸಿದ್ದ ಅವರು, ತಮ್ಮ ಹಾಗೂ ಪತ್ನಿಯ ವಿವಿಧ ಖಾತೆಗಳಿಂದ ಹಂತ ಹಂತವಾಗಿ ₹ 75.42 ಲಕ್ಷ ಹೂಡಿಕೆ ಮಾಡಿದ್ದರು. ಆದರೆ, ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆರೋಪಿಗಳು ಸಹ ತೆರಿಗೆ ತುಂಬಿದರೆ ಮಾತ್ರ ಹಣ ಬರುವುದಾಗಿ ಹೇಳಿ ದಿನದೂಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು..

‘ಇತ್ತೀಚಿಗೆ ಐಐಎಫ್‌ಎಲ್‌ ಅಸಲಿ ಕಂಪನಿಯವರು, ತಮ್ಮ ಹೆಸರಿನಲ್ಲಿ ನಕಲಿ ಆ್ಯಪ್‌ ಸೃಷ್ಟಿಯಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದರು. ಅದನ್ನು ನೋಡಿದ್ದ ದೂರುದಾರರಿಗೆ ವಂಚನೆ ಬಗ್ಗೆ ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಷ್ಠಿತ ಕಂಪನಿ ಸಂಸ್ಥೆ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ಜಾಲತಾಣ ಆ್ಯಪ್‌ ಸೃಷ್ಟಿಸುತ್ತಿದ್ದಾರೆ. ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದಾರೆ. ಇಂಥ ಜಾಲತಾಣ ಆ್ಯಪ್ ನಂಬುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು
ಸಂತೋಷ ಪವಾರ ಇನ್‌ಸ್ಪೆಕ್ಟರ್ (ಪ್ರಭಾರ) ಹಾವೇರಿ ಸೆನ್‌ ಠಾಣೆ

ಎಂಜಿನಿಯರ್ ಡಿಜಿಟಲ್ ಅರೆಸ್ಟ್:

₹ 11.35 ಲಕ್ಷ ವಂಚನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನಿವಾಸಿಯಾಗಿರುವ ಎಂಜಿನಿಯರ್‌ವೊಬ್ಬರನ್ನು ಅಪರಾಧ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ₹ 11.35 ಲಕ್ಷ ಪಡೆದು ವಂಚಿಸಲಾಗಿದ್ದು ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ 27 ವರ್ಷ ವಯಸ್ಸಿನ ಯುವತಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆಗಸ್ಟ್ 20ರಂದು ದೂರುದಾರರಿಗೆ ಕರೆ ಮಾಡಿದ್ದ ಆರೋಪಿ ರಾಹುಲ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ‘ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಬಳಸಿ ದೇಶದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ಎಸಗಲಾಗಿದೆ. ನಿಮ್ಮ ವಿರುದ್ಧ ಮುಂಬೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಮ್ಮನ್ನು ಸದ್ಯದಲ್ಲೇ ಬಂಧಿಸಲಾಗುವುದು. ಬಂಧಿಸಬಾರದೆಂದರೆ ಹಣ ನೀಡಬೇಕು’ ಎಂದು ಆರೋಪಿ ಹೇಳಿದ್ದ. ಆತನ ಮಾತಿನಿಂದ ಹೆದರಿದ್ದ ಯುವತಿ ಹಂತ ಹಂತವಾಗಿ ₹ 11.35 ಲಕ್ಷ ನೀಡಿದ್ದರು. ಇದಾದ ನಂತರವೂ ಆರೋಪಿ ಹಣ ಕೇಳಿದ್ದ. ಬೇಸತ್ತ ಯುವತಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು. ‘ಪೊಲೀಸರ ಹೆಸರಿನಲ್ಲಿ ಬಂಧಿಸುವುದಾಗಿ ಹೇಳಿ ಹಣ ದೋಚುತ್ತಿರುವ ಘಟನೆಗಳು ನಡೆಯುತ್ತಿವೆ. ಇಂಥ ಪ್ರಕರಣಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಪೊಲೀಸರ ಹೆಸರಿನಲ್ಲಿ ಕರೆಗಳು ಬಂದರೆ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.