ಹಾನಗಲ್: ‘ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಡ್ರಗ್ಸ್ ಹಾವಳಿ ಹಾಗೂ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಅಮಾಯಕರು ಭಯಭೀತರಾಗಿದ್ದಾರೆ’ ಎಂದು ಆರೋಪಿಸಿ ಸ್ಥಳೀಯರು ಹಾನಗಲ್‌ನಲ್ಲಿ ಭಾನುವಾರ ಸಭೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಹಾನಗಲ್‌ನ ಅಂಬೇಡ್ಕರ ಭವನದಲ್ಲಿ ಸಭೆ ನಡೆಸಿದ ವ್ಯಾಪಾರಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು, ಅಪರಾಧ ತಡೆ ಹಾಗೂ ಅಪರಾಧಗಳ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿದರು.
‘ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ದುರ್ಬಲರು, ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ವ್ಯಾಪಾರಸ್ಥರು ವ್ಯಾಪಾರ ಮಾಡಲು ಹೆದರುತ್ತಿದ್ದಾರೆ. ಶಾಲಾ–ಕಾಲೇಜುಗಳ ಬಳಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ’ ಎಂದು ಆರೋಪಿಸಿದರು.
‘ಗಾಂಜಾ, ಅಫೀಮು, ಜೂಜು, ಮಟ್ಕಾ ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಅಕ್ರಮಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿಲ್ಲ’ ಎಂದು ದೂರಿದರು.
‘ಕಿಡಿಗೇಡಿಗಳು ಹಾಗೂ ಮೀಟರ್ ಬಡ್ಡಿ ದಂಧೆಗಾರರು, ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಾನಗಲ್ ಜನರನ್ನು ಭಯಭೀತಗೊಳಿಸಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ನೊಂದವರು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ, ಅಪರಾಧ ಪ್ರಕರಣ ದಾಖಲಿಸಲು ಅವಕಾಶ ಸಿಗುತ್ತಿಲ್ಲ’ ಎಂದು ಆರೋಪಿಸಿದರು.
‘ಅಪರಾಧ ಕೃತ್ಯ ತಡೆಯಲು ಹಾಗೂ ಅಮಾಯಕರನ್ನು ಕಾಪಾಡಲು ಜಾಗೃತಿ ಹೋರಾಟ ನಡೆಯಬೇಕಿದೆ. ಅಪರಾಧ ಕೃತ್ಯ ನಡೆಯದಂತೆ ಬೇರು ಸಹಿತ ಕಿತ್ತು ಹಾಕಬೇಕಿದೆ. ಇದಕ್ಕಾಗಿ ಹೋರಾಟಕ್ಕೂ ಬದ್ಧರಾಗಬೇಕಿದೆ. ಹಾನಗಲ್ ಪಟ್ಟಣ ಮಾತ್ರವಲ್ಲದೇ ಜಿಲ್ಲಾಧಿಕಾರಿ ಕಚೇರಿ, ಎಸ್‌ಪಿ ಕಚೇರಿವರೆಗೆ ಪಾದಯಾತ್ರೆ ತೆರಳಿ ನಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಕೇಳಬೇಕಿದೆ’ ಎಂದರು.
‘ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಏಜೆಂಟರ ಹಾವಳಿಯೂ ಹೆಚ್ಚಾಗಿದೆ. ಸಮಾಜ ಘಾತುಕರು, ದುಷ್ಟ ಶಕ್ತಿಗಳು ಹಾಗೂ ಗೂಂಡಾಗಳ ವಿರುದ್ಧ ನಮ್ಮ ಹೋರಾಟ. ನೊಂದವರ ಪರವಾಗಿ ಎಲ್ಲರೂ ಹೋರಾಡೋಣ’ ಎಂದು ಜನರು ತೀರ್ಮಾನಿಸಿದರು.
ಎಲ್ಲ ಸಮುದಾಯಗಳ ಪದಾಧಿಕಾರಿಗಳು, ವ್ಯಾಪಾರಸ್ಥರ ಸಂಘಗಳು ಹಾಗೂ ಪಟ್ಟಣದ ಹಿರಿಯರನ್ನು ಒಳಗೊಂಡು ಜನಜಾಗೃತಿ ಸಮಿತಿ ರಚಿಸಿ ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜೊತೆಗೆ, ಶಾಸಕ ಶ್ರೀನಿವಾಸ್ ಮಾನೆ ಹಾಗೂ ಪೊಲೀಸರ ಜೊತೆ ಇನ್ನೊಂದು ಸಭೆ ನಡೆಸಿ ಚರ್ಚಿಸುವ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಂಜಣ್ಣ ನಾಗಜ್ಜನವರ, ಗುರುರಾಜ ನಿಂಗೋಜಿ, ನಾಗೇಂದ್ರ ತುಮರಿಕೊಪ್ಪ, ರವೀಂದ್ರ ದೇಶಪಾಂಡೆ, ಕಲ್ಯಾಣಕುಮಾರ ಶೆಟ್ಟರ, ರವಿಚಂದ್ರ ಪುರೋಹಿತ, ಭೋಜರಾಜ ಕರೂದಿ, ಗಣೇಶ ಮೂಡ್ಲಿಯವರ, ಅನಂತವಿಕಾಸ ನಿಂಗೋಜಿ, ರಾಮು ಯಳ್ಳೂರ, ಬಸವರಾಜ ಹಾದಿಮನಿ, ಸುರೇಶ ದೊಡ್ಡಕುರುಬರ, ಚಂದ್ರು ಉಗ್ರಣ್ಣನವರ, ಶಿವಕುಮಾರ ಆಲದಕಟ್ಟಿ, ಲೋಕೇಶ ಕೊಂಡೋಜಿ, ಆದರ್ಶ ಶೆಟ್ಟಿ, ಸುರೇಶ ಸಿಂಧೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.