ADVERTISEMENT

ಅಳಿವಿನ ಅಂಚಿನಲ್ಲಿ ಜೈನ್‌ ಧರ್ಮ: ವಿಷಾದ

ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ | ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರ ಸಾನ್ನಿಧ್ಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 3:02 IST
Last Updated 14 ಡಿಸೆಂಬರ್ 2025, 3:02 IST
ಹಾವೇರಿಯ ರಜನಿ ಸಭಾಂಗಣದಲ್ಲಿ ಶನಿವಾರ ನಡೆದ ‘ಜೈಮ್‌ ಸಾಹಿತ್ಯ ಸಮ್ಮೇಳನ’ದಲ್ಲಿ ಆಚಾರ್ಯ ವಿದ್ಯಾಸಾಗರ ಮಹಾರಾಜರ ಚಿತ್ರ ಅನಾವರಣಗೊಳಿಸಲಾಯಿತು 
ಹಾವೇರಿಯ ರಜನಿ ಸಭಾಂಗಣದಲ್ಲಿ ಶನಿವಾರ ನಡೆದ ‘ಜೈಮ್‌ ಸಾಹಿತ್ಯ ಸಮ್ಮೇಳನ’ದಲ್ಲಿ ಆಚಾರ್ಯ ವಿದ್ಯಾಸಾಗರ ಮಹಾರಾಜರ ಚಿತ್ರ ಅನಾವರಣಗೊಳಿಸಲಾಯಿತು    

ಹಾವೇರಿ: ‘ಜೈನ್ ಧರ್ಮದ ತತ್ವ, ಇಡೀ ಜಗತ್ತಿಗೆ ಗೊತ್ತಿದೆ. ಆದರೆ, ಇಂದು ಜೈನ್‌ ಧರ್ಮವೇ ಅಳಿವಿನ ಅಂಚಿಗೆ ಬಂದಿರುವುದು ವಿಷಾದಕರ ಸಂಗತಿ. ಸಮಾಜದವರು ಎಚ್ಚೆತ್ತುಕೊಂಡು, ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವುದು ಅನಿವಾರ್ಯವಾಗಿದೆ’ ಎಂದು ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ‘ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ’ದ ಎರಡನೇ ದಿನವಾದ ಶನಿವಾರ ನಡೆದ ‘ಜೈಮ್‌ ಸಾಹಿತ್ಯ ಸಮ್ಮೇಳನ’ದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಪ್ರಾಚೀನ ಹಿನ್ನೆಲೆಯುಳ್ಳ ಜೈನ್‌ ಧರ್ಮದವರ ಜನಸಂಖ್ಯೆ, 2500 ವರ್ಷಗಳ ಹಿಂದೆ 38 ಕೋಟಿಯಿತ್ತು. ಆದರೆ, ಈಗ ಎರಡು ಕೋಟಿಗೆ ಕಡಿಮೆಯಾಗಿದೆ. ಹೀಗಾಗಿ, ಜೈನ್‌ ಧರ್ಮ ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಸಂಸ್ಕಾರದ ಅಭಾವದಿಂದ ಜೈನ್‌ರನ್ನು ಜೈನ್‌ರನ್ನಾಗಿ ಮಾಡುವುದು ಕಠಿಣವಾಗಿದೆ. ಜೈನ್‌ ಧರ್ಮ ಬಹಳ ಸರಳವಾಗಿದೆ. ಇದನ್ನು ಇಂದಿನ ಮಕ್ಕಳಿಗೆ ತಿಳಿಸಬೇಕು. ಬಾಲ್ಯದಲ್ಲೇ ಸಂಸ್ಕಾರ ಕಲಿಕಸಬೇಕು’ ಎಂದು ಹೇಳಿದರು.

ADVERTISEMENT

‘ಅನೇಕ ಗ್ರಾಮಗಳಲ್ಲಿ ವಿಹಾರ ಮಾಡಿದಾಗ, ಧರ್ಮವು ಅವನತಿ ಕಡೆಗೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ರಾಜ್ಯದಾದ್ಯಂತ ನಗರ ಹಾಗೂ ಗ್ರಾಮಗಳಲ್ಲಿ ಶ್ರಾವಕ ಸಂಸ್ಕಾರ ಶಿಬಿರಗಳನ್ನು ಮಾಡಲು ಚಿಂತನೆ ಮಾಡಲಾಗುತ್ತಿದೆ’ ಎಂದರು.

ಸಮ್ಮೇಳನ ಉದ್ಘಾಟಿಸಿದ ಹಾವೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆಕರ್ಶ್ ಎಂ. ಅವರು ಮಾತನಾಡಿ, ‘ಜೈನ್‌ ಸಾಹಿತ್ಯವು ಪ್ರಾಚೀನವಾಗಿದೆ. ಪ್ರಾಕೃತಿ, ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿದೆ. ಜೈನ್ ಸಾಹಿತ್ಯಕ್ಕೆ ಹಾಗೂ ಕಾನೂನಿಗೆ ಅವಿನಾಭಾವ ಸಂಬಂಧವಿದೆ. ಜೈನ್‌ ಧರ್ಮ ಪಾಲನೆ ಮಾಡಿದರೆ, ಎಲ್ಲ ಕಾನೂನು ಪಾಲನೆ ಮಾಡಿದಂತೆ’ ಎಂದು ತಿಳಿಸಿದರು.

ಧಾರವಾಡದ ಜಿನದತ್ತ ಹಡಗಲಿ ಅವರು ‘ಕನ್ನಡ ಜೈನ ಸಾಹಿತ್ಯ ಬೆಳೆದು ಬಂದ ದಾರಿ’, ಶ್ರವಣಬೆಳಗೊಳದ ಜೀವಂಧರಕುಮಾರ ಹೋತಪೇಟೆ ಅವರು ‘ಜೈನ ದರ್ಶನ’ ಹಾಗೂ ಹರಿಹರದ ರವಿಕುಮಾರ ನವಲಗುಂದ ಅವರು ‘ಹಾವೇರಿ ಜಿಲ್ಲೆಯ ಜೈನ್‌ ಶಾಸನಗಳು’ ಕುರಿತು ಉಪನ್ಯಾಸ ನೀಡಿದರು.

ಹುಬ್ಬಳ್ಳಿ ಮಹಾವೀರ ಕೃತಕ ಕಾಲು ಜೋಡಣಾ ಕೇಂದ್ರದ ಅಧ್ಯಕ್ಷ ಮಹೇಂದ್ರ ಸಿಂಘಿ, ಚಂದ್ರನಾಥ ಕಳಸೂರ, ಅಂಬಾಲಾಲ್ ಜೈನ್‌, ಸುನೀಲ ಚಂದ್ರಪ್ಪ ಆರೆಗೊಪ್ಪ, ಸತೀಶ ಕುಲಕರ್ಣಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಸುಜಿತ ಜೈನ್, ವಿಮಲ ತಾಳಿಕೋಟಿ, ಮಾಣಿಕಚಂದ ಲಾಡರ ಇದ್ದರು.

Cut-off box - ‘ಜೈನ್‌ ಸಾಹಿತ್ಯ ಶ್ರೀಮಂತ’ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿಜಿಪಿ ಜಿನೇಂದ್ರ ಖಣಗಾವಿ ಮಾತನಾಡಿ ‘ಕನ್ನಡ ಸಾಹಿತ್ಯದ ಬಹುಭಾಗ ಜೈನ ಸಾಹಿತ್ಯವಾಗಿದೆ. ಪಂಪ ರನ್ನ ಜನ್ನ ಸೇರಿದಂತೆ ಜೈನ್‌ ಕವಿಗಳು ಹಾಗೂ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜೈನ್‌ ಸಾಹಿತ್ಯ ಶ್ರೀಮಂತವಾಗಿದೆ. ನಾನು ಐಪಿಎಸ್ ಅಧಿಕಾರಿಯಾಗಲು ಜೈನ್‌ ಸಾಹಿತ್ಯವೂ ಕಾರಣವಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.