
ಹಾವೇರಿ: ‘ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯದಲ್ಲಿ ನೇಮಕಾತಿ, ಟೆಂಡರ್ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ. ಖೊಟ್ಟಿ ದಾಖಲೆ ಕೊಟ್ಟು ಸಹಾಯಕ ಕುಲಸಚಿವ ಹುದ್ದೆ ಪಡೆದಿರುವ ಶಹಜಹಾನ ಮುದಕವಿ, ಕುಲಪತಿ ಹಾಗೂ ಸಿಬ್ಬಂದಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ಅಕ್ರಮ ಮುಚ್ಚಿಕೊಳ್ಳುತ್ತಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ವಿವಿಗೆ ಬೀಗ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಜಾನಪದ ಸ್ವಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾನಪದ ವಿಶ್ವವಿದ್ಯಾಲಯ ಉಳಿಸಲು ಹಾಗೂ ಅಕ್ರಮ ಎಸಗಿದವರಿಗೆ ಶಿಕ್ಷೆಯಾಗಬೇಕೆಂದು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ, ನಾವು ಹಣಕ್ಕೆ ಬೇಡಿಕೆ ಇರಿಸಿದ್ದಾಗಿ ಮುದಕವಿ ಇಲ್ಲಸಲ್ಲದ ಆರೋಪ ಮಾಡಿ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳು ಆರೋಪ ಮಾಡಿರುವ ಮುದಕವಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಹೇಳಿದರು.
‘ಜಾನಪದ ವಿವಿಯಲ್ಲಿ ನ. 24ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತಮ್ಮ ಅಕ್ರಮ ನೇಮಕಾತಿ ಪ್ರಶ್ನಿಸಿದ ಸದಸ್ಯರ ಜೊತೆಗೆಯೂ ಮುದಕವಿ ದುರ್ನಡತೆ ತೋರಿದ್ದಾರೆ. ನೋಟಿಸ್ ನೀಡುವಂತೆ ಸದಸ್ಯರು ನಡಾವಳಿ ಮಾಡಿದ್ದರೂ ನೋಟಿಸ್ ಜಾರಿಯಾಗಿಲ್ಲ. ಬೆದರಿಕೆಗೆ ಹೆದರಿ ಪ್ರಭಾರಿ ಕುಲಸಚಿವ ಸಹ ರಾಜೀನಾಮೆ ನೀಡಿದ್ದಾರೆ. ಕುಲಪತಿ ಹಾಗೂ ಸಿಬ್ಬಂದಿಯನ್ನು ಸಹ ಮುದಕವಿ ಹೆದರಿಸುತ್ತಿದ್ದಾರೆ. ತಮ್ಮ ಮೇಲೆ ಕ್ರಮವಾದರೆ, ಎಲ್ಲರ ಅಕ್ರಮಗಳನ್ನು ಬಿಚ್ಚಿಡುವುದಾಗಿ ಬೆದರಿಸುತ್ತಿರುವುದಾಗಿ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ದೂರಿದರು.
ಆರೋಪಿ ಪರ ನಿಂತ ಕುಲಪತಿ: ‘ಮುದಕವಿ ಅವರ ಅಕ್ರಮ ನೇಮಕಾತಿಗೆ ಸಂಬಂಧಪಟ್ಟಂತೆ ಕುಲಪತಿ ಟಿ.ಎಂ. ಭಾಸ್ಕರ್ ಅವರಿಗೆ 175 ಪುಟಗಳ ದಾಖಲೆ ಸಮೇತ ದೂರು ನೀಡಲಾಗಿದೆ. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಲೇ ದಿಕ್ಕು ತಪ್ಪಿಸುತ್ತಿದ್ದಾರೆ. ಆರೋಪಿ ಪರ ನಿಂತಿದ್ದಾರೆ. ತನಿಖೆ ನಡೆದರೆ ಎಲ್ಲವೂ ಹೊರಗೆ ಬರುತ್ತದೆ’ ಎಂದು ಹೇಳಿದರು.
‘ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಹಾಗೂ ಶಿಕ್ಷಣ ತಜ್ಞರ ನೇತೃತ್ವದ ಸಮಿತಿ ರಚಿಸಬೇಕು. ನಮ್ಮ ಬಳಿಯೂ ದಾಖಲೆಯಿದ್ದು, ಅದನ್ನು ಸಮಿತಿಗೆ ನೀಡುತ್ತೇವೆ. ಜೊತೆಗೆ, ಬಹಿರಂಗ ಚರ್ಚೆಗೆ ಬಂದರೂ ದಾಖಲೆ ತೋರಿಸಲು ಸಿದ್ಧರಿದ್ದೇವೆ’ ಎಂದು ಸವಾಲು ಹಾಕಿದರು.
‘ನಾಲ್ವರು ಹೋರಾಟಗಾರರು ₹ 4 ಲಕ್ಷ ಕೇಳಿರುವುದಾಗಿ ಸಹಾಯಕ ಕುಲಸಚಿವ ಸುಳ್ಳು ಆರೋಪ ಮಾಡಿದ್ದು, ಇದಕ್ಕೆ ಅವರು ದಾಖಲೆ ಕೊಡಬೇಕು. ಹಂಪಿ ವಿಶ್ವವಿದ್ಯಾಲಯದಲ್ಲಿ ಮುದಕವಿ ಪಡೆದಿರುವ ಪದವಿ ಪ್ರಮಾಣ ಪತ್ರ ಖೊಟ್ಟಿಯಾಗಿದ್ದು, ಇದನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸದನದಲ್ಲಿ ಮಾತನಾಡಿದ್ದ ಶಾಸಕ
‘ನೇಮಕಾತಿ ಅಕ್ರಮದ ವಿರುದ್ಧ 2023ರಲ್ಲಿ ಬೆಳಗಾವಿಯ ಸುವರ್ಣಸೌಧದ ಎದುರು ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಹೋರಾಟ ಮಾಡಲಾಗಿತ್ತು. ಇದನ್ನು ಗಮನಿಸಿದ್ದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಸದನದಲ್ಲೂ ವಿಷಯ ಪ್ರಸ್ತಾಪಿಸಿದ್ದರು. ತನಿಖೆ ಮಾಡುವುದಾಗಿಯೂ ಸಚಿವರು ಹೇಳಿದ್ದರು. ಆದರೆ ಇದುವರೆಗೂ ತನಿಖೆ ನಡೆದಿಲ್ಲ’ ಎಂದು ರಾಜ್ಯ ಜಾನಪದ ಸ್ವಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಉಪಾಧ್ಯಕ್ಷ ನಾಗರಾಜ ಎಸ್. ಹೇಳಿದರು. ‘ಇದೇ 18ರಂದು ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಕ್ರಮ ನೇಮಕಾತಿ ಕುರಿತು ತನಿಖೆಗೆ ಸಮಿತಿ ರಚನೆ ಆಗುವವರೆಗೂ ಹೋರಾಟ ನಡೆಸಲಾಗುವುದು’ ಎಂದರು.
‘ನ್ಯಾಯಾಲಯ ಅಧಿಕಾರಿಗಳಿಗೆ ದಾಖಲೆ ನೀಡಲಿ’
‘ಜಾನಪದ ಕಲಾವಿದನಾಗಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವೀಧರನಾಗಿ ಎಲ್ಲ ಅರ್ಹತೆಗಳನ್ನು ಪೂರೈಸಿ ಸಹಾಯಕ ಕುಲಸಚಿವ ಆಗಿದ್ದೇನೆ. ನನ್ನನ್ನು ಹೆದರಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ. ನನ್ನ ವಿರುದ್ಧ ಏನಾದರೂ ದಾಖಲೆ ಇದ್ದರೆ ನ್ಯಾಯಾಲಯ ಅಥವಾ ಸರ್ಕಾರದ ಅಧಿಕಾರಿಗಳಿಗೆ ನೀಡಲಿ. ಯಾವುದೇ ತನಿಖೆಯಾದರೂ ಎದುರಿಸಲು ನಾನು ಸಿದ್ಧ’ ಎಂದು ಜಾನಪದ ವಿವಿ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು ‘ವೈಯಕ್ತಿಕ ವಿಷಯ ಇಟ್ಟುಕೊಂಡು ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಹಾಗೂ ವಿವಿ ಮರ್ಯಾದೆ ತೆಗೆಯಲಾಗುತ್ತಿದೆ. ಇದನ್ನೆಲ್ಲ ನಿಲ್ಲಿಸಬೇಕು. ನಾನು ಪ್ರಾಮಾಣಿಕ ಎಂಬುದನ್ನು ನಿರೂಪಿಸಲು ಬಹಿರಂಗ ಚರ್ಚೆಗೂ ಸಿದ್ಧ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.