ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 533 ಅಭ್ಯರ್ಥಿಗಳು ಕೆಲಸಕ್ಕೆ ಆಯ್ಕೆಯಾದರು.
ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಜಿಲ್ಲೆಯ 1,120 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಪದವಿ ಹಾಗೂ ಇತರೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಯುವಕ–ಯುವತಿಯರು ಮೇಳದಲ್ಲಿ ಪಾಲ್ಗೊಂಡಿದ್ದರು.
ಉದ್ಯೋಗ ವಿನಿಮಯ ಕೇಂದ್ರ ಹಾಗೂ ಟೀಮ್ ಆಪತ್ಬಾಂಧವ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೇಳದಲ್ಲಿ ರಾಜ್ಯದ ವಿವಿಧ ನಗರಗಳ 25ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಕಾಲೇಜಿಗೆ ಆಗಮಿಸಿದ್ದ ಅಭ್ಯರ್ಥಿಗಳ ಸ್ವ–ವಿವರ ಪಡೆದುಕೊಂಡು ನೋಂದಣಿ ಮಾಡಿಕೊಳ್ಳಲಾಯಿತು. ನಂತರ, ಅಭ್ಯರ್ಥಿಗಳು ಆಸಕ್ತ ಕಂಪನಿಗಳ ಪ್ರತಿನಿಧಿಗಳ ಎದುರು ಹಾಜರಾದರು. ಸಾಮಾನ್ಯ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿದ ಕಂಪನಿ ಪ್ರತಿನಿಧಿಗಳು, ತಮ್ಮ ಹುದ್ದೆಗೆ ಅರ್ಹರಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.
ಉದ್ಯೋಗ ಮೇಳದ ಪಾಲ್ಗೊಂಡು ಕೆಲಸಕ್ಕೆ ಆಯ್ಕೆಯಾದ ಹಲವು ಅಭ್ಯರ್ಥಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಅವರು ಸ್ಥಳದಲ್ಲಿ ನೇಮಕಾತಿ ಪತ್ರ ವಿತರಿಸಿದರು. ಇನ್ನು ಹಲವರಿಗೆ ಉದ್ಯೋಗದ ಅವಕಾಶದ ಪತ್ರ ನೀಡಲಾಗಿದೆ. ನೇಮಕಾತಿ ಪತ್ರ ಪಡೆಯಲು ಅವರಿಗೆ ಕಾಲಾವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.