ADVERTISEMENT

ಹಾವೇರಿ: ಸಂಭ್ರಮದ ಜೋಕುಮಾರನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:53 IST
Last Updated 28 ಆಗಸ್ಟ್ 2020, 16:53 IST
ಹಾವೇರಿ ತಾಲ್ಲೂಕು ನಾಗನೂರು ಗ್ರಾಮದಲ್ಲಿ ಮನೆ ಬಾಗಿಲಿಗೆ ಜೋಕುಮಾರನನ್ನು ಹೊತ್ತು ತಂದಿದ್ದ ಮಹಿಳೆಯರಿಗೆ ಗ್ರಾಮಸ್ಥರು ಧಾನ್ಯ ನೀಡಿ, ವಿಶೇಷ ಪೂಜೆ ಸಲ್ಲಿಸಿದರು   
ಹಾವೇರಿ ತಾಲ್ಲೂಕು ನಾಗನೂರು ಗ್ರಾಮದಲ್ಲಿ ಮನೆ ಬಾಗಿಲಿಗೆ ಜೋಕುಮಾರನನ್ನು ಹೊತ್ತು ತಂದಿದ್ದ ಮಹಿಳೆಯರಿಗೆ ಗ್ರಾಮಸ್ಥರು ಧಾನ್ಯ ನೀಡಿ, ವಿಶೇಷ ಪೂಜೆ ಸಲ್ಲಿಸಿದರು      

ಹಾವೇರಿ: ವಿಘ್ನಗಳು ಕಳೆಯಲಿ, ಯಶಸ್ಸು ಸಿಗಲಿ ಎಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಿದ ಜನರು, ಈಗ ಮನೆ–ಮನೆಗಳಿಗೆ ಬರುತ್ತಿರುವ ಜೋಕುಮಾರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಿದ್ದಾರೆ.

ಬಿದಿರಿನ ಬುಟ್ಟಿಯಲ್ಲಿ ಜೋಕುಮಾರ ಮೂರ್ತಿಯನ್ನು ಕೂರಿಸಿ, ತಲೆ ಮೇಲೆ ಹೊತ್ತ ಮಹಿಳೆಯರು ನಾಗನೂರು ಗ್ರಾಮದ ಮನೆ–ಮನೆಗಳಿಗೆ ಧಾವಿಸಿದರು. ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಅಲಂಕರಿಸಿದ ಜೋಕುಮಾರ ಮೂರ್ತಿ ಗಮನಸೆಳೆಯಿತು. ಜನಪದ ಹಾಡುಗಳನ್ನು ಗುನುಗುತ್ತಾ, ಗ್ರಾಮಸ್ಥರಿಂದ ದವಸ ಧಾನ್ಯಗಳನ್ನು ಮಹಿಳೆಯರು ಸ್ವೀಕರಿಸಿದರು.

‘ಜೋಕುಮಾರನನ್ನು ಪೂಜಿಸಿದರೆ ಮಳೆ–ಬೆಳೆ ಚೆನ್ನಾಗಿ ಆಗುತ್ತದೆ. ನಾಡು ಸಮೃದ್ಧಿಯಾಗುತ್ತದೆ ಎಂಬುದು ಪ್ರತೀತಿ. ಗಣಪತಿ ಪ್ರತಿಷ್ಠಾಪನೆ ಮಾಡಿದ 6ನೇ ದಿನ ಜೋಕುಮಾರ ಹುಟ್ಟುತ್ತಾನೆ ಎಂಬ ನಂಬಿಕೆಯಿದೆ. ಆತನನ್ನು 7 ದಿನ 7 ಹಳ್ಳಿಗಳಿಗೆ ಗಂಗಾಮತಸ್ಥ ಮಹಿಳೆಯರು ಮೆರವಣಿಗೆ ಮಾಡುತ್ತಾರೆ. ನಂತರ 7ನೇ ದಿನ ಸಂಜೆ ವರದಾ ನದಿಗೆ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ’ ಎಂದು ನಾಗನೂರ ಗ್ರಾಮದ ಹನುಮಂತ ಆಲದಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.