ಬ್ಯಾಡಗಿ: ಪಟ್ಟಣದ ಬಿಇಎಸ್‌ಎಂ ಪದವಿ ಕಾಲೇಜು ಮೈದಾನದಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ನೇತೃತ್ವದಲ್ಲಿ ತರಬೇತಿ ಪಡೆದಿದ್ದ ಕರ್ನಾಟಕ ಮಹಿಳಾ ತಂಡ ತಮಿಳುನಾಡಿನ ರಾಮನಾಥಪುರಂನಲ್ಲಿ ಫೆ. 2ರಂದು ನಡೆದ ಲಂಗಡಿ ನ್ಯಾಷನಲ್ಸ್ ಪಂದ್ಯಾವಳಿಯಲ್ಲಿ ಗುಜರಾತ್ ತಂಡವನ್ನು ಮಣಿಸುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪರಮಕುಡಿ ಕಾವಿನಾ ಇಂಟರ್ ನಾಷನಲ್ಸ್ ಸ್ಟೇಡಿಯಂನಲ್ಲಿ ಜರುಗಿದ ಅಂತಿಮ ಪಂದ್ಯದಲ್ಲಿ ಕರ್ನಾಟಕದ ಮಹಿಳೆಯರು 4 (09–05) ಅಂಕಗಳಿಂದ ಗುಜರಾತ್ ತಂಡವನ್ನು ಸುಲಭವಾಗಿ ಮಣಿಸುವ ಮೂಲಕ ರಾಷ್ಟ್ರೀಯ ಪಟ್ಟವನ್ನು ಅಲಂಕರಿಸಿದರು. ಡಿಫೆಂಡರ್ ಮತ್ತು ಅಟ್ಯಾಕರ್ ಎರಡೂ ವಿಭಾಗದಲ್ಲಿ ಚಾಕಚಕ್ಯತೆಯ ಪ್ರದರ್ಶನ ನೀಡಿದ ರಾಜ್ಯ ತಂಡ ಕಳೆದ ಬಾರಿಯ ಚಾಂಪಿಯನ್ ಗುಜರಾತ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಅಟ್ಯಾಕರ್ ನಲ್ಲಿ ರೇಖಾ ಜಾಡರ್, ಅರ್ಪಿತಾ ಮಡಿವಾಳರ, ರಕ್ಷಿತಾ ಬಾಸೂರ, ರುಕ್ಸಾರ್ ಖತೀಬ್ ಉತ್ತಮ ಪ್ರದರ್ಶನ ನೀಡಿದರು. ಕೋಚ ಮಂಜುಳಾ ಭಜಂತ್ರಿ ಹಾಗೂ ನಾಯಕಿ ಅಶ್ವಿನಿ ಕರಿಯಣ್ಣನವರ ಮಾರ್ಗದರ್ಶನದಲ್ಲಿ ಡಿಫೆಂಡರ್ ಗಳಾದ ಗೀತಾ ದಾಸಣ್ಣನವರ, ಸುಜಾತಾ ಸೂರದ, ನಂದಿತಾ ಮಾತನವರ, ಸ್ಪೂರ್ತಿ ಸೂರದ, ರಕ್ಷಿತಾ ಮಡಿವಾಳರ, ಸ್ನೇಹಾ ಅಂಬಿಗೇರ, ಸಾನಿಕಾ, ಬಾಳು, ಢವಣಿ ಉತ್ತಮ ಪ್ರದರ್ಶನ ನೀಡಿದರು.
ವಿನೂತನ ದಾಖಲೆ : ಪ್ರಶಸ್ತಿ ಹಂತಕ್ಕೆ ತಲುಪಿ ಕಳೆದ ಮೂರು ವರ್ಷಗಳಿಂದ ಮುಗ್ಗುರಿಸಿದ್ದ ಕರ್ನಾಟಕ ಮಹಿಳಾ ತಂಡ ಈ ಬಾರಿ ಸಂಘಟಿತ ಹೋರಾಟದಿಂದ ಜಯದ ಗುರಿಯನ್ನು ತಲುಪಿ ದಾಖಲೆ ನಿರ್ಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.