ADVERTISEMENT

ಹಾವೇರಿ: ‘ಕಾಲುಬಾಯಿ’ ಲಸಿಕೆ ನಾಳೆಯಿಂದ

ಜಿಲ್ಲೆಯಲ್ಲಿ 3.46 ಲಕ್ಷ ಜಾನುವಾರು; ನ.15ರವರೆಗೆ ಪಶು ವೈದ್ಯಾಧಿಕಾರಿಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 17:18 IST
Last Updated 30 ಸೆಪ್ಟೆಂಬರ್ 2020, 17:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹಾವೇರಿ: ‘ಕಾಲುಬಾಯಿ ಬೇನೆ ರೋಗ ನಿರ್ಮೂಲನೆಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣಾ ಕಾರ್ಯಕ್ರಮದಡಿ ಅ.2ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪಲ್ಸ್ ಪೋಲಿಯೊ ಮಾದರಿಯಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಪಶು ವೈದ್ಯಾಧಿಕಾರಿಗಳ ತಂಡಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣಾ ಕಾರ್ಯಕ್ರಮದಡಿ ಮೊದಲ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿದರು.

ಅ.2ರಿಂದ ನ.15ರವರೆಗೆ ನಲವತ್ತೈದು ದಿನಗಳ ಕಾಲ ಮೊದಲನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕೆಯನ್ನು ಜಾನುವಾರುಗಳಿಗೆ ಪಶುವೈದ್ಯಕೀಯ ನೇತೃತ್ವದಲ್ಲಿ ನಡೆಯಲಿದೆ. ಈ ಲಸಿಕಾ ಕಾರ್ಯಕ್ರಮದಲ್ಲಿ ಕೆ.ಎಂ.ಎಫ್., ಹಾಲು ಸೊಸೈಟಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಒಳಗೊಂಡಂತೆ ವಿವಿಧ ಇಲಾಖೆಗಳು ಅಗತ್ಯ ನೆರವು ನೀಡಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಮಾತನಾಡಿ, ‘ಮೊದಲ ಹಂತದಲ್ಲಿ ಜಾನುವಾರುಗಳಿಗೆ ಚರ್ಮ, ಗಂಟುರೋಗ ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕಾಲುಬಾಯಿ ಬೇನೆ ಲಸಿಕೆ ಹಾಕಿ ಮುಗಿಸಿ. ನಂತರದ ದಿನಗಳಲ್ಲಿ ಇತರ ಪ್ರದೇಶದ ಜಾನುವಾರುಗಳಿಗೆ ಲಸಿಕಾ ಹಾಕುವ ಕಾರ್ಯಕೈಗೊಳ್ಳಿ ಎಂದು ಸಲಹೆ ನೀಡಿದರು.

ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪನಿರ್ದೇಶಕ ರಾಜು ಕೂಲೇರ ಮಾತನಾಡಿ, ‘ಜಿಲ್ಲೆಯ ಏಳು ತಾಲ್ಲೂಕಿನ 698 ಹಳ್ಳಿಗಳಲ್ಲಿ 3,46,561 ಜಾನುವಾರುಗಳಿವೆ (ದನ,ಎಮ್ಮೆ ಮತ್ತು ಹಂದಿಗಳಿಗೆ). ಈ ಜಾನುವಾರುಗಳಿಗೆ 3.47 ಲಕ್ಷ ಡೋಸ್‍ಗಳ ಲಸಿಕೆ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಸರಬರಾಜಾಗಿದೆ. ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ 40 ಲಸಿಕಾ ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲ ಜಾನುವಾರುಗಳಿಗೆ 12 ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಳಗೊಂಡ ‘ಕಿವಿಯೋಲೆ’ ಹಾಕುವ ಕಾರ್ಯಕ್ರಮವನ್ನು ಸಹ ಅನುಷ್ಠಾನಗೊಳಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಜಿಲ್ಲೆಗೆ ಒಟ್ಟು 2.46 ಲಕ್ಷ ಕಿವಿ ಓಲೆಗಳು ಸರಬರಾಜಾಗಿದೆ. ಈವರೆಗೆ 56,000 ಕಿವಿ ಓಲೆಗಳನ್ನು ಜಾನುವಾರುಗಳಿಗೆ ಹಾಕಿ ‘ಇನಾಫ್’ ತಂತ್ರಾಂಶದಲ್ಲಿ ಮಾಹಿತಿಯನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ವಿವಿಧ ತಾಲೂಕಾ ಪಶುವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.