ADVERTISEMENT

ಹಾವೇರಿ: ಸಮಾಜ ಸೇವಕ ಎಂ.ಎಸ್. ಕೋರಿಶೆಟ್ಟರ್‌ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ 

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 16:01 IST
Last Updated 30 ಅಕ್ಟೋಬರ್ 2022, 16:01 IST
ಎಂ.ಎಸ್. ಕೋರಿಶೆಟ್ಟರ್
ಎಂ.ಎಸ್. ಕೋರಿಶೆಟ್ಟರ್   

ಹಾವೇರಿ: ಸಮಾಜ ಸೇವಕ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಸ್ಥಳೀಯ ಬಸವೇಶ್ವರ ನಗರದ ನಿವಾಸಿಯಾಗಿರುವ ಎಂ.ಎಸ್. ಕೋರಿಶೆಟ್ಟರ್‌ ಅವರು ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ವಿಜಯಪುರ, ಧಾರವಾಡ, ಹಾವೇರಿಯಲ್ಲಿ ಶಿಕ್ಷಣ ಪೂರೈಸಿರುವ ಇವರು ಬಿಎ ಪದವಿ ಪಡೆದಿದ್ದಾರೆ.

1975ರಿಂದ ಇಲ್ಲಿಯವರೆಗೂ ಅನೇಕ ಜನಪರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೆಪಿ ಚಳವಳಿ, ತುಂಗಾ ಮೇಲ್ದಂಡೆ ನೀರಾವರಿ ಹೋರಾಟ, ಸ್ವಾತಂತ್ರ ಹೋರಾಟಗಾರ ಎಚ್.ಎಸ್. ರುದ್ರಪ್ಪ ನಾಯಕತ್ವದ ರೈತ ಹೋರಾಟ, ಹಾವೇರಿ ಪ್ರತ್ಯೇಕ ಜಿಲ್ಲಾ ರಚನೆಗೆ ಹೋರಾಟ, ಗೋಕಾಕ್‌ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

ಶಿಗ್ಗಾವಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರಿಗೆ ‘ಸಮಾಜ ಸೇವಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

‘ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಹೋರಾಟಗಾರರಿಗೆ ಗೌರವ ನೀಡಿದಂತಾಗಿದೆ’ ಎಂದು ಎಂ.ಎಸ್. ಕೋರಿಶೆಟ್ಟರ್ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.