ADVERTISEMENT

ಹಾವೇರಿಯಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಮನಸೆಳೆದ ಹೋರಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 14:10 IST
Last Updated 4 ಜೂನ್ 2023, 14:10 IST
ಹಾವೇರಿ ತಾಲ್ಲೂಕಿನ ಕಳಸೂರ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಭಾನುವಾರ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು 
ಹಾವೇರಿ ತಾಲ್ಲೂಕಿನ ಕಳಸೂರ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಭಾನುವಾರ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು    

ಹಾವೇರಿ: ಕಾರಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಕಳಸೂರು ಗ್ರಾಮದಲ್ಲಿ ಭಾನುವಾರ ಕೊಬ್ಬರಿ ಹೋರಿ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.

ನೂರಾರು ಜನರು ನೆರೆದು ಇಷ್ಟದ ಹೋರಿಗಳಿಗೆ ಜೈಕಾರ ಹಾಕಿ, ಶಿಳ್ಳೆ, ಚಪ್ಪಾಳೆಗಳ ಮೂಲಕ ಹರ್ಷೋದ್ಗಾರ ಮಾಡಿ ಖುಷಿ ಪಟ್ಟರು. ಅಲಂಕೃತ ಹೋರಿಗಳು ಜನರ ಗುಂಪಿನ ಮಧ್ಯೆ ನಾಗಾಲೋಟದಲ್ಲಿ ಓಡುತ್ತಾ ಜನರನ್ನು ರಂಜಿಸಿದವು.  

ಕಾರಹುಣ್ಣಿಮೆ ಅಂಗವಾಗಿ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ರೈತರು ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದರು.

ADVERTISEMENT

ಮುಂಗಾರು ಆರಂಭದ ಮೊದಲ ಹಬ್ಬವೇ ಕಾರ ಹುಣ್ಣಿಮೆ ಆಗಿರುವ ಕಾರಣ, ರೈತರು ಕೃಷಿ ಕಾರ್ಯದ ಜೊತೆಗಾರ ಎತ್ತುಗಳಿಗೆ ನಮಿಸುವ ಹಬ್ಬ ಇದಾಗಿದೆ. ಭಾನುವಾರ ಬೆಳಿಗ್ಗೆಯಿಂದಲೇ ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಸಿಂಗಾರಗೊಳಿಸಿ ಕರಿ ಹರಿಯುವ ದೃಶ್ಯ ರೋಮಾಂಚನವಾಗಿತ್ತು.

ಹಬ್ಬದ ಪ್ರಯುಕ್ತ ಕೊಬ್ಬರಿ ಹೋರಿ ಸ್ಪರ್ಧೆಗೆ ಕರೆತಂದಿದ್ದ ಎತ್ತುಗಳನ್ನು ಸಾಲು ಸಾಲಾಗಿ ಓಡಿಸುತ್ತಾ ಯುವಕರು ಸಂಭ್ರಮಪಟ್ಟರು. ರೈತರು ಕರಿ ಹರಿದು ನಂತರ ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿಪಟ್ಟರು. ಮಹಿಳೆಯರು ವಿಶೇಷ ಪೂಜೆ ನೆರವೇರಿಸಿದರು. ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸಿ, ಕುಟುಂಬಸ್ಥರು ಸಂಭ್ರಮದಿಂದ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.