ADVERTISEMENT

ಹಾವೇರಿಯಲ್ಲಿ ರಾಜ್ಯ ಸರ್ಕಾರದ 1,000 ದಿನಗಳ ಸಾಧನಾ ಸಮಾವೇಶ: ಭರ್ಜರಿ ತಯಾರಿ

ಜಿಲ್ಲೆಯಲ್ಲಿ 175 ಬಸ್‌ಗಳ ವ್ಯವಸ್ಥೆ; ಕಂದಾಯ ಸಚಿವರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 2:13 IST
Last Updated 13 ಫೆಬ್ರುವರಿ 2026, 2:13 IST
<div class="paragraphs"><p>ಹಾವೇರಿಯಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿದ್ಧಪಡಿಸಿರುವ ವೇದಿಕೆ</p></div>

ಹಾವೇರಿಯಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿದ್ಧಪಡಿಸಿರುವ ವೇದಿಕೆ

   

ಹಾವೇರಿ: 2.76 ಲಕ್ಷ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ವೇದಿಕೆ. 76 ಸಾವಿರ ಆಸನ. 1.50 ಲಕ್ಷ ಜನರಿಗೆ ಊಟ. ಮೂರು ದಿಕ್ಕಿನಲ್ಲಿ ಪಾರ್ಕಿಂಗ್. ಪೊಲೀಸರ ಸರ್ಪಗಾವಲು ಹಾಗೂ 60 ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು.

ನಗರದ ಅಜ್ಜಯಸ್ವಾಮಿ ದೇವಸ್ಥಾನ ಬಳಿಯ ಬಯಲು ಜಾಗದಲ್ಲಿ ಫೆ.14ರಂದು ನಡೆಯಲಿರುವ ‘ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದ ತಯಾರಿಯಿದು. 

ADVERTISEMENT

ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಹಾಗೂ ಗಣ್ಯರು ಕುಳಿತುಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ. ವೇದಿಕೆಯ ಎದುರು ಹಾಗೂ ಎಡ–ಬಲದಲ್ಲಿ 76 ಸಾವಿರ ಆಸನಗಳನ್ನು ಹಾಕಲಾಗಿದೆ. ಜನರ ಪ್ರಯಾಣಕ್ಕೆ ಜಿಲ್ಲೆಯಲ್ಲಿ 175 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

60 ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ: ರಾಜ್ಯದ ಹಲವು ಜಿಲ್ಲೆಗಳಲ್ಲಿದ್ದ ಹಕ್ಕುಪತ್ರ ಫಲಾನುಭವಿಗಳು ಹಾವೇರಿಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಿದ್ದಾರೆ.

ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು, ಬೆಂಗಳೂರು, ಬೆಳಗಾವಿ ಜಿಲ್ಲೆ ಪೊಲೀಸರನ್ನೂ ಭದ್ರತೆ ಬಳಸಿಕೊಳ್ಳಲಾಗುತ್ತಿದೆ. ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರು, ಗುರುವಾರವೇ ನಗರಕ್ಕೆ ಬಂದಿದ್ದಾರೆ.

‘ರಾಜ್ಯದಲ್ಲಿಯೇ ಇದೊಂದು ದೊಡ್ಡ ಸಮಾವೇಶ ಆಗುವ ನಿರೀಕ್ಷೆಯಿದೆ. ಸಮಾವೇಶಕ್ಕೆ ಬರುವ ಜನರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೊತೆಗೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ವ್ಯಕ್ತಿಗಳ ಬಗ್ಗೆಯೂ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಎಸ್‌.ಪಿ. ಯಶೋಧಾ ವಂಟಗೋಡಿ ತಿಳಿಸಿದರು.

‘ಎಸ್‌.ಪಿ.ಯಿಂದ ಹಿಡಿದು ಕಾನ್‌ಸ್ಟೆಬಲ್‌ವರೆಗೂ ಪ್ರತಿಯೊಬ್ಬರು ಭದ್ರತೆ ಕೆಲಸ ಮಾಡಲಿದ್ದಾರೆ. ಪಾರ್ಕಿಂಗ್ ಜಾಗ, ಪ್ರವೇಶ ದ್ವಾರ, ಗಣ್ಯರ ಸಂಚಾರದ ರಸ್ತೆಗಳು, ವೇದಿಕೆ, ಊಟದ ಕೌಂಟರ್ ಎಲ್ಲ ಕಡೆಯೂ ಪೊಲೀಸರು ಇರಲಿದ್ದಾರೆ. ಸಮಾವೇಶದಲ್ಲಿ ನಡೆಯುವ ಪ್ರತಿಯೊಂದು ದೃಶ್ಯಗಳನ್ನು ಸೆರೆ ಹಿಡಿಯಲು 60 ಸಿ.ಸಿ.ಟಿ.ವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ. ಕ್ಯಾಮೆರಾ ದೃಶ್ಯಗಳ ವೀಕ್ಷಣೆ ಹಾಗೂ ಏನಾದರೂ ಸಮಸ್ಯೆಯಿದ್ದರೆ ತ್ವರಿತವಾಗಿ ತಿಳಿಸಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಹೇಳಿದರು.

ವಾಹನ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ: ‘ಹುಬ್ಬಳ್ಳಿ ಕಡೆಯಿಂದ, ದಾವಣಗೆರೆ ಕಡೆಯಿಂದ ಹಾಗೂ ಗುತ್ತಲ (ವಿಜಯನಗರ ಜಿಲ್ಲೆಯಿಂದ) ಕಡೆಯಿಂದ ವಾಹನಗಳು ಹಾವೇರಿಗೆ ಬರಲಿವೆ. ಮೂರು ದಿಕ್ಕಿನಿಂದ ಬರುವ ವಾಹನಗಳಿಗೆ ಮೂರು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಜಾಗದ ಒಂದು ಕಡೆಯಲ್ಲಿ ಪ್ರವೇಶ ಹಾಗೂ ಮತ್ತೊಂದು ಕಡೆಯಲ್ಲಿ ನಿರ್ಗಮನಕ್ಕೆ ಅವಕಾಶವಿದೆ. ಇದರಿಂದಾಗಿ ವಾಹನಗಳು ಸುಗಮ ರೀತಿಯಲ್ಲಿ ಸಂಚರಿಸಲಿವೆ’ ಎಂದು ಎಸ್‌.ಪಿ. ಹೇಳಿದರು.

‘ಸುಗಮ ಸಂಚಾರ ನಿರ್ವಹಣೆಗೆ 8 ಸಿಪಿಐ, 33 ಪಿಎಸ್‌ಐ, 45 ಎಎಸ್ಐ, 260 ಹೆಡ್‌ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ಸಹ ಪಾರ್ಕಿಂಗ್ ಜಾಗದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ಕಂದಾಯ ಸಚಿವ ಭೇಟಿ: ಸಮಾವೇಶದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಸಂಜೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಸಚಿವರ ಎದುರೇ ಕಳಚಿಬಿದ್ದ ಪೆಂಡಾಲ್

ಸಮಾವೇಶದ ಪ್ರಮುಖ ವೇದಿಕೆ ಬಲಭಾಗದಲ್ಲಿ ಊಟದ ವ್ಯವಸ್ಥೆಗಾಗಿ ಪೆಂಡಾಲ್ ಹಾಕಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಎದುರೇ ಈ ಪೆಂಡಾಲ್ ಜೋರು ಗಾಳಿಯಿಂದಾಗಿ ಕಳಚಿ ಬಿದ್ದು ಕ್ಯಾಮೆರಾಮನ್‌ ಮಲ್ಲೇಶ್ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಶಿವಾನಂದ ಪಾಟೀಲ ಹಾಗೂ ಇತರರು ಗುರುವಾರ ಮಧ್ಯಾಹ್ನ ಸಮಾವೇಶದ ಸಿದ್ಧತೆ ಪರಿಶೀಲನೆಗೆ ತೆರಳಿದ್ದರು. ಅವರ ಎದುರೇ ಗಾಳಿಯಿಂದ ಪೆಂಡಾಲ್ ಕಳಚಿ ಕಬ್ಬಿಣದ ಕಂಬಗಳು ಹಾಗೂ ಊಟದ ಟೇಬಲ್ ಸಮೇತವಾಗಿ ಎಲ್ಲ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದವು. ಇದೇ ಸಂದರ್ಭದಲ್ಲಿ ಕೆಲ ಕಬ್ಬಿಣದ ಕಂಬಗಳು ಪೆಂಡಾಲ್ ಜೊತೆಯಲ್ಲಿ ಹಾರಿ ಬಿದ್ದಿದ್ದವು. ಇದೇ ಕಂಬವೊಂದು ತಾಗಿ ಮಲ್ಲೇಶ ತಲೆಗೆ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ಅದೇ ಸ್ಥಿತಿಯಲ್ಲಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.