ADVERTISEMENT

ರಾಜೀನಾಮೆ ಸಮಯದಲ್ಲೂ ಮಠಕ್ಕೆ ಅನುದಾನ ಕೊಟ್ಟಿದ್ದ ತಂದೆ: ಬಿ.ವೈ. ರಾಘವೇಂದ್ರ

*ಲಿಂಗೈಕ್ಯ ವಿರೂಪಾಕ್ಷ ಸ್ವಾಮೀಜಿಯ ಪುಣ್ಯ ಸ್ಮರಣೋತ್ಸವ * ಸಂಸದ, ಶಾಸಕ, ಸ್ವಾಮೀಜಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 15:56 IST
Last Updated 30 ಸೆಪ್ಟೆಂಬರ್ 2024, 15:56 IST
ರಟ್ಟೀಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ವಿರೂಪಾಕ್ಷ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ರಟ್ಟೀಹಳ್ಳಿ ತಾಲ್ಲೂಕಿನ ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ವಿರೂಪಾಕ್ಷ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ರಟ್ಟೀಹಳ್ಳಿ: ‘ತಾಯಿ ಮೈತ್ರಾದೇವಿಯವರು ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದ ಭಕ್ತರಾಗಿದ್ದರು. ಶಿಕಾರಿಪುರದಿಂದ ಕಾಲ್ನಡಿಗೆ ಮೂಲಕ ಮಠಕ್ಕೆ ಬಂದು ಸೇವೆ ಮಾಡುತ್ತಿದ್ದರು. ಲಿಂಗೈಕ್ಯ ವಿರೂಪಾಕ್ಷ ಸ್ವಾಮೀಜಿ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದ ತಂದೆ ಬಿ.ಎಸ್. ಯಡಿಯೂರಪ್ಪ ಅವರು, ಸ್ವಾಮೀಜಿ ಮಾತಿಗೆ ಓಗೊಟ್ಟು ತಮ್ಮ ರಾಜೀನಾಮೆ ಸಮಯದಲ್ಲೂ ಮಠಕ್ಕೆ ಸರ್ಕಾರದಿಂದ ಅನುದಾನ ಕೊಟ್ಟಿದ್ದರು’ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ತಾಲ್ಲೂಕಿನ ತಿಪ್ಪಾಯಿಕೊಪ್ಪ ಗುರುಮೂಕಪ್ಪ ಶಿವಯೋಗಿಗಳ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ವಿರೂಪಾಕ್ಷ ಸ್ವಾಮೀಜಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಮ್ಮ ಕುಟುಂಬ ಮಠದ ಪರವಿದೆ. ವಿರೂಪಾಕ್ಷ ಸ್ವಾಮೀಜಿ ಅವರ ಆಸೆಯಂತೆ ಮಠವನ್ನು ಮತ್ತಷ್ಟು ಬೆಳೆಸಬೇಕಿದೆ. ಸ್ವಾಮೀಜಿಯವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಭಕ್ತರು ಮುನ್ನಡೆಯಬೇಕು’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಆನಂದಪುರದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ‘ವಿರೂಪಾಕ್ಷ ಸ್ವಾಮೀಜಿಯವರು ಭಕ್ತರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಮಠಕ್ಕೆ ಬಂದವರಿಗೆ ಪ್ರಸಾದ ಮಾಡಿಸುತ್ತಿದ್ದರು. ಅವರು ಯಾವುದೇ ಊರಿಗೆ ಹೋದರೂ ಅಲ್ಲಿ ಶಿಷ್ಯಂದಿರನ್ನು ಹುಟ್ಟು ಹಾಕುತ್ತಿದ್ದರು’ ಎಂದರು.

‘ಕಿರಿಯ ಶ್ರೀಗಳಿಗೆ ತೊಂದರೆಯಾಗದಂತೆ, ವಿರೂಪಾಕ್ಷ ಸ್ವಾಮೀಜಿಯವರು ಮಠವನ್ನು ಬೆಳೆಸಿದ್ದಾರೆ. ಅದನ್ನು ಕಿರಿಯ ಶ್ರೀಗಳು ಹಾಗೂ ಭಕ್ತರು ಉಳಿಸಿಕೊಂಡು ಹೋಗಬೇಕು’ ಎಂದರು.

ಶಾಸಕ ಯು.ಬಿ. ಬಣಕಾರ, ‘ಮಠದ ಇಂದಿನ ಮಹಾಂತ ಸ್ವಾಮೀಜಿ ಅವರೊಂದಿಗೆ ನಾವೆಲ್ಲರೂ ಇದ್ದೇವೆ. ಮಠದ ಬೆಳವಣಿಗೆಗೆ ಸದಾ ಅವರೊಂದಿಗೆ ಕೈ ಜೋಡಿಸುತ್ತೇವೆ’ ಎಂದರು.

ವಿವಿಧ ಮಠಗಳ ಮಠಾಧೀಶರು, ಮಾಜಿ ಶಾಸಕ ಬಿ. ಎಚ್. ಬನ್ನಿಕೋಡ, ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ಪಾಲಾಕ್ಷಗೌಡ ಪಾಟೀಲ ಹಾಗೂ ಇತರರು ಇದ್ದರು. ಗಣೇಶ ಎಂ. ಕರೆಮುದಕರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.