ADVERTISEMENT

ಕಾಂಗ್ರೆಸ್‌ನಲ್ಲಿ ಬಣವಿದೆ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 20:00 IST
Last Updated 27 ಸೆಪ್ಟೆಂಬರ್ 2019, 20:00 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ಪಕ್ಷದ ಸಭೆಯಲ್ಲಿ ಹಿರಿಯ ಮುಖಂಡರ ನಡುವೆ ನಡೆದಿರುವ ಜಟಾಪಟಿಯನ್ನು ಸಮರ್ಥಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಬಣ ರಾಜಕಾರಣವೂ ಇದೆ’ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.

‘ರಾಜ್ಯ ಕಾಂಗ್ರೆಸ್‌ನಲ್ಲೂ ಸಣ್ಣ ಬಣ, ದೊಡ್ಡ ಬಣ, ಒನ್ ಮ್ಯಾನ್ ಆರ್ಮಿ ಇದೆ. ಬಣ ರಾಜಕಾರಣ ತಪ್ಪಲ್ಲ. ಆದರೆ ಅದು ಪಕ್ಷದ ಬೆಳವಣಿಗೆಗೆ ಅಡ್ಡಿಯಾಗ ಬಾರದು. ಬಣಗಳು ಪಕ್ಷದ ಪ್ರಗತಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ನಮ್ಮಲ್ಲಿರುವ ಬಣಗಳೂ ಪಕ್ಷ ಕಟ್ಟಲು ಕೆಲಸ ಮಾಡುತ್ತಿವೆ. ಆದರೆ ಬಣ ಇಲ್ಲದ ಪಕ್ಷ ತೋರಿಸಿ’ ಎಂದು ಪ್ರಶ್ನಿಸಿದರು.

‘ಜಟಾಪಟಿ, ಟೀಕೆ, ಆರೋಪ, ಪ್ರತ್ಯಾರೋಪಗಳು ಪಕ್ಷದ ವೇದಿಕೆಯಲ್ಲಿ ನಡೆಯುವುದು ಸಹಜ. ಆರೋಗ್ಯಕರ ಚರ್ಚೆಗಳು ನಡೆದಾಗ ಪಕ್ಷವನ್ನು ಗಟ್ಟಿಗೊಳಿಸಲು, ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಹಕಾರಿಯಾಗುತ್ತವೆ. ಪರಸ್ಪರ ಚರ್ಚೆ, ಸಂವಾದಗಳ ಮೂಲಕ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬಹುದು’ಎಂದು ಪತ್ರಿಕಾ ಗೋಷ್ಠಿಯಲ್ಲಿ ಶುಕ್ರವಾರ ಸ್ಪಷ್ಟಪಡಿಸಿ ದರು.

ADVERTISEMENT

‘ನಾನು ಸಿದ್ದರಾಮಯ್ಯ, ಪರಮೇಶ್ವರ ಸೇರಿದಂತೆ ಯಾರ ಪರವಾಗಿಯೂ ಇಲ್ಲ. ಕೆಲ ವಿಚಾರಗಳಲ್ಲಿ ಸಿದ್ದರಾಮಯ್ಯ ಅವರನ್ನೇ ವಿರೋಧ ಮಾಡಿದ್ದೇನೆ. ಯಾರಿಗೂ ಬಕೆಟ್ ಹಿಡಿಯುತ್ತಿಲ್ಲ, ಯಾರ ಮನೆ ಬಾಗಿಲೂ ಕಾಯುತ್ತಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದೇನೆ. ನನ್ನಿಂದ ಪಕ್ಷಕ್ಕೆ ತೊಂದರೆ ಆಗುವು ದಾದರೆ ಬೇರೆಯವರಿಗೆ ಅಧ್ಯಕ್ಷ ಸ್ಥಾನ ಕೊಡಿ ಎಂದು ಮುಖಂಡರಿಗೆ ಹೇಳಿ ದ್ದೇನೆ. ಹೈಕಮಾಂಡ್ ಹೇಳುವವರೆಗೂ ಈ ಹುದ್ದೆಯಲ್ಲಿ ಇರುತ್ತೇನೆ. ನನಗೆ ರಾಜೀನಾಮೆ ನೀಡುವಂತೆ ಯಾರೂ ಹೇಳಿಲ್ಲ’ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

‘ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಸೋತಿರುವ ಕೆ.ಎಚ್.ಮುನಿಯಪ್ಪ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ‘ದೂರು ಬಂದಾಗ ಪರಿಶೀಲಿಸಲಾಗುತ್ತದೆ. ಅಗತ್ಯ ದಾಖಲೆಗಳು ಇದ್ದಾಗ ಶಿಸ್ತು
ಕ್ರಮ ಕೈಗೊಳ್ಳಲಾಗಿದೆ. ದೂರು ಹೇಳಿದ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ದಾಖಲೆ ಕೊಟ್ಟರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳುವ ಮೂಲಕ ಮುನಿಯಪ್ಪ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಸಂದೇಶ ರವಾನಿಸಿದರು.

ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಏಕವಚನ ಪ್ರಯೋಗ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅನರ್ಹ ಶಾಸಕ ಸೋಮಶೇಖರ್, ಸಿದ್ದರಾಮಯ್ಯ ಅವರ ಚೇಲ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ದಿನೇಶ್ ಸರಿಯಾಗಿದ್ದರೆ ನಾವೇಕೆ ರಾಜೀನಾಮೆ ನೀಡುತ್ತಿದ್ದೆವು. ಅಯೋಗ್ಯರಂತೆ ನಡೆದುಕೊಂಡರು. ಈಗ ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿಲ್ಲ. ಸಿದ್ದರಾಮಯ್ಯ ಬಣವಾಗಿ ಪರಿವರ್ತನೆ ಆಗಿದೆ. ಅದಕ್ಕೆ ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಹದ್ ಸೇರಿಕೊಂಡಿದ್ದಾರೆ’ ಎಂದು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

‘ನಮ್ಮನ್ನು ಅನರ್ಹಗೊಳಿಸುವುದರಲ್ಲೇ ಸಿದ್ದರಾಮಯ್ಯ, ರಮೇಶ್ ಕುಮಾರ್ ಖುಷಿಪಟ್ಟಿದ್ದಾರೆ. ಹಿರಿಯ ಮುಖಂಡ ರಾದ ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಮಾಡಿ ರುವ ಆರೋಪಗಳು ಸರಿಯಾಗಿವೆ. ರಮೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುನಿಯಪ್ಪ ಮನವಿ ಮಾಡಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಬಿಟ್ಟು ನಮ್ಮನ್ನು ಪಕ್ಷದಿಂದ ಹೊರಕ್ಕೆ ಹಾಕಿದರು’ ಎಂದು ಕಿಡಿಕಾರಿದರು.

‘ನಮ್ಮನ್ನು ಸರಿಯಾಗಿ ನಡೆಸಿಕೊಂಡಿದ್ದರೆ ನಾವೇಕೆ ಈ ರೀತಿ ಮಾಡುತ್ತಿದ್ದೆವು. ಸಮ್ಮಿಶ್ರ ಸರ್ಕಾರ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ರಾಜ್ಯದ ಜನರೇ ಹೇಳುತ್ತಿದ್ದ ರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇನ್ನೊಮ್ಮೆ ನಮ್ಮನ್ನು ಅನರ್ಹರು ಎಂದು ಕರೆಯಬಾರದು’ ಎಂದು ದಿನೇಶ್ ವಿರುದ್ಧ ಗುಡುಗಿದರು.

ದಿನೇಶ್ ಟೀಕೆ: ‘ಸೋಮಶೇಖರ್ ಈಗ ಯಾವ ಪಕ್ಷದಲ್ಲಿ ಇದ್ದಾರೆ ಎಂಬುದೇ ಗೊತ್ತಿಲ್ಲ. ಇದರಿಂದ ವಿಚಲಿತರಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಮನುಷ್ಯರ ಸ್ವಭಾವ. ನೋವಾದಾಗ ಈ ರೀತಿ ಮಾತನಾಡುತ್ತಾರೆ’ ಎಂದು ದಿನೇಶ್ ಗುಂಡೂರಾವ್ ಮೆದು ಮಾತುಗಳಲ್ಲೇ ಕುಟುಕಿದರು.

‘ಸಚಿವರಾಗುತ್ತೇವೆ ಎಂದು ಕನಸು ಕಂಡಿದ್ದರು. ನಗರಾಭಿವೃದ್ಧಿ, ಜಲಸಂಪನ್ಮೂಲ ಖಾತೆಯ ಕನಸು ಹೊತ್ತಿದ್ದರು. ಈಗ ಯಾವುದೂ ಈಡೇರಿಲ್ಲ. ಹಾಗಾಗಿ ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.