
ಹಾವೇರಿ: ‘ಜಿಲ್ಲೆಯ 24 ಕೇಂದ್ರಗಳಲ್ಲಿ ಡಿ.7ರಂದು ಕರ್ನಾಟಕ ಶಿಕ್ಷಕರ ಅರ್ಹತಾ (ಟಿಇಟಿ) ಪರೀಕ್ಷೆ ಜರುಗಲಿದೆ. ಪ್ರತಿಯೊಂದು ಪರೀಕ್ಷೆ ಕೇಂದ್ರದಲ್ಲೂ ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷೆ ಆರಂಭದಿಂದ ಕೊನೆಯವರೆಗೂ ಯಾವುದೇ ಲೋಪವಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಟಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆ’ಯಲ್ಲಿ ಅವರು ಮಾತನಾಡಿದರು.
‘ಹಾವೇರಿ ನಗರ ಹಾಗೂ ರಾಣೆಬೆನ್ನೂರು ನಗರದ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಮಗೆ ವಹಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.
‘ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಂದ್ರದ ಹೊರವಲಯ ಹಾಗೂ ಕೊಠಡಿಯ ಒಳಗೆ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು.
ಮೂಲ ಸೌಕರ್ಯ ಕಲ್ಪಿಸಿ: ‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಸಿ.ಸಿ.ಟಿ.ವಿ. ಕ್ಯಾಮೆರಾ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಕೊಠಡಿಯೊಳಗೆ ಗೋಡೆ ಗಡಿಯಾರವನ್ನು ಕಡ್ಡಾಯವಾಗಿ ಹಾಕಬೇಕು. ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಪರೀಕ್ಷಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಪೀಠೋಪಕರಣ ಒದಗಿಸಬೇಕು. ಪರೀಕ್ಷಾ ವೀಕ್ಷಕರು, ಮೂಲ ಸೌಕರ್ಯವನ್ನು ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.
‘ಪರೀಕ್ಷೆಯ ಮೇಲ್ವಿಚಾರಕರು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರಿಗೆ ಕೇಂದ್ರದಲ್ಲಿ ಪ್ರವೇಶ ಇರುವುದಿಲ್ಲ. ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲಿನಲ್ಲಿಯೇ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಬಂಡಲ್ ತೆರೆಯಬೇಕು’ ಎಂದರು.
‘ಕೇಂದ್ರದಲ್ಲಿ ಆರೋಗ್ಯ ಸಹಾಯಕರನ್ನು ನಿಯೋಜನೆ ಮಾಡಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಇರುವಂತೆ ನೋಡಿಕೊಳ್ಳಬೇಕು. ಡಿ. 7ರಂದು ವಿದ್ಯುತ್ ವ್ಯತ್ಯಯ ಆಗದಂತೆ ಹಾಗೂ ಅಂತರ್ಜಾಲ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.
ಎಲೆಕ್ಟ್ರಾನಿಕ್ ಉಪಕರಣ ನಿಷೇಧ: ‘ಪರೀಕ್ಷಾರ್ಥಿಗಳು ಅಥವಾ ಕೊಠಡಿಯ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್ ಸೇರಿ ಎಲ್ಲ ಬಗೆಯ ಉಪಕರಣಗಳನ್ನು ನಿರ್ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿ, ‘ಪರೀಕ್ಷೆ ನಡೆಯುವ ಕೊಠಡಿ ಹೊರತುಪಡಿಸಿ, ಇತರೆ ಕೊಠಡಿಗಳಿಗೆ ಬೀಗ ಹಾಕಬೇಕು. ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಕೇಂದ್ರದೊಳಗೆ ಪ್ರವೇಶ ಇರುವುದಿಲ್ಲ. ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸರಿಗೆ ತಿಳಿಸಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಎಲ್., ಜಿ.ಪಂ. ಸಿಇಒ ರುಚಿ ಬಿಂದಲ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ, ತಹಶೀಲ್ದಾರ್ ಶರಣಮ್ಮ ಇದ್ದರು.
ಎಲೆಕ್ಟ್ರಾನಿಕ್ ಉಪಕರಣ ನಿಷೇಧ ಮೂಲ ಸೌಕರ್ಯ ಕಲ್ಪಿಸಲು ಡಿ.ಸಿ. ಸೂಚನೆ
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು ಜೆರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ತೆರೆಯುವಂತಿಲ್ಲವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.