ADVERTISEMENT

ಕೋವಿಡ್‌: 383 ಮಕ್ಕಳು ಪಾರು

200ರ ಗಡಿ ದಾಡಿದ ಮರಣ ಪ್ರಕರಣ: ವಯೋವೃದ್ಧರಲ್ಲಿ ಸಾವಿನ ಪ್ರಮಾಣ ಹೆಚ್ಚಳ

ಸಿದ್ದು ಆರ್.ಜಿ.ಹಳ್ಳಿ
Published 29 ಏಪ್ರಿಲ್ 2021, 5:15 IST
Last Updated 29 ಏಪ್ರಿಲ್ 2021, 5:15 IST
ಪಿಪಿಇ ಕಿಟ್‌ ಧರಿಸಿದ ಆರೋಗ್ಯ ಸಿಬ್ಬಂದಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ದೃಶ್ಯ (ಸಂಗ್ರಹ ಚಿತ್ರ)
ಪಿಪಿಇ ಕಿಟ್‌ ಧರಿಸಿದ ಆರೋಗ್ಯ ಸಿಬ್ಬಂದಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ದೃಶ್ಯ (ಸಂಗ್ರಹ ಚಿತ್ರ)   

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 12 ಸಾವಿರ ಗಡಿ ಹಾಗೂ ಕೋವಿಡ್‌ ಸಾವು ಪ್ರಕರಣಗಳು 200ರ ಗಡಿ ದಾಟಿವೆ. ವಿಶೇಷವೆಂದರೆ, ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 383 ಮಕ್ಕಳೂ ಗುಣಮುಖರಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ.

ಕೋವಿಡ್‌ ಪ್ರಕರಣಗಳಲ್ಲಿ ವಯೋವೃದ್ಧರು, ಗರ್ಭಿಣಿಯರು, ವಿವಿಧ ಕಾಯಿಲೆಗಳಿಂದ ಬಳಲುವವರು ಹಾಗೂ ಮಕ್ಕಳನ್ನು ‘ಹೈ ರಿಸ್ಕ್‌ ಪ್ರಕರಣಗಳು’ ಎಂದು ಆರೋಗ್ಯ ಇಲಾಖೆ ಗುರುತಿಸಿತ್ತು. ಹೀಗಾಗಿ ಮನೆಗಳಲ್ಲಿರುವ ವಯೋವೃದ್ಧರು ಮತ್ತು ಮಕ್ಕಳನ್ನು ಹೆಚ್ಚು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಸಂಬಂಧಪಟ್ಟ 383 ಮಕ್ಕಳಿಗೆ ಕೋವಿಡ್‌ ದೃಢಪಟ್ಟಿತ್ತು. ಎಲ್ಲ ಮಕ್ಕಳಿಗೂ ವಿಶೇಷ ಕಾಳಜಿ ಮತ್ತು ಉತ್ತಮ ಚಿಕಿತ್ಸೆ ನೀಡಿದ ಫಲವಾಗಿ ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರಲ್ಲಿ 20 ವರ್ಷದೊಳಗಿನವರು ಯಾರೂ ಇಲ್ಲ ಎನ್ನುತ್ತಾರೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ.

ADVERTISEMENT

ವಯೋವೃದ್ಧರೇ ಹೆಚ್ಚು ಬಲಿ:

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 60 ವರ್ಷ ಮೇಲ್ಪಟ್ಟ 98 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಪ್ರಕರಣಗಳಲ್ಲಿ ವಯೋವೃದ್ಧರೇ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ, 51ರಿಂದ 60 ವರ್ಷದೊಳಗಿನವರಿದ್ದು, 62 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಅತಿ ಹೆಚ್ಚು ತುತ್ತಾದವರು 11ರಿಂದ 30 ವರ್ಷದೊಳಗಿನವರು. ನಂತರ 30ರಿಂದ 40 ವರ್ಷದೊಳಗಿನವರು. ಈ ಎರಡೂ ಗುಂಪಿನವರಲ್ಲಿ ಗುಣಮುಖ ಪ್ರಮಾಣ ಉತ್ತಮವಾಗಿದ್ದು, ಸಾವಿನ ಸಂಖ್ಯೆ ಕಡಿಮೆಯಿದೆ.

ಹಾವೇರಿಯಲ್ಲಿ ಅತಿ ಹೆಚ್ಚು:

ಜಿಲ್ಲೆಯಲ್ಲಿ ಕೋವಿಡ್‌ನಿಂದ 215 ಮಂದಿ ಮೃತಪಟ್ಟಿದ್ದು, ಹಾವೇರಿ ತಾಲ್ಲೂಕು (72) ಮತ್ತು ರಾಣೆಬೆನ್ನೂರು ತಾಲ್ಲೂಕು (49) ಸಾವಿನ ಸಂಖ್ಯೆಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಸವಣೂರು ತಾಲ್ಲೂಕು (12) ಮತ್ತು ಶಿಗ್ಗಾವಿ ತಾಲ್ಲೂಕು (15) ಕ್ರಮವಾಗಿ ಕೊನೆಯ ಸ್ಥಾನದಲ್ಲಿವೆ. ಒಟ್ಟಾರೆ 158 ಪುರುಷರು ಮತ್ತು 57 ಮಹಿಳೆಯರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದುವರೆಗೆ 7,211 ಪುರುಷರು ಮತ್ತು 4,811 ಮಹಿಳೆಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಜಿಲ್ಲೆಯಲ್ಲಿ 198 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದು; 327 ಮಂದಿ ಜಿಲ್ಲಾ ಕೋವಿಡ್‌ ಆಸ್ಪತ್ರೆ, ಡಿಸಿಎಚ್‌ಸಿ, ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 525 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.