ADVERTISEMENT

ಕಂಡವರ ದುಡ್ಡಲ್ಲಿ ಮಜಾ ಮಾಡುವ ಸ್ವಾಮೀಜಿಗಳಿಂದ ಎಚ್ಚರದಿಂದಿರಿ: ಕನಕ ಗುರುಪೀಠ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 15:35 IST
Last Updated 27 ಮಾರ್ಚ್ 2025, 15:35 IST
ನಿರಂಜನಾನಂದಪುರಿ ಸ್ವಾಮೀಜಿ
ನಿರಂಜನಾನಂದಪುರಿ ಸ್ವಾಮೀಜಿ   

ಹಾವೇರಿ: ‘ಕಂಡವರ ದುಡ್ಡಲ್ಲಿ ಮಜಾ ಮಾಡುವ ಕೆಲ ಮಠ ಹಾಗೂ ಸ್ವಾಮೀಜಿಗಳಿಂದ ಕುರುಬ ಸಮಾಜದ ಜನರು ದೂರವಿರಬೇಕು. ಕಪೋಲಕಲ್ಪಿತ ಕಥೆಗಳನ್ನು ನಂಬದೇ ತಮ್ಮ ಕುಟುಂಬವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಸದೃಢಗೊಳಿಸಿಕೊಳ್ಳಬೇಕು’ ಎಂದು ಕಾಗಿನೆಲೆ ಮಹಾಸಂಸಂಸ್ಥಾನ ಕನಕ ಗುರುಪೀಠ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಜಿಲ್ಲೆಯ ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಷಷ್ಠ್ಯಬ್ಧಿ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಪ್ರಕಟಣೆ ನೀಡಿರುವ ಅವರು, ‘ಷಷ್ಠ್ಯಬ್ದಿ ಕಾರ್ಯಕ್ರಮಕ್ಕೆ ಹಾವೇರಿ–ದಾವಣಗೆರೆ ಜಿಲ್ಲೆಯ ಬೀರಲಿಂಗೇಶ್ವರ ದೇವರ ದೇವಸ್ಥಾನಗಳಿಂದ ಕನಿಷ್ಠ 25 ಸಾವಿರ ದೇಣಿಗೆ ನೀಡುವಂತೆ ಹಾಗೂ ದೇವರ ಪಲ್ಲಕ್ಕಿ ಸಮೇತ ಮಠಕ್ಕೆ ಬರುವಂತೆ ಒತ್ತಾಯಿಸಲಾಗುತ್ತಿದೆ. ಇದು, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ’ ಎಂದಿದ್ದಾರೆ.

‘ಸ್ವಾಮೀಜಿಗಳ ಪಲ್ಲಕ್ಕಿ ಹೊರುವುದಕ್ಕಾಗಿ ನಮ್ಮ ಕುರುಬ ಸಮಾಜದ ಬಂಧುಗಳ ತನು–ಮನ–ಧನ ಬಳಸಿಕೊಳ್ಳಲಾಗುತ್ತಿದೆ. ಲಿಂಗ ಪೂಜೆ, ಪಾದಪೂಜೆ ಎಂಬ ಕಪೋಲಕಲ್ಪಿತ ಕಥೆಗಳನ್ನು ಹೇಳುತ್ತಾ ಸಮಾಜದ ಜನರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಶೋಷಣೆ ಮಾಡುತ್ತಿರುವುದು ಖಂಡನೀಯ. ರಟ್ಟೀಹಳ್ಳಿ ಸ್ವಾಮೀಜಿಯವರು ಸ್ವಾಭಿಮಾನ ಬಿಟ್ಟು ಮುಗ್ಧ ಕುರುಬರನ್ನು ದುರ್ಬಳಕೆ ಮಾಡಿಕೊಳ್ಳುವ ಶೋಷಣೆ ನಡೆಯನ್ನು ಬದಲಾಯಿಸಿಕೊಳ್ಳಬೇಕೆಂದು ಕನಕ ಗುರುಪೀಠ ಎಚ್ಚರಿಸುತ್ತದೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.