ADVERTISEMENT

ಬೆಡ್‌ ಕೊರತೆ: 3 ಗಂಟೆ ಆಂಬುಲೆನ್ಸ್‌ನಲ್ಲೇ ಕಾದ ಸೋಂಕಿತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 17:13 IST
Last Updated 6 ಜುಲೈ 2020, 17:13 IST
ಹಾವೇರಿ ನಗರದ ಕೋವಿಡ್‌–19 ಆಸ್ಪತ್ರೆಯಲ್ಲಿ ಹಾಸಿಗೆ‌ ಕೊರತೆಯಿಂದ, ಸೋಮವಾರ ಆಂಬುಲೆನ್ಸ್‌ನಲ್ಲೇ 3 ಗಂಟೆ ಕಾದ ಕೋವಿಡ್‌ ಸೋಂಕಿತ
ಹಾವೇರಿ ನಗರದ ಕೋವಿಡ್‌–19 ಆಸ್ಪತ್ರೆಯಲ್ಲಿ ಹಾಸಿಗೆ‌ ಕೊರತೆಯಿಂದ, ಸೋಮವಾರ ಆಂಬುಲೆನ್ಸ್‌ನಲ್ಲೇ 3 ಗಂಟೆ ಕಾದ ಕೋವಿಡ್‌ ಸೋಂಕಿತ   

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತೆಯೊಬ್ಬರು ಆಂಬುಲೆನ್ಸ್‌ಗಾಗಿ 12 ತಾಸು ಕಾದ ಘಟನೆ ನಡೆದ ಬೆನ್ನಲ್ಲೇ, ಹಾಸಿಗೆ ಲಭ್ಯವಿಲ್ಲದ ಕಾರಣಕ್ಕಾಗಿ ನಗರದ ಕೋವಿಡ್‌ ಆಸ್ಪತ್ರೆ ಮುಂಭಾಗ 3 ತಾಸು ಕೋವಿಡ್‌ ಸೋಂಕಿತನೊಬ್ಬ ಆಂಬುಲೆನ್ಸ್‌–108ರಲ್ಲೇ ಉಳಿದ ಘಟನೆ ಸೋಮವಾರ ನಡೆದಿದೆ.

ಶಿಗ್ಗಾವಿ ಜಿಲ್ಲೆ ಅಂದಲಗಿ ಗ್ರಾಮದಿಂದ ಕೋವಿಡ್‌ ಸೋಂಕಿತನನ್ನು ಆಂಬುಲೆನ್ಸ್‌ ಮೂಲಕ ನಗರದ ಕೋವಿಡ್‌ ಆಸ್ಪತ್ರೆಗೆ ಮಧ್ಯಾಹ್ನ 1.30ಕ್ಕೆ ವೈದ್ಯಕೀಯ ಸಿಬ್ಬಂದಿ ಕರೆತಂದರು. ಆದರೆ, ‘ಬೆಡ್‌ ಖಾಲಿ ಇಲ್ಲ’ ಎಂಬ ಕಾರಣದಿಂದ ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸಲಹೆ ನೀಡಿದರು.

ಇದಕ್ಕೆ ಒಪ್ಪದ ಕೋವಿಡ್‌ ಸೋಂಕಿತ ಹಾವೇರಿ ಕೋವಿಡ್‌ ಆಸ್ಪತ್ರೆಯಲ್ಲೇ ದಾಖಲು ಮಾಡಿಕೊಳ್ಳಿ ಎಂದು ಹಟ ಹಿಡಿದ. ಹೀಗಾಗಿ ಏನು ಮಾಡಬೇಕು ಎಂದು ದಿಕ್ಕುತೋಚದ ಆಂಬುಲೆನ್ಸ್‌ ಸಿಬ್ಬಂದಿ ಪಿಪಿಇ ಕಿಟ್‌ ಧರಿಸಿ, ಕಾಯುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ನಾಪತ್ತೆಯಾಗಿದ್ದ ಸೋಂಕಿತ ಪತ್ತೆ:

ರಟ್ಟೀಹಳ್ಳಿ ತಾಲ್ಲೂಕಿನ ಪರ್ವತ ಸಿದ್ಧಗೇರಿ ಎಂಬ ಗ್ರಾಮದ 29 ವರ್ಷದ ಕೋವಿಡ್‌ ಸೋಂಕಿತ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ. ಆತ, ಸೋಮವಾರ ರಾಣೆಬೆನ್ನೂರು ನಗರದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆತನನ್ನು ಕರೆತಂದು ತಾಲ್ಲೂಕು ಆಸ್ಪತ್ರೆ ಮುಂಭಾಗ ಕೂರಿಸಿ, ಸುತ್ತಲೂ ಬ್ಯಾರಿಕೇಡ್‌ ಹಾಕಿದ್ದಾರೆ. ನಂತರ ಆತನಿಗೆ ತಿಂಡಿ, ನೀರು ಕೊಟ್ಟಿದ್ದಾರೆ.ಆದರೆ, ಕರೆ ಮಾಡಿ 2 ಗಂಟೆ ಕಳೆದರೂ ಆಂಬುಲೆನ್ಸ್‌ ಬಂದಿರಲಿಲ್ಲ. ನಂತರ ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಆಂಬುಲೆನ್ಸ್‌ ವ್ಯವಸ್ಥೆ ಮಾಡಿ, ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ದು, ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.