ಬ್ಯಾಡಗಿ: ಇಲ್ಲಿಯ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕಾಗಿದ್ದ ಒಳಾಂಗಣ ಕ್ರೀಡಾಂಗಣ ಕಳೆದ ಎರಡು ವರ್ಷಗಳಿಂದ ಅನುದಾನವಿಲ್ಲದೆ ಕಾಮಗಾರಿ ಸ್ಥಗಿತಗೊಂಡಿದೆ.
ಪರಿಣಾಮ ಗೋಡೆಗಳು ಬಿರುಕು ಬಿಟ್ಟಿದ್ದು, ಹಾಕಿದ ಕಬ್ಬಣದ ರಾಡುಗಳು ತುಕ್ಕು ಹಿಡಿಯುತ್ತಿವೆ. ಮಳೆಗಾಲದಲ್ಲಿ ಗೋಡೆಗಳ ಗುಣಮಟ್ಟ ಅಧೋಗತಿಗೆ ಸಾಗಿದೆ. ಚಾವಣಿ ಇಲ್ಲದೇ ಕಟ್ಟಡದ ಬಾಳಿಕೆ ಕಡಿಮೆಯಾಗುತ್ತಿದೆ ಎನ್ನುವುದು ಕ್ರೀಡಾಪಟುಗಳ ಆರೋಪ.
ನವೆಂಬರ್ 2022ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕೇವಲ ₹ 75 ಲಕ್ಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಪ್ಲಿಂಥ್ ಮತ್ತು ಗೋಡೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರ ಗುತ್ತಿಗೆ ಪಡೆದಿರುವ ಕಾಮಗಾರಿ, ಆಮೆಗತಿಯಲ್ಲಿ ಸಾಗಿದೆ. ಇದರಿಂದಾಗಿ ನೂರಾರು ಕ್ರೀಡಾಪಟುಗಳಿಗೆ ನಿರಾಶೆಯನ್ನು ಮೂಡಿಸಿದ್ದು, ಅವರ ಕನಸುಗಳನ್ನು ನುಚ್ಚು ನೂರು ಮಾಡಿದೆ.
ಕಾಮಗಾರಿ ಪೂರ್ಣಗೊಳಿಸಿ ಬಾಸ್ಕೇಟ್ ಬಾಲ್, ಟೆನಿಸ್, ಶೆಟಲ್ ಬ್ಯಾಡ್ಮಿಂಟನ್, ಕಬಡ್ಡಿ ಆಟಗಳಿಗೆ ಬೇಕಾಗುವ ಅಂಕಣಗಳನ್ನು ಸಿದ್ಧಪಡಿಸಿದ್ದಲ್ಲಿ ಇಲ್ಲಿಯ ಸಾಕಷ್ಟು ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಆದರೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಮತ್ತು ಸರ್ಕಾರದಲ್ಲಿ ಅಭಿವೃದ್ಧಿಗೆ ಹಣದ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳಿಸಲು ವಿಳಂಭವಾಗುತ್ತಿದೆ ಎಂದು ಮಾಜಿ ಸೈನಿಕ ಮಲ್ಲೇಶಪ್ಪ ಚಿಕ್ಕಣ್ಣನವರ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದು ಪದೇ ಪದೇ ಸಾರ್ವಜನಿಕರ ಸಭೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ಸದರಿ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಯಾಕೆ ಹಣ ನೀಡುತ್ತಿಲ್ಲ ಎಂದು ಯುವ ಮುಖಂಡ ವಿಜಯಭರತ ಬಳ್ಳಾರಿ ಪ್ರಶ್ನಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಲು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.– ಬಸವರಾಜ ಶಿವಣ್ಣನವರ, ಶಾಸಕ
‘ಕಡಿಮೆ ಅನುದಾನ: ಗುಣಮಟ್ಟದ ಕಾಮಗಾರಿ’
‘ಬ್ಯಾಡಗಿ ಒಳಾಂಗಣ ಕ್ರೀಡಾಂಗಣ ₹ 3 ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ನಿರ್ಮಾಣಗಾವಾಗಲಿದೆ. ಶಿಗ್ಗಾವಿಯಲ್ಲಿ ನಿರ್ಮಾಣ ಮಾಡಿದ ಕ್ರೀಡಾಂಗಣಕ್ಕಿಂತ ಸ್ವಲ್ಪ ಕಡಿಮೆ ಅನುದಾನದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕಾಮಗಾರಿ ವಿಳಂಬವಾದರೆ ವರ್ಷದಿಂದ ವರ್ಷಕ್ಕೆ ಕಾಮಗಾರಿ ವೆಚ್ಚ ಕೂಡಾ ಹೆಚ್ಚಲಿದೆ. ಜೊತೆಗೆ ಕಟ್ಟಡದ ಬಾಳಿಕೆ ಸಹ ಕಡಿಮೆಯಾಗಲಿದೆ. ₹1 ಕೋಟಿಯಲ್ಲಿ ಇದುವರೆಗೆ ಕೇವಲ ₹ 75 ಲಕ್ಷ ಅನುದಾನ ಮಾತ್ರ ಬಿಡುಗಡೆಯಾಗಿದೆ’ ಎನ್ನುತ್ತಾರೆ ಜಿಲ್ಲಾ ನಿರ್ಮಿತಿ ಕೇಂದ್ರದ ಎಂಜಿನಿಯರ್ ಎಚ್.ಡಿ.ಶಾಂತಕುಮಾರ.
ಎಂಟು ಸಾವಿರ ಚದರ ಅಡಿ ವಿಸ್ತೀರ್ಣ ಹಾಗೂ 28 ಅಡಿ ಎತ್ತರದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು ಅದು ಪೂರ್ಣಗೊಂಡರೆ ಟೆನ್ನಿಸ್ ಬಾಸ್ಕೆಟ್ ಬಾಲ್ ಶೆಟಲ್ ಬ್ಯಾಡ್ಮಿಂಟನ್ ವಾಲಿಬಾಲ್ ಕಬಡ್ಡಿಯಂತಹ ಕ್ರೀಡೆಗಳನ್ನು ಆಡಬಹುದಾಗಿದೆ. ಸುಮಾರು 200 ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಹ ಇದರಲ್ಲಿ ಒಳಗೊಂಡಿದೆ. ಆದರೆ ಅಲ್ಪ ಅನುದಾನದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗುವುದು ಸಾಧ್ಯವಿಲ್ಲದ ಮಾತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.