ಹಾವೇರಿ: ಜಿಲ್ಲೆಯಲ್ಲಿ ಚಳಿಗಾಲ ಶುರುವಾಗಿದ್ದು, ಕೆಲವೇ ತಿಂಗಳಿನಲ್ಲಿ ಬೇಸಿಗೆ ದಿನಗಳು ಆರಂಭವಾಗಲಿವೆ. ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿತ್ತು. ಈ ಬಾರಿ ಮಳೆಗಾಲದಲ್ಲಿ ಉತ್ತಮ ಮಳೆಯಾಗಿದೆ. ಅಷ್ಟಾದರೂ, ಮುಂಬರುವ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಭಯ ಜನರನ್ನು ಕಾಡುತ್ತಿದೆ.
ಮಳೆಗಾಲ ಕಳೆದು ಚಳಿಗಾಲ ಆರಂಭವಾಗಿದ್ದರೂ ಜಿಲ್ಲೆಯ 71 ಶುದ್ಧ ಕುಡಿಯುವ ಘಟಕಗಳಿಗೆ ಬೀಗ ಹಾಕಲಾಗಿವೆ. ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟಕಗಳು ಬಂದ್ ಆಗಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಜಿಲ್ಲೆಯಲ್ಲಿ 686 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಈ ಪೈಕಿ 71 ಘಟಕಗಳು ಹಲವು ತಿಂಗಳಿನಿಂದ ಬಂದ್ ಆಗಿದ್ದು, ಇದುವರೆಗೂ ಘಟಕಗಳು ಮರು ಆರಂಭವಾಗಿಲ್ಲ. ನೀರು ಶುದ್ಧೀಕರಣಕ್ಕೆಂದು ಹಾಕಿರುವ ಟ್ಯಾಂಕ್ ಹಾಗೂ ಉಪಕರಣಗಳು ಒಂದೊಂದಾಗಿ ತುಕ್ಕು ಹಿಡಿಯುತ್ತಿದ್ದು, ಘಟಕಗಳು ಪಾಳು ಬೀಳುತ್ತಿವೆ.
ಮಳೆ ಕೊರತೆ ಹಾಗೂ ಕೊಳವೆ ಬಾವಿಗಳು ಬತ್ತಿದ ಕಾರಣ ನೀಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡಿ ಹಲವು ತಿಂಗಳಾಗಿದೆ. ಕೆಲ ಘಟಕಗಳ ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿದ್ದರಿಂದ, ಬಾಗಿಲು ಮುಚ್ಚಲಾಗಿವೆ. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆ ಮಾಡದ ಜಿಲ್ಲಾಡಳಿತ, ಮುಂಬರುವ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾದರೆ ಏನು ಮಾಡುತ್ತದೆ ? ಹೊಣೆಗಾರರು ಯಾರು ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
‘ಹಲವು ಗ್ರಾಮಗಳಲ್ಲಿ ಕಲುಷಿತ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿವೆ. ವೃದ್ಧರು ಹಾಗೂ ಮಕ್ಕಳು, ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಈ ಘಟಕಗಳನ್ನು ಬಂದ್ ಮಾಡಿರುವುದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ’ ಎಂದು ಕನಕಾಪುರದ ರೈತ ಶಂಕರಪ್ಪ ಹೇಳಿದರು.
‘ಕನಕಾಪುರದ ಪ್ರಮುಖ ರಸ್ತೆಯಲ್ಲಿರುವ ಘಟಕ ಬಂದ್ ಆಗಿ ಹಲವು ತಿಂಗಳಾಗಿದೆ. ಮರು ಆರಂಭಕ್ಕೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇದರಿಂದಾಗಿ ಶುದ್ಧ ಕುಡಿಯುವ ನೀರು ತರಲು ಕಿ.ಮೀ.ಗಟ್ಟಲೇ ಅಕ್ಕ–ಪಕ್ಕದ ಗ್ರಾಮ ಹಾಗೂ ಹಾವೇರಿಗೆ ಹೋಗಿ ಬರಬೇಕಾದ ಸ್ಥಿತಿ ಇದೆ’ ಎಂದು ತಿಳಿಸಿದರು.
ಹಾವೇರಿ ತಾಲ್ಲೂಕಿನ ಬಮ್ಮನಕಟ್ಟಿಯಲ್ಲಿರುವ ಘಟಕ ಬಂದ್ ಆಗಿದ್ದು, ಉಪಕರಣಗಳು ತುಕ್ಕು ಹಿಡಿದಿವೆ. ಹರವಿ ಗ್ರಾಮದಲ್ಲಿರುವ ಘಟಕ ಬಂದ್ ಆಗಿ ಹಲವು ತಿಂಗಳಾಗಿದೆ. ಈ ಘಟಕದಲ್ಲಿ ನಿರುಪಯುಕ್ತ ವಸ್ತುಗನ್ನು ಇರಿಸಲಾಗಿದ್ದು, ಗೋದಾಮು ಆಗಿ ಪರಿವರ್ತನೆಗೊಂಡಿವೆ.
ಬ್ಯಾಡಗಿ ತಾಲ್ಲೂಕಿನ ತಡಸ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಆರು ತಿಂಗಳಾಗಿದೆ. ಆದರೆ, ಘಟಕಗಳ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ.
‘ಬ್ಯಾಡಗಿ ತಾಲ್ಲೂಕಿನಲ್ಲಿ 79 ಘಟಕ ನಿರ್ಮಿಸಿದ್ದು, ಎಲ್ಲ ಕಡೆಯೂ ನೀರು ಲಭ್ಯವಾಗುತ್ತಿದೆ’ ಎಂದು ಎಇಇ ಸುರೇಶ ಬೇಡರ ಹೇಳುತ್ತಿದ್ದಾರೆ. ಆದರೆ, ಜಿಲ್ಲಾಡಳಿತದ ಪ್ರಕಾರ ಬ್ಯಾಡಗಿ ತಾಲ್ಲೂಕಿನಲ್ಲಿ 87 ಘಟಕಗಳಿವೆ. ಇದರಲ್ಲಿ 6 ಘಟಕಗಳು ಬಂದ್ ಆಗಿವೆ.
ತಾಲ್ಲೂಕಿನ ತಡಸದಲ್ಲಿರುವ ಘಟಕ ಪಾಳು ಬಿದ್ದಿದೆ. ಸುತ್ತಲೂ ಕಸ ಬೆಳೆದಿದೆ. ನೀರು ಸಂಗ್ರಹ ಟ್ಯಾಂಕ್ ತುಕ್ಕು ಹಿಡಿಯುತ್ತಿದೆ. ಶುದ್ಧ ಕುಡಿಯುವ ನೀರಿಗಾಗಿ ಹಲವೆಡೆ ಅಲೆಯುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ರಾಣೆಬೆನ್ನೂರಿನಲ್ಲೂ ಸಮಸ್ಯೆ: ರಾಣೆಬೆನ್ನೂರು ನಗರ ಹಾಗೂ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಈ ಪೈಕಿ ಕೆಲವರು ಘಟಕಗಳು, ನಿರ್ವಹಣೆ ಕೊರತೆಯಿಂದ ಬಂದ್ ಆಗಿವೆ.
ತಾಲ್ಲೂಕಿನ ಮೇಡ್ಲೇರಿಯಲ್ಲಿ ಎರಡು ಘಟಕಗಳಿದ್ದು, ಒಂದು ಘಟಕ ಕೆಟ್ಟು ಹಲವು ತಿಂಗಳಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗಂಗಾಜಲ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರಿಗಿರುವ ಘಟಕವೂ ಬಂದ್ ಆಗಿದೆ.
ತಾಲ್ಲೂಕಿನ ಹೀಲದಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ನೀರು ಸರಿಯಿಲ್ಲವೆಂದು ದೂರುತ್ತಿರುವ ಜನರು, ಘಟಕದ ನೀರು ಬಳಸುತ್ತಿಲ್ಲ. ಘಟಕವನ್ನು ಬೇರೆಡೆ ಸ್ಥಳಾಂತರಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.
ಹನುಮಾಪುರ, ಹೊನ್ನತ್ತಿ, ಮೇಡ್ಲೇರಿ, ಬಿಲ್ಲಹಳ್ಳಿ, ಹಾರೊಗೊಪ್ಪ, ನೂಕಾಪುರ, ಶ್ರೀನಿವಾಸಪುರ, ವೆಂಕಟಾಪುರ, ಶಿಡಗನಾಳ ಗ್ರಾಮದಲ್ಲಿರುವ ಘಟಕಗಳು ದುರಸ್ತಿಗೆ ಬಂದಿದೆ.
ರಟ್ಟೀಹಳ್ಳಿಯಲ್ಲಿ ಘಟಕಗಳು ಬಂದ್: ರಟ್ಟೀಹಳ್ಳಿಯ ಸಂತೆ ಪೇಟೆ, ಟಿಪ್ಪು ನಗರ, ಕೋಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ ಎರಡು ಘಟಕಗಳು ಕೆಟ್ಟಿದ್ದು, ಬಾಗಿಲು ಮುಚ್ಚಿವೆ. ಘಟಕ ದುರಸ್ತಿಗೊಳಿಸುವಂತೆ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.
ಕೋಟೆಯ ಕಬ್ಬಿಣಕಂತಿಮಠದ ಹತ್ತಿರ ಇರುವ ಘಟಕ ವರ್ಷದಿಂದ ಬಾಗಿಲು ಮುಚ್ಚಿದೆ. ಘಟಕ ಸುತ್ತಲೂ ಕಸ ಬೆಳೆದು ನಿಂತಿದೆ.
ತಿಳವಳ್ಳಿ ಬಳಿಯ ಮಾಳಾಪುರ, ಕೆರೆಕ್ಯಾತನಹಳ್ಳಿ, ಹಳ್ಳಿಬೈಲ್, ವಡ್ಡಿಗೇರಿ, ಹುಲ್ಲಗಡ್ಡಿ, ಯತ್ತಿನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ಅವುಗಳ ದುರಸ್ತಿಗೆ ಜನರು ಒತ್ತಾಯಿಸುತ್ತಿದ್ದು, ಇದುವರೆಗೂ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.
‘ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ದೇಶದಿಂದ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕಗಳು ಕಾರ್ಯ ನಿರ್ವಹಿಸದೇ ದುಸ್ಥಿತಿಯಲ್ಲಿವೆ’ ಎಂದು ಗ್ರಾಮಸ್ಥರು ದೂರಿದರು.
ಹಾನಗಲ್‌ನಲ್ಲಿ 28 ಘಟಕ ಬಂದ್: ತಾಲ್ಲೂಕಿನಲ್ಲಿ ನಿರ್ಮಿಸಲಾಗಿರುವ 28 ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿ ಹಲವು ತಿಂಗಳಾಗಿದ್ದು, ಇದುವರೆಗೂ ದುರಸ್ತಿ ಮಾಡಿಲ್ಲ.
ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ನಿರ್ವಹಣೆ ಮಾಡುತ್ತಿರುವ ಎರಡು ಘಟಕಗಳು ಬಂದ್ ಆಗಿವೆ. ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಘಟಕಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಪರಿಹಾರ ಸಿಕ್ಕಿಲ್ಲ.
ಹಾನಗಲ್‌ನ ಕಲ್ಲಹಕ್ಕಲ್ ಭಾಗದಲ್ಲಿ ಉದ್ಘಾಟನೆಗೊಂಡ ದಿನದಿಂದಲೇ ನೀರಿನ ಘಟಕ ಬಂದ್ ಆಗಿದೆ. ನವನಗರದಲ್ಲಿ ಸುಮಾರು ನಾಲ್ಕು ವರ್ಷದಿಂದ ಘಟಕ ದುರಸ್ತಿಗಾಗಿ ಕಾದಿವೆ. ಸಮ್ಮಸಗಿ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಾಗಿವೆ.
(ಪೂರಕ ಮಾಹಿತಿ: ಮುಕ್ತೇಶ್ವರ ಕೂರಗುಂದಮಠ, ಮಾರುತಿ ಪೇಟಕರ, ಪ್ರಮೀಳಾ ಹುನಗುಂದ, ಪ್ರದೀಪ ಕುಲಕರ್ಣಿ, ಮಾಲತೇಶ್ ಆರ್.)
‘ಜಿಲ್ಲೆಯಲ್ಲಿರುವ 686 ಘಟಕಗಳ ಪೈಕಿ 71 ಘಟಕಗಳು ದುರಸ್ತಿಯಲ್ಲಿರುವುದು ಗಮನಕ್ಕೆ ಬಂದಿದೆ. ಇವುಗಳ ದುರಸ್ತಿಗಾಗಿ ಸೂಕ್ತ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕಾರ್ಯಪಾಲಕ ಎಂಜಿನಿಯರ್ ಮಹೇಶಪ್ಪ ಎನ್. ತಿಳಿಸಿದರು. ಘಟಕಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಘಟಕಗಳ ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿದ್ದರಿಂದ ಹಲವು ಕಡೆಗಳಲ್ಲಿ ಘಟಕಗಳು ಬಂದ್ ಆಗಿವೆ. ಗುತ್ತಿಗೆ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ’ ಎಂದರು. ‘ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದಿಂದ ಅನುದಾನ ಬಂದ ಕೂಡಲೇ 71 ಘಟಕಗಳನ್ನು ದುರಸ್ತಿ ಮಾಡಲಾಗುವುದು. ನಂತರ ಘಟಕಗಳನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗುವುದು. ಬಳಿಕ ಗ್ರಾಮ ಪಂಚಾಯಿತಿಯವರೇ ಘಟಕಗಳ ನಿರ್ವಹಣೆ ಮಾಡಲಿದ್ದಾರೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಬಹುಪಾಲು ಕೆರೆಗಳು ತುಂಬಿವೆ. ಹೀಗಾಗಿ ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುವುದಿಲ್ಲ. ನೀರಿನ ಕೊರತೆಯಾಗದಂತೆಯೂ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಹೇಳಿದರು. ಜಿಲ್ಲೆಯಲ್ಲಿ 71 ಘಟಕಗಳು ಬಂದ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಎಲ್ಲ ಘಟಕಗಳ ಮಾಹಿತಿ ಪಡೆದಿದ್ದೇನೆ. ಘಟಕಗಳನ್ನು ಮರು ಆರಂಭಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು. ‘ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿದ್ದರಿಂದ ಕೆಲವು ಕಡೆಗಳಲ್ಲಿ ಘಟಕಗಳು ಬಂದ್ ಆಗಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.