ರಟ್ಟೀಹಳ್ಳಿ: ತಾಲ್ಲೂಕಿನ ಕಣವಿಶಿದ್ದಗೇರಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ರೈತ ಮೃತಪಟ್ಟಿದ್ದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಕಣವಿಶಿದ್ದಗೇರಿ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಪಕ್ಕದ ನೀರಾವರಿ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತುಗಳು ಕಂಡುಬಂದಿದ್ದು, ಇಲಾಖೆಯ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಚಿರತೆ ಕಾರ್ಯಾಚರಣೆಯಲ್ಲಿ ವಿವಿಧ ತಾಲ್ಲೂಕುಗಳಿಂದ ಹೆಚ್ಚುವರಿ ಅರಣ್ಯ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ. ಚಿರತೆ ಮರಿ ಹಾಕಿರುವ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತಿದ್ದು, ಆಯ್ದ ಸ್ಥಳಗಳಲ್ಲಿ ಬೋನ್ ಅಳವಡಿಸಲಾಗಿದೆ. ಚಿರತೆಯ ಚಲನವಲನ ಗಮನಿಸಲು ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ ಎಂದು ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕು ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದರು.
ಗ್ರಾಮದ ಜಮೀನೊಂದರಲ್ಲಿ ಶುಕ್ರವಾರ ರಾತ್ರಿ ಬೆಳೆಗಳಿಗೆ ನೀರು ಹಾಯಿಸುವ ಸಂದರ್ಭದಲ್ಲಿ ಚಿರತೆ ದಾಳಿಯಿಂದ ರೈತ ಬೀರಪ್ಪ ಹನುಮಂತಪ್ಪ ಬಳಗಾವಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಸಹೋದರ ಗಣೇಶ ಬಳಗಾವಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಟ್ಟೀಹಳ್ಳಿ ತಾಲ್ಲೂಕು ಆಸ್ಪತ್ರೆ ಬಳಿ ಶುಕ್ರವಾರ ಜಮಾಯಿಸಿದ ರೈತರು ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಪೂರೈಕೆಯಿಂದ ಈ ಅವಘಡ ಸಂಭವಿಸಿದ್ದು, ರಾತ್ರಿ ಬದಲು ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಸಿದರು. ದೂರು ಆಲಿಸಿದ ಶಾಸಕ ಯು.ಬಿ. ಬಣಕಾರ, ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಚಿರತೆ ದಾಳಿಯಿಂದ ಮೃತಪಟ್ಟ ಬಿರೇಶ ಬಳಗಾವಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಹೆಚ್ಚುವರಿ ₹10 ಲಕ್ಷ ಪರಿಹಾರ ಸರ್ಕಾರದಿಂದ ಮಂಜೂರಾಗಲಿದೆ. ಕೂಡಲೇ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆಯು.ಬಿ. ಬಣಕಾರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.