ADVERTISEMENT

ಏತ ನೀರಾವರಿ, ವಿದ್ಯುತ್‌ ಗ್ರಿಡ್‌: ಸಿ.ಎಂ ಉದ್ಘಾಟನೆ ನಾಳೆ

ಹಲವು ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಲೋಕಾರ್ಪಣೆ: ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:19 IST
Last Updated 3 ಮೇ 2025, 14:19 IST
ಉದ್ಘಾಟನೆ ಸಿದ್ಧಗೊಂಡ ಹಾನಗಲ್‌ ತಾಲ್ಲೂಕಿನ ಬಾಳಂಬೀಡದ 110 ಕೆವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್
ಉದ್ಘಾಟನೆ ಸಿದ್ಧಗೊಂಡ ಹಾನಗಲ್‌ ತಾಲ್ಲೂಕಿನ ಬಾಳಂಬೀಡದ 110 ಕೆವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್   

ಹಾನಗಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ 4ರಂದು ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದು, ಈ ಪೈಕಿ ಬಾಳಂಬೀಡ ಏತ ನೀರಾವರಿ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಪ್ರಮುಖವಾಗಿವೆ.

ತಾಲ್ಲೂಕಿನ ಜೀವನದಿ ವರದಾದಿಂದ 72 ಗ್ರಾಮಗಳ ಒಟ್ಟು 162 ಕೆರೆಗಳನ್ನು ತುಂಬಿಸುವ ₹418.69 ಕೋಟಿ ವೆಚ್ಚದ ಮಹತ್ವಾಕಾಂಕ್ಷಿ ಬಾಳಂಬೀಡ ಏತ ನೀರಾವರಿ ಯೋಜನೆ ಹಾಗೂ 9 ಗ್ರಾಮಗಳ 78 ಕೆರೆಗಳನ್ನು ತುಂಬಿಸುವ ₹116.55 ಕೋಟಿ ವೆಚ್ಚದ ಹಿರೇಕಾಂಶಿ ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುವ ಜೊತೆಗೆ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಅನುಕೂಲವಾಗಿದೆ.

₹9 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ 14 ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಬಾಳಂಬೀಡದ 110 ಕೆವಿ ಸಾಮರ್ಥ್ಯದ ವಿದ್ಯುತ್ ಗ್ರಿಡ್ ಉದ್ಘಾಟನೆಗೊಳ್ಳುತ್ತಿದ್ದು, ಒಟ್ಟು 535 ಟಿ.ಸಿಗಳಿಂದ 1500ಕ್ಕಿಂತ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ಬಹಳ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ADVERTISEMENT

ಪಿಡಬ್ಲುಡಿ ವತಿಯಿಂದ ₹5 ಕೋಟಿ ವೆಚ್ಚದಲ್ಲಿ ಹಾನಗಲ್ ಪಟ್ಟಣದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಕಚೇರಿಗಳ ಸಂಕೀರ್ಣ, ಪುರಸಭೆಯ ಮೇಲ್ವಿಚಾರಣೆಯಲ್ಲಿ ₹87 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್, ₹2.5 ಕೋಟಿ ವೆಚ್ಚದಲ್ಲಿ ಅಕ್ಕಿಆಲೂರಿನಲ್ಲಿ ನಿರ್ಮಾಣಗೊಂಡ ಪ್ರವಾಸಿ ಮಂದಿರ, ಕೃಷಿ ಮಾರಾಟ ಇಲಾಖೆಯಿಂದ ₹2 ಕೋಟಿ ವೆಚ್ಚದಲ್ಲಿ ಅಕ್ಕಿಆಲೂರು ಹಾಗೂ ಹಾನಗಲ್ ಎಪಿಎಂಸಿ ಪ್ರಾಂಗಣದಲ್ಲಿ ನಿರ್ಮಾಣಗೊಂಡ ಉಗ್ರಾಣ, ವಾಣಿಜ್ಯ ಮಳಿಗೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

ಕುಡಿಯುವ ನೀರಿನ ಬವಣೆ ತಪ್ಪಿಸಲು ಗಡಿಗ್ರಾಮ ಕೂಡಲ, ಕೇಂದ್ರಿತ ಬಹುಗ್ರಾಮ ನದಿ ನೀರು ಸರಬರಾಜು ಪುನಶ್ಚೇತನ ಯೋಜನೆಗೆ ₹25 ಕೋಟಿ ವೆಚ್ಚದಲ್ಲಿ ಅಡಿಗಲ್ಲು ಹಾಕಲಾಗುತ್ತಿದೆ. ಕೂಡಲ, ಹರವಿ, ಹರನಗಿರಿ, ಅಲ್ಲಾಪುರ, ನರೇಗಲ್, ವರ್ದಿ ಸೇರಿದಂತೆ ಆ ಭಾಗದ ಗ್ರಾಮಗಳಿಗೆ 16,500ಕ್ಕೂ ಹೆಚ್ಚು ಜನರಿಗೆ ಅನುಕೂಲ ಆಗಲಿದೆ.

ಮಳೆಗಾಲದಲ್ಲಿ ಹಾನಗಲ್ ನಗರದ ಆನಿಕೆರೆ ಭರ್ತಿಯಾಗಿ ಹರಿಯುವ ನೀರು ನೂರಾನಿ ಗಲ್ಲಿ, ಸುಣಗಾರ ಓಣಿ, ಸುರಳೇಶ್ವರ ರಸ್ತೆ, ಕಮಾಟಗೇರಿ, ಕಲ್ಲಹಕ್ಕಲ ಮಾರ್ಗವಾಗಿ ಅಚಗೇರಿ ಕೆರೆವರೆಗೆ ಹರಿದು ಆ ಭಾಗದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಇದನ್ನು ತಪ್ಪಿಸಲು ಆನಿಕೆರೆಯಿಂದ ಅಚಗೇರಿ ಕೆರೆಯವರೆಗೆ 2.14 ಕಿ.ಮೀ. ಉದ್ದದ ಸಿಸಿ ರಾಜಕಾಲುವೆ ನಿರ್ಮಾಣಕ್ಕೆ ₹5 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.

ಹಾನಗಲ್‌ನ ಕುಮಾರೇಶ್ವರ ನಗರದಲ್ಲಿ ಮಳೆ ನೀರು ನುಗ್ಗುತ್ತಿದ್ದು, ಇದನ್ನು ತಪ್ಪಿಸಲು ₹52 ಲಕ್ಷ ವೆಚ್ಚದ ಸಿ.ಸಿ ದೊಡ್ಡ ಚರಂಡಿ ನಿರ್ಮಾಣ ಕಾಮಗಾರಿ, ಬಾಳಂಬೀಡ ಗ್ರಾಮದಲ್ಲಿ ₹89 ಲಕ್ಷ ವೆಚ್ಚದಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Cut-off box - ಶಿಲಾನ್ಯಾಸ ಇಂದು ಹಾನಗಲ್: ಜಿಲ್ಲಾಡಳಿತ ಕೆಪಿಟಿಸಿಎಲ್ ಕೆಎನ್ಎನ್ಎಲ್ ವತಿಯಿಂದ ಮೇ 4ರಂದು ಬೆಳಗ್ಗೆ 11 ಗಂಟೆಗೆ ತಾಲ್ಲೂಕಿನ ಅಕ್ಕಿಆಲೂರಿನ ಎಪಿಎಂಸಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಸಚಿವರು ಶಾಸಕರು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.