ADVERTISEMENT

ಮೊಬೈಲ್ ಮಿತಿಯಲ್ಲಿರಲಿ,ಫಾಸ್ಟ್‌ಫುಡ್‌ ತ್ಯಜಿಸಿ: ಚರ್ಯಾಶಿರೋಮಣಿ ಮಹಾರಾಜರು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 2:30 IST
Last Updated 20 ಡಿಸೆಂಬರ್ 2025, 2:30 IST
ಹಾವೇರಿಯ ರಜನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಧರ್ಮಸಭೆ’ಯನ್ನು ‘ಕರ್ನಾಟಕ ಜೈನ್ ಅಸೋಸಿಯೇಶನ್’ ಉಪಾಧ್ಯಕ್ಷ ಶೀತಲ್ ಕಲಗೌಡ ಪಾಟೀಲ ಉದ್ಘಾಟಿಸಿದರು
ಹಾವೇರಿಯ ರಜನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಧರ್ಮಸಭೆ’ಯನ್ನು ‘ಕರ್ನಾಟಕ ಜೈನ್ ಅಸೋಸಿಯೇಶನ್’ ಉಪಾಧ್ಯಕ್ಷ ಶೀತಲ್ ಕಲಗೌಡ ಪಾಟೀಲ ಉದ್ಘಾಟಿಸಿದರು   

ಪ್ರಜಾವಾಣಿ ವಾರ್ತೆ

ಹಾವೇರಿ: ‘ಇಂದು ಎಲ್ಲರೂ ಮೊಬೈಲ್‌ನಲ್ಲಿ ಮಗ್ನರಾಗುತ್ತಿದ್ದಾರೆ. ಮೊದಲು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ತಂದೆ– ತಾಯಿ ಹೊರಗಡೆ ಫಾಸ್‌ಫುಡ್‌ ತಿನ್ನುವುದನ್ನು ಬಿಟ್ಟು, ಮನೆಯಲ್ಲಿಯೇ ಸಾಂಪ್ರದಾಯಿಕ ಆಹಾರ ತಯಾರಿಸಿ ಮಕ್ಕಳಿಗೆ ನೀಡಬೇಕು’ ಎಂದು ಚರ್ಯಾಶಿರೋಮಣಿ ವಿದಿತಸಾಗರ ಮಹಾರಾಜರು ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಿದ್ಧಚಕ್ರ ಮಹಾಮಂಡಲದ ವಿಧಾನ ಮಹೋತ್ಸವದಲ್ಲಿ ಶುಕ್ರವಾರ ನಡೆದ ‘ಧರ್ಮಸಭೆ’ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ADVERTISEMENT

‘ಮಕ್ಕಳಿಗೆ ಶಿಕ್ಷಣ ನೀಡುವಂತೆ, ಅವರ ಭವಿಷ್ಯಕ್ಕೆ ಸಂಪತ್ತು ಮಾಡಿಡುವಂತೆ ಅವರಿಗೆ ಶಾಶ್ವತ ಧರ್ಮದ ಸ್ಮಾರಕ ನೀಡಬೇಕು. ಮಕ್ಕಳು ಧರ್ಮ ರಕ್ಷಣೆ ಮಾಡಲು ಅಚಲವಾಗಿರಬೇಕು’ ಎಂದರು.

‘ಪ್ರಕೃತಿಯಲ್ಲಿ ಬದುಕಬೇಕು, ವಿಕೃತಿಯಲ್ಲಿ ಹೋಗಬಾರದು. ದೇವ, ಶಾಸ್ತ್ರ ಹಾಗೂ ಗುರುಗಳಿಗೆ ವಿನಯದಿಂದ ಇರಬೇಕು. ತಂದೆ–ತಾಯಿ ಮೊದಲಿಗೆ ಧರ್ಮ ಪಾಲಿಸಬೇಕು. ಆಗ ಮಕ್ಕಳು ಸಹ ಧರ್ಮ ಪಾಲಿಸುತ್ತಾರೆ. ಜೈನ್‌ ಧರ್ಮದ ಆಚರಣೆಯ ಮಹತ್ವ ತಿಳಿದುಕೊಳ್ಳಬೇಕು. ಜತೆಗೆ, ಇನ್ನೊಬ್ಬರ ಧರ್ಮ ಉಳಿಸುವ ಕೆಲಸ ಮಾಡಿದರೆ ನಮ್ಮ ಧರ್ಮವೂ ಉಳಿಯುತ್ತದೆ’ ಎಂದರು.

ಧರ್ಮಸಭೆ ಉದ್ಘಾಟಿಸಿದ ‘ಕರ್ನಾಟಕ ಜೈನ್ ಅಸೋಸಿಯೇಶನ್’ ಉಪಾಧ್ಯಕ್ಷ ಶೀತಲ್ ಕಲಗೌಡ ಪಾಟೀಲ ಮಾತನಾಡಿ, ‘ವಿದಿತಸಾಗರ ಮಹಾರಾಜರ ಸಾನಿಧ್ಯದಲ್ಲಿ ಸಿದ್ಧ ಚಕ್ರ ಆರಾಧನೆ ನಡೆಯುತ್ತಿದ್ದು, ಹಾವೇರಿ ಜನ ಭಾಗ್ಯಶಾಲಿಗಳು. ಉಗಾರದಲ್ಲಿ 111 ಜೈನ್‌ ಮನೆಗಳು ಹಾಗೂ ಎಂಟು ಬಸದಿಗಳಿವೆ. ಅದೇ ರೀತಿ 200 ಮುಸ್ಲಿಂ ಧರ್ಮದವರ ಮನೆಗಳಿವೆ. ಎಲ್ಲರೂ ಶಾಖಾ ಹಾರಿಗಳಾಗಿದ್ದಾರೆ. ಹಾವೇರಿಯ ಜನರು ಒಮ್ಮೆ ಭೇಟಿ ನೀಡಬೇಕು’ ಎಂದರು.

ಹಾವೇರಿ ರತ್ನತ್ರಯ ಮಹಿಳಾ ಸಮಾಜದ ಅಧ್ಯಕ್ಷರಾದ ಪುಷ್ಪಾ ಪದ್ಮರಾಜ ಕಳಸೂರ ಅವರು ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಮಾತಾಜಿ, ಮಾಣಿಕ ಶ್ರೀಪಾಲ ಚಂದಗಡೆ, ಸಿದ್ದಗೌಡ ಪಾಟೀಲ, ಸಾಧನಾ ದೀದಿ, ಮಹಾವೀರ ಭಯ್ಯಾಜಿ, ಜಯಕುಮಾರ ಭಯ್ಯಾಜಿ, ಜಿನೇಂದ್ರ ಬಂಗ, ಸುಭಾಸ ಪಾಟೀಲ, ಆಶಾ ಪ್ರಭು, ಪ್ರಶಾತ ವಿ., ಮಹಾವೀರ ಜೈನ್, ಉತ್ತಮ ರಾವ್‌ಸಾಬ ಪಾಟೀಲ, ಮಾಳ ಹರ್ಷೇಂದ್ರ ಜೈನ್, ಶೀತಲಕುಮಾರ ಬಿ.ಆರ್., ಅಜಿತಕುಮಾರ ಬೇತೂರ, ಧರಣೇಂದ್ರ ಎ.ಸಿ., ಪ್ರಶಾಂತ ಆದಿರಾಜ ಮುರಗಿ, ಸನತ್‌ಕುಮಾರ ಪಾಯಪ್ಪ ಕಳಸೂರ, ಡಿ. ಸುನೀಲಕುಮಾರ, ಎ.ಸಿ. ಧರಣೇಂದ್ರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.