ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಮುದ್ದಿನಕೊಪ್ಪ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಳಾಗಿದ್ದು, ಕಳಪೆ ಬೀಜ ಮಾರಾಟದ ಆರೋಪ ವ್ಯಕ್ತವಾಗುತ್ತಿದೆ.
‘ಗ್ರಾಮದ ಸುಮಾರು 200 ಎಕರೆಯಲ್ಲಿ ‘ಎನ್‌ಎಂಎಚ್ 1008’ ತಳಿಯ ಮೆಕ್ಕೆಜೋಳದ ಬೀಜವನ್ನು ಬಿತ್ತನೆ ಮಾಡಲಾಗಿತ್ತು. ಬೆಳೆಯು ಕಟಾವು ಹಂತಕ್ಕೆ ಬಂದಿದೆ. ಆದರೆ, ಗಿಡದಲ್ಲಿರುವ ಬಹುತೇಕ ತೆನೆಗಳು ಬಿಳಿ ಬಣ್ಣಕ್ಕೆ ತಿರುಗಿ ಪೊಳ್ಳಾಗಿವೆ’ ಎಂದು ರೈತರು ಅಳಲು ತೋಡಿಕೊಂಡರು.
‘ಹಂಸಬಾವಿಯ ಮರಡಿಬಸವೇಶ್ವರ ಅಗ್ರೊ ಸೆಂಟರ್‌ನಲ್ಲಿ 2025ರ ಜೂನ್ 2ರಂದು ‘ಎನ್‌ಎಂಎಚ್ 1008’ ಮೆಕ್ಕೆಜೋಳದ ಬೀಜ ಖರೀದಿ ಮಾಡಲಾಗಿತ್ತು. ‘ಉತ್ತಮ ರೀತಿಯಲ್ಲಿ ಬೆಳೆ ಬರುತ್ತದೆ. ಇಳುವರಿಯೂ ಚೆನ್ನಾಗಿದೆ’ ಎಂದು ಮಳಿಗೆಯವರು ಬೀಜ ಕೊಟ್ಟಿದ್ದರು. ಅದನ್ನೇ ತಂದು ಜಮೀನಿನಲ್ಲಿ ಬಿತ್ತನೆ ಮಾಡಲಾಗಿತ್ತು’ ಎಂದು ರೈತರು ಹೇಳಿದರು.
‘ನಮ್ಮ ಪಕ್ಕದ ಜಮೀನಿನಲ್ಲಿ ಕೆಲವರು, ಬೇರೆ ಕಂಪನಿಯ ಮೆಕ್ಕೆಜೋಳ ಬೆಳೆದಿದ್ದಾರೆ. ಅವರ ಬೆಳೆಯೂ ಈಗ ಕಟಾವು ಹಂತಕ್ಕೆ ಬಂದಿದ್ದು, ಎಲ್ಲ ತೆನೆಗಳು ಕೇಸರಿ ಬಣ್ಣ ಹೊಂದಿ ಚೆನ್ನಾಗಿದೆ. ಆದರೆ, ನಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ‘ಎನ್‌ಎಂಎಚ್ 1008’ ತಳಿಯ ಬೀಜದಿಂದ ತೆನೆಗಳು ಚೆನ್ನಾಗಿ ಬಂದಿಲ್ಲ. ಕೇಸರಿ ಬಣ್ಣದ ಬದಲು ಬಿಳಿ ಬಣ್ಣ ಬಂದಿದೆ. ತೆನೆಗಳು ಸಂಪೂರ್ಣವಾಗಿ ಪೊಳ್ಳಾಗಿವೆ’ ಎಂದು ರೈತರು ದೂರಿದರು.
‘ಸಾವಿರಾರೂ ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದೇವೆ. ಆದರೆ, ಕಳಪೆ ಬೀಜಗಳಿಂದ ಬೆಳೆಯು ಉತ್ತಮವಾಗಿ ಬೆಳೆದಿಲ್ಲ. ಕಂಪನಿಯವರು ಕಳಪೆ ಬೀಜ ಮಾರಾಟ ಮಾಡಿ ನಮ್ಮನ್ನು ವಂಚಿಸಿದ್ದಾರೆ. ಅವರಿಂದಾಗಿ ನಾವು ನಷ್ಟ ಅನುಭವಿಸುವಂತಾಗಿದೆ’ ಎಂದು ರೈತರು ಆಕ್ರೋಶ ಹೊರಹಾಕಿದರು.
‘ಹೊಸ ತಳಿಯ ಬೀಜವೆಂದು ಹೇಳಿ ಬೀಜ ಮಾರಿದ್ದ, ಮರಡಿಬಸವೇಶ್ವರ ಅಗ್ರೊ ಸೆಂಟರ್‌ನವರು ನಮಗೆ ಮೋಸ ಮಾಡಿದ್ದಾರೆ. ಈ ಕಂಪನಿಯವರು ಕೊಟ್ಟ ಬೀಜಗಳು, ಹಲವು ಕಡೆಗಳಲ್ಲಿ ಹಾಳಾಗಿರುವ ಬಗ್ಗೆ ರೈತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಂಪನಿ ಬೀಜದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನಷ್ಟ ಅನುಭವಿಸಿರುವ ಮುದ್ದಿನಕೊಪ್ಪದ ಎಲ್ಲ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು’ ಎಂದು ರೈತರಾದ ರಾಮಪ್ಪ ತಳವಾರ, ಶಿವರಾಜ, ಉಮೇಶ, ಬಸವರಾಜ, ಮಂಜಪ್ಪ, ನೀಲಪ್ಪ, ಲಕ್ಷ್ಮಪ್ಪ, ಶಿವಾನಂದ ಆಗ್ರಹಿಸಿದ್ದಾರೆ.
ಮುದ್ದಿನಕೊಪ್ಪದಲ್ಲಿ ಮೆಕ್ಕೆಜೋಳ ಹಾಳಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸ್ಥಳಕ್ಕೆ ತಜ್ಞರನ್ನು ಕಳುಹಿಸಲಾಗಿದ್ದು ಅವರ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದುಮಲ್ಲಿಕಾರ್ಜುನ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.