ADVERTISEMENT

ಬ್ಯಾಡಗಿ| ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿ ಸ್ಥಗಿತ: ರೈತರ ಅಕ್ರೋಶ 

ಪ್ರಮೀಳಾ ಹುನಗುಂದ
Published 7 ಜನವರಿ 2026, 7:34 IST
Last Updated 7 ಜನವರಿ 2026, 7:34 IST
ಬ್ಯಾಡಗಿ ಎಪಿಎಂಸಿ ಪ್ರಾಂಗಣದ ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರ್ಕೆಟಿಂಗ್‌ ಸೊಸೈಟಿ ಖರೀದಿ ಕೇಂದ್ರಕ್ಕೆ ತಂದಿರುವ ಗೋವಿನ ಜೋಳದ ಚೀಲಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಸಾಲಾಗಿ ನಿಲ್ಲಿಸಿರುವುದು.
ಬ್ಯಾಡಗಿ ಎಪಿಎಂಸಿ ಪ್ರಾಂಗಣದ ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರ್ಕೆಟಿಂಗ್‌ ಸೊಸೈಟಿ ಖರೀದಿ ಕೇಂದ್ರಕ್ಕೆ ತಂದಿರುವ ಗೋವಿನ ಜೋಳದ ಚೀಲಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳು ಸಾಲಾಗಿ ನಿಲ್ಲಿಸಿರುವುದು.   

ಬ್ಯಾಡಗಿ: ಪಟ್ಟಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರ್ಕೆಟಿಂಗ್‌ ಸೊಸೈಟಿಯಲ್ಲಿ ಸರ್ಕಾರ ನಿಗದಿಪಡಿಸಿದ ಎಂಎಸ್‌ಪಿ ದರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಮಂಗಳವಾರ ಮತ್ತೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖರೀದಿ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸುವಂತೆ ರೈತರು ಅಗ್ರಹಿಸಿದ್ದಾರೆ. ದಿನಕ್ಕೆ ₹2 ಸಾವಿರ ಟ್ರ್ಯಾಕ್ಟರ್‌ ಬಾಡಿಗೆ ನೀಡಬೇಕಾಗಿದ್ದು, ಚರಂಡಿ ಬದಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ಚಳಿಯಲ್ಲಿಯೇ  ಮಾಲನ್ನು ಕಳ್ಳರಿಂದ ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬುಡಪನಹಳ್ಳಿ ರೈತ ತಿರಕಪ್ಪ ಮರಬಸಣ್ಣನವರ  ಅಳಲು ತೋಡಿಕೊಂಡರು.

ಕಳೆದ ನಾಲ್ಕು ದಿನಗಳಿಂದ ಟ್ರ್ಯಾಕ್ಟರ್‌ ನಿಲ್ಲಿಸಿದ್ದು, ಮನೆಯಲ್ಲಿ ಎತ್ತುಗಳನ್ನು ಕಟ್ಟಿ ಬಂದಿದ್ದೇನೆ, ಅದಕ್ಕೆ ನೀರು ಕುಡಿಸುವುದು, ಮೇವು ಹಾಕುವುದು ಯಾರು ಮಾಡಬೇಕು. ಮೆಕ್ಕೆಜೋಳವನ್ನು ಪ್ರತಿನಿತ್ಯ ಖರೀದಿಸುವ ವ್ಯವಸ್ಥೆಯ ಆಗಬೇಕು. ರೈತರ ಪರಿಸ್ಥಿತಿ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

‘ಕಳೆದ ನಾಲ್ಕು ದಿನಗಳಿಂದ ಟ್ರ್ಯಾಕ್ಟರ್‌ ಬಾಡಿಗೆಗೆ ತಂದಿದ್ದು, ಕುಡಿಯಲು ನೀರಿಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ ನಮ್ಮ ಗೋಳು ಯಾರಿಗೆ ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ದೇವರೆ ನಮ್ಮನ್ನು ಕಾಪಾಡಬೇಕು. ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಖರೀದಿ ಕೇಂದ್ರ ಆರಂಭಿಸಿದೆ. ರೈತರ ಶಾಪ ಸರ್ಕಾರಕ್ಕೆ ತಟ್ಟದೆ ಇರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಂದು ಬರುತ್ತಾರೆ ನಾಳೆ ಬರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ರಾಮನಿಗಾಗಿ ಶಬರಿ ಕಾಯುವ ಪರಿಸ್ಥಿತಿ ನಮ್ಮದಾಗಿದೆ’ ಎಂದು ಫಕೀರಪ್ಪ ಹೊಸಳ್ಳಿ ಮತ್ತು ನಾಗರಾಜ ಬಣಕಾರ ಹೇಳಿದರು.

‘ಒಟ್ಟಾರೆ 860 ರೈತರು ಮೆಕ್ಕೆಜೋಳ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇನ್ನೂ 635ಕ್ಕೂ ಹೆಚ್ಚು ರೈತರ ಗೋವಿನಜೋಳ ಖರೀದಿಸಬೇಕಾಗಿದೆ. ಕಳೆದ ಒಂದು ವಾರದಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸೋಮವಾರ ಕೋಳಿ ಫಾರ್ಮಿನ ವ್ಯಾಪಾರಿ ಬಂದು 960 ಕ್ವಿಂಟಲ್‌ ಮಾತ್ರ ಖರೀದಿ ಮಾಡಿಕೊಂಡು ಹೋಗಿದ್ದಾರೆ. ಸಹಕಾರ ಮಹಾಮಂಡಳ ಕೋಳಿ ಪೌಲ್ಟ್ರಿ ಮಾಲೀಕರಿಗೆ ಟೆಂಡರ್‌ ನೀಡಿದ್ದು, ಅವರು ಹಣ ಸಂದಾಯ ಮಾಡಿದಾಗ ಮಾತ್ರ ಖರೀದಿ ಪ್ರಕ್ರಿಯೆ ಆಂಭವಾಗುತ್ತದೆ. ಅಲ್ಲಿಯವರೆಗೆ  ಚಳಿಯಲ್ಲಿಯೇ ಕಾಯಬೇಕಾದ ಪರಿಸ್ಥಿತಿ ರೈತರಿಗೆ ಆಗಿದೆ.  ಕಳೆದ ನಾಲ್ಕು ದಿನಗಳಿಂದ ಬಾಡಿಗೆ ಟ್ರ್ಯಾಕ್ಟರ್‌ ಮೂಲಕ ಹೇರಿಕೊಂಡು ಬಂದು ಕುಳಿತ್ತಿದ್ದೇವೆ. ಇಂದು ನಾಳೆ ಎಂದು ನಮ್ಮನ್ನ ಸತಾಯಿಸುತ್ತಿದ್ದಾರೆ. ಸೊಸೈಟಿ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡರೂ ಖರೀದಿ ಮಾಡುವವರು ಬಂದಾಗ ಮಾತ್ರ ಖರೀದಿ ನಡೆಯುತ್ತದೆ. ಎಂದು ಹೇಳುತ್ತಿದ್ದಾರೆ’ ಎಂದರು.

ಟ್ರ್ಯಾಕ್ಟರ್‌ ಬಾಡಿಗೆ ದಿನಕ್ಕೆ ಸಾವಿರ, ಇನ್ನಿತರ ಖರ್ಚು ಸೇರಿದಂತೆ ಒಟ್ಟಾರೆ ರೈತನಿಗೆ ಯಾವುದೇ ಲಾಭವಾಗುವುದಿಲ್ಲ. ಈಗಾಗಲೇ ಇಳುವರಿ ಬಾರದೆ ರೈತರು ಸಾಕಷ್ಟು ಆರ್ಥಿಕ ತೊಂದರೆ ಅನುಭವಿಸಿದ್ದಾರೆ ಎಂದರು ಹೇಳಿದರು.

ಇಲ್ಲಿಯ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಕಳೆದ ಡಿ.15ರಂದು ಚಾಲನೆ ನೀಡಿದ್ದಾರೆ. ಒಟ್ಟಾರೆ ತಾಲ್ಲೂಕಿನ 860 ಜನ ರೈತರು ಮೆಕ್ಕೆಜೋಳ ಮಾರಾಟ ಮಾಡಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೆ 7,960 ಕ್ವಿಂಟಲ್‌ ಖರೀದಿ ಮಾಡಿದ್ದು, ಕರ್ನಾಟಕ ಸಹಕಾರ ಮಹಾಮಂಡಳ ಕೋಳಿ ಫಾರ್ಮ ಮಾಲೀಕರಿಗೆ ಟೆಂಡರ್‌ ನೀಡಿದೆ. ಅವರು ಬಂದಾಗ ಮಾತ್ರ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲಿವರೆಗೂ ನಾವು ಏನೂ ಮಾಡುವಂತಿಲ್ಲ. ಅಲ್ಲದೆ ಮಾಲೀಕರೇ ಗೋವಿನ ಜೋಳವನ್ನು ಪರೀಕ್ಷಿಸಿ ಖರೀದಿ ಮಾಡುತ್ತಾರೆ. ಫಂಗಸ್‌ ಹಾಗೂ ಇನ್ನಿತರ ಕಾರಣಗಳಿಂದ ನಿರಾಕರಿಸಬಹುದಾಗಿದೆ. ಹೀಗಾಗಿ ಮೊದಲು ಖರೀದಿ ವರ್ತಕರು ಪರೀಕ್ಷಿಸಿ ಬಳಿಕ ಮಾಲನ್ನು ತರುವಂತೆ ನಾವು ರೈತರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಸೋಮವಾರ ಬಂದಂತಹ ಖರೀದಿ ವರ್ತಕರು ನಾಲ್ಕೈದು ರೈತರ ಮಾಲನ್ನು ನಿರಾಕರಿಸಿದ್ದಾರೆ. ಇನ್ನುಳಿದವರ ಗೋವಿನಜೋಳ ಹಾಗೆಯೇ ಉಳಿದಿವೆ. ಎರಡು ದಿನ ಬಿಟ್ಟು ಮೂಡಬಿದರೆಯಿಂದ ಖರೀದಿ ಮಾಡಲು ಬರುತ್ತಾರೆ ಎಂದು ಪೋನ್‌ ಮೂಲಕ ತಿಳಿಸಿದ್ದಾರೆ ಎನ್ನುತ್ತಾರೆ ಬ್ಯಾಡಗಿಯ ಟಿಎಪಿಸಿಎಂಎಸ್‌ ವ್ಯವಸ್ಥಾಪಕ ಪ್ರಭು ಬಣಕಾರ ಅವರು.

ಬ್ಯಾಡಗಿ ಎಪಿಎಂಸಿ ಪ್ರಾಂಗಣದ ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರ್ಕೆಟಿಂಗ್‌ ಸೊಸೈಟಿ ಖರೀದಿ ಕೇಂದ್ರದಲ್ಲಿ ಕಳೆದ ನಾಲ್ಕು ದಿನಗಳಿಂದ ಖರಿದಿ ನಡೆಯದೆ ರೈತರು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.