
ಹಾವೇರಿ: ‘ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ₹ 3,000 ಬೆಲೆ ನೀಡಬೇಕು. ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ನಾಲ್ಕನೇ ದಿನ ಪೂರೈಸಿದ್ದು, ಗುರುವಾರವೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ‘ಬೆಲೆ ನಿಯಂತ್ರಿಸುವ ಕಾನೂನಿನ ಅಧಿಕಾರ ರಾಜ್ಯಕ್ಕಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಹೆಚ್ಚಿದೆ. ನಾನೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕೇಂದ್ರ ಸರ್ಕಾರವು ತಡವಾಗಿ ಮಾರ್ಗಸೂಚಿ ರಚಿಸಿದ್ದರಿಂದ ಇಂದು ಸಮಸ್ಯೆಯಾಗಿದೆ’ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು.
ಸಚಿವರ ಹೇಳಿಕೆಯಿಂದ ಅಸಮಾಧಾನಗೊಂಡ ರೈತರು, ‘ನೀವು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿರಾ. ಕೇಂದ್ರದವರು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇಬ್ಬರ ಜಗಳದಲ್ಲಿ ರೈತರು ಸಾಯುತ್ತಿದ್ದಾರೆ. ಜಗತ್ತಿಗೆ ಅನ್ನ ನೀಡುವ ರೈತರನ್ನು ಕೊಲ್ಲಬೇಡಿ. ಮೆಕ್ಕೆಜೋಳ ದರ ಕುಸಿತದಿಂದ ಕಂಗಾಲಾಗಿರುವ ರೈತರನ್ನು ಬದುಕಿಸಿ’ ಎಂದು ಕೋರಿದರು.
ಸಚಿವ ಶಿವಾನಂದ ಪಾಟೀಲ, ‘ಈ ಬಾರಿ ದೇಶದಾದ್ಯಂತ ಮೆಕ್ಕೆಜೋಳ, ಭತ್ತ, ಕಬ್ಬು... ಎಲ್ಲ ಬೆಳೆಯ ಉತ್ಪಾದನೆ ಹೆಚ್ಚಾಗಿದೆ. ಉತ್ಪನ್ನದ ಪೂರೈಕೆ ಹೆಚ್ಚಿರುವ ಕಾರಣಕ್ಕೆ ಬೆಲೆ ಕುಸಿಯುವುದು ಸಾಮಾನ್ಯ. ರಾಜ್ಯದಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇರುವುದಾಗಿ ನವೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅದಾಗಿ ಹಲವು ದಿನಗಳ ನಂತರ, ಕೇಂದ್ರ ಸರ್ಕಾರ ಎಫ್‌ಆರ್‌ಪಿ ಮಾಡಿತು. ಇದರ ಮಾರ್ಗಸೂಚಿ ರೂಪಿಸುವಲ್ಲಿ ತಡವಾಗಿದ್ದರಿಂದ, ಇಂದು ಮೆಕ್ಕೆಜೋಳದ ಬೆಲೆ ಕುಸಿದಿದೆ’ ಎಂದು ಹೇಳಿದರು.
‘ಮೆಕ್ಕೆಜೋಳವನ್ನು ಹೆಚ್ಚಾಗಿ ಪಶು ಆಹಾರ, ಇಥೆನಾಲ್ ತಯಾರಿಕೆಗೆ ಬಳಸುತ್ತಾರೆ. ಮಾರ್ಗಸೂಚಿ ರೂಪಿಸುವ ಮುನ್ನವೇ ರಾಜ್ಯದಲ್ಲಿರುವ ಹಲವು ಕಾರ್ಖಾನೆಗಳು, ಮೆಕ್ಕೆಜೋಳವನ್ನು ಖರೀದಿಸಿಟ್ಟುಕೊಂಡಿವೆ. ಹೀಗಾಗಿ, ಮತ್ತಷ್ಟು ಮೆಕ್ಕೆಜೋಳ ಖರೀದಿಸಲು ಕಂಪನಿಯವರು ಆಸಕ್ತಿ ತೋರಿಸುತ್ತಿಲ್ಲ. ಕಂಪನಿಯವರಿಗೆ ರಾಜ್ಯ ಸರ್ಕಾರದಿಂದಲೂ ವಿನಂತಿ ಮಾಡಿದ್ದೇವೆ. ರೈತರ ಮೆಕ್ಕೆಜೋಳವನ್ನು ಖರೀದಿಸುವಂತೆ ಕೋರಿದ್ದೇವೆ’ ಎಂದರು.
‘ಮೆಕ್ಕೆಜೋಳ ಖರೀದಿ ಸಂಬಂಧ ಮುಖ್ಯಮಂತ್ರಿಯವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರೈತರಿಗೆ ಸಾಧ್ಯವಾದಷ್ಟು ಒಳ್ಳೆಯ ಬೆಲೆ ಕೊಡಿಸಲಾಗುವುದು. ಕೇಂದ್ರ ತೆರೆಯುವ ಬಗ್ಗೆ ಕ್ಯಾಬಿನೆಟ್ ನಿರ್ಣಯ ಆಗಬೇಕು. ಪ್ರತಿಭಟನೆ ನಿಮ್ಮ ಹಕ್ಕು. ನಿಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ. ಸ್ಥಳೀಯ ಸಂಸದ, ಕೇಂದ್ರ ಸಚಿವರು ನಿಯೋಗದ ಮೂಲಕ ದೆಹಲಿಗೆ ಕರೆದೊಯ್ದರೆ ಬರಲು ನಾನು ಸಿದ್ಧ. ನಾವೆಲ್ಲರೂ ಸಂಘರ್ಷ ಬಿಟ್ಟು, ಸಾಮರಸ್ಯದಿಂದ ಸಮಸ್ಯೆ ಬಗೆಹರಿಸೋಣ’ ಎಂದು ಸಚಿವ ಹೇಳಿದರು.
‘ನಾನು ದ್ರಾಕ್ಷಿ ಬೆಳೆಗಾರ. ಹಸಿ ದ್ರಾಕ್ಷಿ ಬದಲು ಒಣದ್ರಾಕ್ಷಿ ಮಾಡಿ ಮಾರುತ್ತೇನೆ. ಈಕೆ ಕೆ.ಜಿ.ಗೆ. ₹400ರಿಂದ ₹430 ಸಿಕ್ಕಿದೆ. ರೈತರು ಒಂದೇ ಬೆಳೆ ನಂಬಿಕೊಂಡು ಇರಬಾರದು. ಜೊತೆಗೆ, ಬೆಳೆಯನ್ನು ಸಂಸ್ಕರಣೆ ಮಾಡಿ ಮಾರುವುದನ್ನು ಕಲಿಯಬೇಕು. ಅದರಿಂದ ಕೃಷಿಯಲ್ಲಿ ಅಧಿಕ ಲಾಭ ಪಡೆಯಬಹುದು’ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಬೆಳೆ ಹಾನಿಗೆ ಸರ್ಕಾರ ಪರಿಹಾರ ಬಿಡುಗಡೆ ಮಾಡಿದೆ. ರೈತರ ಖಾತೆಗೆ ಸದ್ಯದಲ್ಲೇ ಹಣ ಜಮೆ ಆಗಲಿದೆ’ ಎಂದರು.
ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಶಿವಬಸಪ್ಪ ಗೊವಿ, ದಿಳ್ಳೆಪ್ಪ ಮಣ್ಣೂರು, ಮುತ್ತಪ್ಪ ಗುಡಗೇರಿ, ಮಾಲತೇಶ ಪೂಜಾರ. ಎಚ್.ಎಚ್. ಮುಲ್ಲಾ, ಮರಿಗೌಡ ಪಾಟಿಲ, ಅಡಿವೆಪ್ಪ ಆಲದಕಟ್ಟಿ, ರಾಜು ತರ್ಲಗಟ್ಟ, ಪ್ರಭುಗೌಡ ಪ್ಯಾಟಿ, ರುದ್ರಗೌಡ ಕಾಡನಗೌಡ್ರ, ಶಂಕ್ರಪ್ಪ ಶಿರಗೊಂಬಿ, ಈರಣ್ಣ ಚಕ್ರಸಾಲಿ ಹಾಗೂ ಇತರರು ಪ್ರತಿಭಟನೆಯಲ್ಲಿದ್ದರು.
‘ರೈತರು ಈಗಾಗಲೇ ಶೇ 30ರಷ್ಟು ಮೆಕ್ಕೆಜೋಳ ಮಾರಿದ್ದಾರೆ. ಉಳಿದಿರುವುದು ಶೇ 70ರಷ್ಟು ಮಾತ್ರ. ಎಲ್ಲರನ್ನೂ ನಿಯೋಗದ ಮೂಲಕ ಕೇಂದ್ರ ಸರ್ಕಾರದತ್ತ ಕರೆದೊಯ್ದು ತಡವಾಗುತ್ತದೆ. ನಿಮ್ಮಿಬ್ಬರ ಜಗಳದಲ್ಲಿ ನಾವು ಬಡವಾಗುವುದು ಬೇಡ. ತಕ್ಷಣ ಖರೀದಿ ಕೇಂದ್ರ ತೆರೆಯಿರಿ. ಕೇಂದ್ರದ ₹2400 ಹಾಗೂ ರಾಜ್ಯದ ₹ 600 ಸೇರಿ ಒಟ್ಟು ₹3000 ನೀಡಿ ಮೆಕ್ಕೆಜೋಳ ಖರೀದಿಸಿ’ ಎಂದು ‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಅವರು ‘ರಾಜ್ಯದಲ್ಲೊಂದು ಹಾಗೂ ಕೇಂದ್ರದಲ್ಲೊಂದು ಸರ್ಕಾರ ಇರುವುದರಿಂದ ನಮ್ಮ ಪಾಡು ಹೇಳತೀರದ್ದಾಗಿದೆ. ಕಾಂಗ್ರೆಸ್‌ನವರು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಬಿಜೆಪಿಯವರು ಸಹ ತಮ್ಮ ಜವಾಬ್ದಾರಿ ಮರೆತು ರೈತರ ಪರ ಇರುವುದಾಗಿ ಹೋರಾಟ ಮಾಡುತ್ತಿದ್ದಾರೆ. ಇಬ್ಬರ ಜಗಳದಲ್ಲಿ ರೈತರನ್ನು ಕೊಲ್ಲಬೇಡಿ. ಬೆಂಬಲ ಬೆಲೆ ನೀಡಲು ಆಗದಿದ್ದರೆ ಗ್ಯಾರಂಟಿ ಯೋಜನೆ ರೀತಿಯಲ್ಲಿ ರೈತರ ಖಾತೆಗೂ ಕ್ವಿಂಟಲ್‌ಗೆ ಇಂತಿಷ್ಟು ಹಣ ಜಮೆ ಮಾಡಿ. ಇಲ್ಲದಿದ್ದರೆ ಸಾಲ ಮಾಡಿ ಕೃಷಿ ಮಾಡಿರುವ ರೈತರು ಸಾಯುವ ಪರಿಸ್ಥಿತಿ ಬರುತ್ತದೆ’ ಎಂದು ಗೋಳು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.