
ಶಿಗ್ಗಾವಿ: ಗೋವಿನಜೋಳ ಬೆಳೆಗೆ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕ ಹಾಗೂ ತಾಲ್ಲೂಕಿನ ರೈತ ಒಕ್ಕೂಟದ ಪದಾಧಿಕಾರಿಗಳು, ರೈತರು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕೃಷಿ ಮಾರುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಚೆ ಕಚೇರಿ, ಪಿಎಲ್‌ಡಿ ಬ್ಯಾಂಕ್ ವೃತ್ತ, ಹುಲಗೂರ ಬೈಪಾಸ್ ರಸ್ತೆ, ಹಳೆ ಬಸ್ ನಿಲ್ದಾಣ, ಮುಖ್ಯ ಪೇಟೆ ರಸ್ತೆ, ಸಂತೆ ಮೈದಾನ, ಪುರಸಭೆ ವೃತ್ತ ಸೇರಿದಂತೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಸರ್ಕಾರಗಳ ವಿರುದ್ಧ ಘೋಷಣೆ ಹಾಕಿದರು. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಚನ್ನಮ್ಮ ವೃತ್ತದಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ, ‘ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್ ಗೋವಿನ ಜೋಳಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ₹2,400 ನಿಗದಿಪಡಿಸಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದೆ. ಆದರೆ ಇದು ಅವೈಜ್ಞಾನಿಕ ಬೆಲೆ. ಕ್ವಿಂಟಲ್‌ಗೆ ₹3,000 ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ‘ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್ ಗೋವಿನಜೋಳಕ್ಕೆ ಪ್ರೋತ್ಸಾಹಧನವಾಗಿ ₹900 ನಿಗದಿಪಡಿಸಬೇಕು. ಗೋವಿನಜೋಳ ಹಾವೇರಿ ಜಿಲ್ಲೆಯ ರೈತರ ಪ್ರಧಾನ ವಾಣಿಜ್ಯ ಬೆಳೆ. ಆದರೆ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಗೋವಿನಜೋಳ ಬೆಳೆ ಬೆಳೆದು ರೈತರು ಕಂಗಾಲಾಗಿದ್ದಾರೆ. ಬೆಳೆಗಾಗಿ ಮಾಡಿದ ಸಾಲ ಹೇಗೆ ತೀರಿಸಬೇಕೆಂದು ತಿಳಿಯದಾಗಿದೆ’ ಎಂದರು.
ರೈತ ಮುಖಂಡ ಬಸಲಿಂಗಪ್ಪ ನರಗುಂದ ಮಾತನಾಡಿ, ‘ಹೆಚ್ಚಿನ ಪ್ರಮಾಣದಲ್ಲಿ ರೈತರು ಗೋವಿನಜೋಳ ಬೆಳೆದಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಖರೀದಿ ಕೇಂದ್ರವನ್ನು ತೆರೆದು ಗೋವಿನ ಜೋಳ ಖರೀದಿಗೆ ಅನುಕೂಲ ಕಲ್ಪಿಸಬೇಕು’ ಎಂದರು.
ಮುಖಂಡರಾದ ಧರ್ಮಗೌಡ ಹೊನ್ನಾಗೌಡ್ರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ನವಲಗುಂದ, ಮಂಜುನಾಥ ಕಂಕಣವಾಡ, ನಾಗರಾಜ ದೇಸಾಯಿ, ಗಿರೀಶ ಪಾಟೀಲ, ಕರಬಸಪ್ಪ ಆಲೂರ, ಶಿವಪ್ಪ ಕಬ್ಬೂರ, ಪ್ರಕಾಶ ನಿಕ್ಕಂ, ಪ್ರಕಾಶ ದೇವಗಿರಿ, ಸಂಜೀವ ಮಣ್ಣಣ್ಣವರ, ಚನ್ನವೀರಯ್ಯ ಹೊಸಮಠ, ರಾಮನಗೌಡ ಗಾಳಿಗೌಡ್ರ, ಬಸಯ್ಯ ಪೂಜಾರ, ಶಿವಾನಂದ ಜೇಡಿಮಠ, ಎಂ.ಎನ್. ಸವೂರ, ರಾಮನಗೌಡ್ರ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.