ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ದೋಷ: ಹೋರಾಟಕ್ಕೆ ಹಾವೇರಿ ರೈತರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 2:38 IST
Last Updated 2 ಜನವರಿ 2026, 2:38 IST
ಹಾವೇರಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜ. 8ರಂದು ನಡೆಯಲಿರುವ ಕಾರ್ಯಾಗಾರದ ಭಿತ್ತಿಪತ್ರಗಳನ್ನು ರೈತ ಮುಖಂಡರು ಗುರುವಾರ ಬಿಡುಗಡೆ ಮಾಡಿದರು
ಹಾವೇರಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜ. 8ರಂದು ನಡೆಯಲಿರುವ ಕಾರ್ಯಾಗಾರದ ಭಿತ್ತಿಪತ್ರಗಳನ್ನು ರೈತ ಮುಖಂಡರು ಗುರುವಾರ ಬಿಡುಗಡೆ ಮಾಡಿದರು   

ಹಾವೇರಿ: ‘ಮೆಕ್ಕೆಜೋಳ ಖರೀದಿಗಾಗಿ ಸರ್ಕಾರ ಕಾಟಾಚಾರಕ್ಕೆ ಕೇಂದ್ರ ತೆರೆದಿದೆ. ಮೆಕ್ಕೆಜೋಳ ಖರೀದಿಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ‘ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ’ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿಯನ್ನು ಸಮರ್ಪಕವಾಗಿ ನಡೆಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ  ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ, ಧರಣಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರತಿಯೊಬ್ಬ ರೈತರಿಂದ ಕ್ವಿಂಟಲ್‌ಗೆ ₹2,400 ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವುದಾಗಿ ಘೋಷಿಸಿತ್ತು. ಆದರೆ, ಕಾಟಾಚಾರದ ಆದೇಶ ಇದಾಗಿದೆ’ ಎಂದು ದೂರಿದರು.

ADVERTISEMENT

ನೋಂದಣಿಗಷ್ಟೇ ಸೀಮಿತ: ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ‘ಮೆಕ್ಕೆಜೋಳ ಖರೀದಿಗಾಗಿ ಜಿಲ್ಲಾಡಳಿತದಿಂದ 8 ಹಾಗೂ ಕೆಎಂಎಫ್‌ನಿಂದ 7 ಕಡೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಈ ಕೇಂದ್ರಗಳು ರೈತರ ನೋಂದಣಿಗಷ್ಟೇ ಸೀಮಿತವಾಗಿದ್ದು, ಇದುವರೆಗೆ ಕೇವಲ 7,000 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿಯಾಗಿದೆ’ ಎಂದು ದೂರಿದರು.

‘ಜಿಲ್ಲಾಡಳಿತದ ಕೇಂದ್ರಗಳಲ್ಲಿ 17,520 ರೈತರು, 1.44 ಲಕ್ಷ ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೆಎಂಎಫ್‌ ಕೇಂದ್ರಗಳಲ್ಲಿ 4,670 ರೈತರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಇವರಿಂದ ಮೆಕ್ಕಜೋಳವನ್ನು ಸಂಪೂರ್ಣವಾಗಿ ಖರೀದಿ  ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳವಿದೆ. ಸರ್ಕಾರ ನೋಂದಣಿ ಮಾಡಿರುವ ಪ್ರಮಾಣ, ಯಾವುದಕ್ಕೂ ಸಾಲುವುದಿಲ್ಲ. ಕನಿಷ್ಠ 3 ಲಕ್ಷ ಮೆಟ್ರಿಕ್ ಟನ್‌ ಮೆಕ್ಕೆಜೋಳವನ್ನಾದರೂ ಸರ್ಕಾರ ಖರೀದಿಸಬೇಕು. ಖರೀದಿ ಸಾಫ್ಟ್‌ವೇರ್‌ನಲ್ಲಿ ದೋಷಗಳಿದ್ದು, ಅವುಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ ಹಾಗೂ ಇದ್ದರು.

‘ನೈಸರ್ಗಿಕ ಕೃಷಿ’ ತರಬೇತಿ‘

ರೈತರಿಗೆ ನೈಸರ್ಗಿಕ ಕೃಷಿ ಬಗ್ಗೆ ತರಬೇತಿ ನೀಡಲು ಜ. 8ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.  ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಯುವ ಉದ್ದೇಶ ನಮ್ಮದಾಗಿದೆ’ ಎಂದು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

‘ಹಾವೇರಿ ಇಜಾರಿಲಕಮಾಪುರ ಬಳಿಯ ಸಿದ್ಧಾರೂಢ ಕಾಲೊನಿಯಲ್ಲಿರುವ ‘ಡಾ. ಬಿ.ಆರ್. ಅಂಬೇಡ್ಕರ್ ಭವನ’ದಲ್ಲಿ ಕಾರ್ಯಾಗಾರ ನಡೆಯಲಿದೆ. ಬೆಳೆ ಪದ್ಧತಿ ಬದಲಾವಣೆ ನಾಟಿ ಬಿತ್ತದೆ ಜಾನುವಾರು ಸಂರಕ್ಷಣೆ ನಾಟಿ ಹಸುವಿನ ಸಗಣಿ–ಗಂಜಲದ ಮಹತ್ವ ಬೆಳೆ ಬೆಳೆಗಳನ್ನು ದಲ್ಲಾಳಿಗಳಿಲ್ಲದೇ ಮಾರಾಟ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಗತಿಪರ ರೈತ ಸುಭಾಷ್ ಪಾಳೇಕರ್ ಅವರು ಮಾತನಾಡಲಿದ್ದಾರೆ. ಮಾಹಿತಿಗಾಗಿ 9480124365 9483124365 ಸಂಪರ್ಕಿಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.