ADVERTISEMENT

ರಟ್ಟೀಹಳ್ಳಿ: ಚಿರತೆ ಸೆರೆಗೆ ಅರಣ್ಯ ಇಲಾಖೆ ಅವಿರತ ಪ್ರಯತ್ನ

ಸೆರೆಯಾಗದ ನರಭಕ್ಷಕ ಚಿರತೆ: ಆತಂಕದಲ್ಲಿ ಗ್ರಾಮದ ಜನತೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 4:14 IST
Last Updated 16 ಅಕ್ಟೋಬರ್ 2025, 4:14 IST
ರಟ್ಟೀಹಳ್ಳಿ ತಾಲ್ಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ನರಭಕ್ತಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಅವಿರತ ಪ್ರಯತ್ನದಲ್ಲಿದ್ದು, ಚಿರತೆ ಹೆಜ್ಜೆ ಗುರುತಗಳನ್ನು ಪರೀಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿ.
ರಟ್ಟೀಹಳ್ಳಿ ತಾಲ್ಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ನರಭಕ್ತಕ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಅವಿರತ ಪ್ರಯತ್ನದಲ್ಲಿದ್ದು, ಚಿರತೆ ಹೆಜ್ಜೆ ಗುರುತಗಳನ್ನು ಪರೀಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿ.   

ರಟ್ಟೀಹಳ್ಳಿ : ತಾಲ್ಲೂಕಿನ  ಕಣವಿಶಿದ್ಗೇರಿ, ಪರ್ವತಶಿದ್ಗೇರಿ, ಜೋಕನಾಳ ಭಾಗದಲ್ಲಿ ನರಭಕ್ಷಕ ಚಿರತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ   ಸಮರೋಪಾದಿ ಪ್ರಯತ್ನ ಕೈಗೊಂಡಿದ್ದಾರೆ. ಕಣವಿಶಿದ್ಗೇರಿ ಗ್ರಾಮದಲ್ಲಿ ಕಳೆದ ಶುಕ್ರವಾರ ರಾತ್ರಿ ಜಮೀನಿಗೆ ನೀರು ಹಾಕಿಸಲು ಹೋದ ಸಹೋದರರ ಮೇಲೆ ದಾಳಿಮಾಡಿದ ವೇಳೆ, ತಮ್ಮ ಚಿರತೆಗೆ ಬಲಿಯಾದರೆ, ಅಣ್ಣ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕಾರಣ ಅರಣ್ಯ ಪ್ರದೇಶದಲ್ಲಿ ವಿವಿಧೆಡೆ 6 ಬೋನುಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಮರಗಳಿಗೆ ಕ್ಯಾಮೆರಾ ಅಳವಡಿಸಿ ಚಿರತೆ ಚಲನವಲನ ಗಮನಿಸುತ್ತಿದ್ದಾರೆ. ಡ್ರೋನ್‌ ಬಳಸಿ ಚಿರತೆ ಇರುವ ಸ್ಥಳ ಹುಡುಕಾಟದಲ್ಲಿದ್ದಾರೆ. ಇಷ್ಟಾದರೂ ಚಿರತೆ ಸೆರೆ ಸಾಧ‍್ಯವಾಗುತ್ತಿಲ್ಲ. ಅಲ್ಲದೇ ಈ ಮಧ್ಯೆ ಚಿರತೆ ಊರೊಳಗೆ ಬಂದು ನಾಯಿ, ಕುರಿ,ಬೇಟೆಯಾಡುವುದನ್ನು ಮುಂದುವರಿಸಿದೆ.

ಚಿರತೆ ಸೆರೆಗೆ ಗ್ರಾಮದ ಜನತೆ ಅರಣ್ಯ ಸಿಬ್ಬಂದಿಗೆ ಸಹಕಾರಿಸುತ್ತಾ ಅವರೊಂದಿಗೆ ನೆರವಾಗುತ್ತಿದ್ದಾರೆ. ಅಲ್ಲದೆ ಸಿಬ್ಬಂದಿಗೆ ಊಟ, ವಿಶ್ರಾಂತಿ ವ್ಯವಸ‍್ಥೆಗೆ ಅನುವು ಮಾಡಿಕೊಡುತ್ತಿದ್ದಾರೆ. ಅಲ್ಲಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗುತ್ತಿವೆ. ಹೀಗಾಗಿ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳ ಜನತೆ ಭಯದ ವಾತಾವರಣದಲ್ಲಿದ್ದಾರೆ. ಜಮೀನುಗಳಿಗೆ ರಾತ್ರಿ ಇರಲಿ ಹಗಲು ಹೊತ್ತಿನಲ್ಲಿಯೂ ಕೃಷಿ ಚಟುವಟಿಕೆಗೆ ಹೋಗಲು ಭಯಪಡುತ್ತಿದ್ದಾರೆ.

ADVERTISEMENT

ಕಣವಿಶಿದ್ಗೇರಿ, ಜೋಕನಾಳ, ಪರ್ವತಶಿದ್ಗೇರಿ ಗ್ರಾಮಗಳ ಜನತೆ ರಾತ್ರಿ 7 ರ ನಂತರ ಮನೆಯಿಂದ ಹೊರಗಡೆ ಬರದಂತೆ, ಗುಂಪು ಗುಂಪಾಗಿ ಇರುವಂತೆ, ರಾತ್ರಿ ವೇಳೆಯಲ್ಲಿ ಸಾಕುಪ್ರಾಣಿಗಳನ್ನು ಮನೆಯ ಒಳಗೆ ಕಟ್ಟಿಕೊಳ್ಳುವಂತೆ, ರಾತ್ರಿ ಸಂಚರಿಸುವ ಸಮಯದಲ್ಲಿ ಸ್ವಯಂ ಸುರಕ್ಷತೆಗೆ ಆಯುಧ, ಇಟ್ಟುಕೊಳ್ಳುವಂತೆ ಗ್ರಾಮಸ್ಥರಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮಸ್ಥರ ವಾಟ್ಸ್ ಆಪ್ ರಚಿಸಿಕೊಂಡಿದ್ದು, ಚಿರತೆಯ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ತಕ್ಷಣ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಮಾಡಲಾಗಿದೆ. ಗ್ರೂಪ್ ನಲ್ಲಿ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಇದ್ದು, ಕೂಡಲೇ ನೆರವಿಗೆ ಬರಲು ಸಾಧ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ.

ಚಿರತೆ ಸೆರೆಗಾಗಿ ಅವಿರತವಾಗಿ ರಾತ್ರಿ ಹಗಲು ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ಚಿರತೆ ಸೆರೆಗಾಗಿ ಹೆಚ್ಚಿನ ನೈಪುಣ್ಯ, ಹಾಗೂ ಅನುಭವಿ ಹೊಂದಿರುವ ಸಿಬ್ಬಂದಿ ಕಳಿಸಿಕೊಡುವಂತೆ ಕೇಳಿಕೊಳ್ಳಲಾಗುವುದು ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮೂಡಬಾಗಿಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.