ADVERTISEMENT

ಕುಂಬಾರಣ್ಣ ಅರಳಿಸಿದ ‘ಮಣ್ಣೆತ್ತಿನ ಬಸವಣ್ಣ’

ಹಾವೇರಿಯ ಕುಂಬಾರಗುಂಡಿಯಲ್ಲಿ ‘ಮಣ್ಣೆತ್ತಿನ ಅಮಾವಾಸ್ಯೆ’ಗೆ ತಯಾರಾದ 30 ಸಾವಿರ ಮೂರ್ತಿಗಳು

ಸಿದ್ದು ಆರ್.ಜಿ.ಹಳ್ಳಿ
Published 7 ಜುಲೈ 2021, 5:23 IST
Last Updated 7 ಜುಲೈ 2021, 5:23 IST
ಹಾವೇರಿಯ ಕುಂಬಾರ ಗುಂಡಿಯಲ್ಲಿ ‘ಮಣ್ಣೆತ್ತಿನ ಬಸವಣ್ಣ’ ಮೂರ್ತಿಗಳನ್ನು ತಯಾರಿಸುತ್ತಿರುವ ಮಹಿಳೆಯರು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿಯ ಕುಂಬಾರ ಗುಂಡಿಯಲ್ಲಿ ‘ಮಣ್ಣೆತ್ತಿನ ಬಸವಣ್ಣ’ ಮೂರ್ತಿಗಳನ್ನು ತಯಾರಿಸುತ್ತಿರುವ ಮಹಿಳೆಯರು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಜನರು ‘ಮಣ್ಣೆತ್ತಿನ ಅಮಾವಾಸ್ಯೆ’ಯನ್ನು ವಿಶಿಷ್ಟವಾಗಿ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬದ ಕೇಂದ್ರಬಿಂದುವಾಗಿರುವ ‘ಮಣ್ಣೆತ್ತಿನ ಬಸವಣ್ಣ’ನ ಮೂರ್ತಿಗಳ ತಯಾರಿಕೆಯಲ್ಲಿ ನಗರದ ಕುಂಬಾರಗುಂಡಿಯ ಕುಂಬಾರ ಸಮುದಾಯದವರು ನಿರತರಾಗಿದ್ದಾರೆ.

ದೀಪಾವಳಿ ಅಮಾವಾಸ್ಯೆಯಲ್ಲಿ ‘ಧನಲಕ್ಷ್ಮಿ’ ಪೂಜಿತಗೊಂಡರೆ, ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ‘ಧಾನ್ಯಲಕ್ಷ್ಮಿ’ಯನ್ನು ತರುವ ಎತ್ತುಗಳ ಪ್ರತಿರೂಪವನ್ನು ಆರಾಧಿಸಲಾಗುತ್ತದೆ. ಕಾರಹುಣ್ಣಿಮೆಯಲ್ಲಿ ಜೀವಂತ ಎತ್ತುಗಳನ್ನು ಅಲಂಕರಿಸಿ ಪೂಜಿಸಿದರೆ, ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಮಣ್ಣೆತ್ತುಗಳೇ ದೇವರಾಗುತ್ತವೆ.

ಈ ಬಾರಿ ಜುಲೈ 9ರಂದು ‘ಮಣ್ಣೆತ್ತಿನ ಅಮಾವಾಸ್ಯೆ’ ಬಂದಿದೆ. ಹಬ್ಬದ ದಿನದಂದು ಮಣ್ಣೆತ್ತುಗಳನ್ನು ಜನರು ಹೂ–ಬಾಸಿಂಗದಿಂದ ಅಲಂಕರಿಸಿ, ಹೋಳಿಗೆ–ಕಡುಬು ಸಿಹಿಖಾದ್ಯಗಳ ನೈವೇದ್ಯ ಅರ್ಪಿಸುತ್ತಾರೆ. ಹೆಗಲು ಕೊಟ್ಟು ದುಡಿವ ದೈವಗಳಿಗೆ ರೈತರು ಶ್ರದ್ಧಾಭಕ್ತಿಯಿಂದ ನಮಿಸುತ್ತಾರೆ.

ADVERTISEMENT

ಜೇಡಿಮಣ್ಣು–ಹುತ್ತದ ಮಣ್ಣು:

‘ಹಳ್ಳಿ ಸೊಗಡಿನ ಈ ಹಬ್ಬಕ್ಕೆ ತಿಂಗಳ ಮುಂಚೆಯೇ ಮಣ್ಣಿನ ಮೂರ್ತಿಗಳ ಕೆಲಸ ಆರಂಭಿಸುತ್ತೇವೆ. ಜೇಡಿಮಣ್ಣು ಸಂಗ್ರಹಿಸಿ, ನೆನೆ ಹಾಕುತ್ತೇವೆ. ನಂತರ ಹುತ್ತದ ಮಣ್ಣನ್ನು ತಂದು ಜೇಡಿಮಣ್ಣಿನೊಂದಿಗೆ ಮಿಶ್ರಣ ಮಾಡುತ್ತೇವೆ. ಆ ನಂತರ ಕುಟುಂಬಸ್ಥರು ಒಗ್ಗೂಡಿ ಮಣ್ಣಿತ್ತಿನ ಬಸವಣ್ಣನಿಗೆ ರೂಪ ಕೊಡುತ್ತೇವೆ. 2–3 ದಿನ ನೆರಳಿನಲ್ಲೇ ಒಣಗಿಸಿ, ನಂತರ ವಿವಿಧ ಬಣ್ಣಗಳನ್ನು ಹಚ್ಚಿ ಮೆರುಗು ನೀಡುತ್ತೇವೆ’ ಎಂದು ಕುಂಬಾರಗುಂಡಿಯ ನಿವಾಸಿ ಸಾವಿತ್ರಮ್ಮ ಕುಂಬಾರ ಹೇಳಿದರು.

ಮಣ್ಣಿತ್ತಿನ ಬಸವಣ್ಣನನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ–ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆ ರೈತಾಪಿ ಜನರದ್ದು. ಹೀಗಾಗಿ ಮಣ್ಣಿನ ಮೂರ್ತಿಗಳಿಗೆ ಹಬ್ಬದ ಸಮಯದಲ್ಲಿ ಎಲ್ಲಿಲ್ಲದ ಬೇಡಿಕೆ ಬರುತ್ತದೆ.

‘₹10ರಿಂದ ₹150ರವರೆಗೆ ವಿವಿಧ ಗಾತ್ರದ ಬಸವಣ್ಣನ ಮೂರ್ತಿಗಳು ನಮ್ಮಲ್ಲಿ ದೊರಕುತ್ತವೆ. ಗಾಂಧಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಸೇರಿದಂತೆ ಪ್ರಮುಖ ಬಡಾವಣೆಗಳ ಆಯ್ದ ಸ್ಥಳಗಳಲ್ಲಿ ಮೂರ್ತಿಗಳನ್ನು ಮಾರಾಟ ಮಾಡುತ್ತೇವೆ. ನಗರದ ಜನರು ಹಾಗೂ ಸುತ್ತಮುತ್ತಲ ಹಳ್ಳಿ ಜನರು ಬಂದು ಖರೀದಿಸುತ್ತಾರೆ’ ಎಂದು ರಮೇಶ ಕುಂಬಾರ ತಿಳಿಸಿದರು.

ಕಲರ್‌ ಬಸವಣ್ಣ:

‘ಮೊದಲಿಗೆ ಬಣ್ಣ ರಹಿತವಾದ ಪರಿಸರ ಸ್ನೇಹಿ ಬಸವಣ್ಣನ ಮೂರ್ತಿಗಳನ್ನೇ ಜನರು ಕೊಂಡು ಕೊಳ್ಳುತ್ತಿದ್ದರು.ಆದರೆ, ಐದಾರು ವರ್ಷಗಳಿಂದ ಬಣ್ಣದ ಬಸವಣ್ಣನಿಗೆ ಬೇಡಿಕೆ ಹೆಚ್ಚಿದೆ. ನಾವು ಗ್ರಾಹಕರ ಬೇಡಿಕೆಗೆ ತಕ್ಕಂತೆ ‘ವಾಟರ್‌ ಪೇಂಟ್‌’ ಹಚ್ಚಿ ಮಾರಾಟ ಮಾಡುತ್ತೇವೆ’ ಎಂದುತಿಮ್ಮಣ್ಣ ಕುಂಬಾರ ಹೇಳಿದರು.

‘ಮನೆಯಲ್ಲಿ ಪೂಜಿಸಿದ ಮೂರ್ತಿಗಳನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸ್ಟೇಟಸ್‌ ಇಟ್ಟುಕೊಂಡು ಜನರು ಖುಷಿ ಪಡುತ್ತಾರೆ. ಮಡಿಕೆ–ಕುಡಿಕೆಗಳಿಗೆ ಬೇಡಿಕೆ ತಗ್ಗಿದ್ದರೂ, ಮಣ್ಣೆತ್ತಿನ ಬಸವಣ್ಣನಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಖುಷಿ ಕೊಟ್ಟಿದೆ’ ಎಂದು ಸುರೇಶ ಕುಂಬಾರ ಸಂತಸ ವ್ಯಕ್ತಪಡಿಸಿದರು.

ಕೊಳಚೆ ನೀರಿನಿಂದ ಕಿರಿಕಿರಿ

ನಗರದ ಮಳೆ ನೀರು ಮತ್ತು ಗಟಾರದ ಕೊಳಚೆ ನೀರು ಹರಿದು ಕುಂಬಾರಗುಂಡಿಯ ತಗ್ಗು ಪ್ರದೇಶಕ್ಕೆ ಬಂದು ಸೇರುತ್ತದೆ. ಈ ಕಲುಷಿತ ನೀರಿನ ದುರ್ನಾತದಿಂದ ಇಲ್ಲಿಯ 30 ಕುಟುಂಬಗಳ ನಿವಾಸಿಗಳು ಕಂಗಾಲಾಗಿದ್ದಾರೆ.

‘ಜೋರು ಮಳೆ ಬಂದ್ರೆ ಮನೆಯ ಸುತ್ತ ಮೊಣಕಾಲುದ್ದ ನೀರು ಬಂದು ನಿಲ್ಲುತ್ತದೆ. ಮನೆಯ ಆಚೆಗಡೆ ಕಾಲಿಡಲು ಸಾಧ್ಯವಾಗುವುದಿಲ್ಲ. ವಿಷಕಾರಿ ಹಾವುಗಳ ಕಾಟದಿಂದ ರಾತ್ರಿ ನಿದ್ದೆಯೇ ಬರುವುದಿಲ್ಲ. ಈ ಬಗ್ಗೆ ಶಾಸಕರು, ನಗರಸಭೆಗೆ ಹಲವು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಗಟಾರದ ನೀರನ್ನು ಬೇರೆ ಕಡೆ ತಿರುವಲು ಸಾಧ್ಯವಿಲ್ಲ ಅಂತಾರೆ. ಹಾಗಾದ್ರೆ ನಮ್ಮ ವಾಸಸ್ಥಳಕ್ಕೆ ನೀರು ಬಿಡೋಕೇ ಹಕ್ಕು ಇದೆಯಾ’ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.