ADVERTISEMENT

ಹಾವೇರಿ: ವರದಾ ನದಿಗೆ ತಳ್ಳಿ ಕೊಲೆ;ಪತ್ನಿ ಜೊತೆ ಸಲುಗೆ ಇಟ್ಟುಕೊಂಡಿದ್ದಕ್ಕೆ ಕೃತ್ಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 3:18 IST
Last Updated 2 ಆಗಸ್ಟ್ 2025, 3:18 IST
ಮನೋಜ್ ಉಡಗಣಿ
ಮನೋಜ್ ಉಡಗಣಿ   

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಮನೋಜ್ ಪ್ರಕಾಶ ಉಡಗಣಿ (28) ಎಂಬುವವರ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೋಜ್ ಅವರನ್ನು ವರದಾ ನದಿಯಲ್ಲಿ ತಳ್ಳಿ ಕೊಲೆ ಮಾಡಿರುವ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

‘ಶಿಗ್ಗಾವಿ ತಾಲ್ಲೂಕಿನ ಲಕ್ಕಿಕೊಪ್ಪದಲ್ಲಿ (ಶಿವಮೊಗ್ಗ–ತಡಸ ರಾಜ್ಯ ಹೆದ್ದಾರಿ) ದಾಬಾ ನಡೆಸುತ್ತಿದ್ದ ಮನೋಜ್, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಜುಲೈ 25ರಂದು ಮನೆಯಿಂದ ನಾಪತ್ತೆಯಾಗಿದ್ದರು. ಕುಣಿಮೆಳ್ಳಳ್ಳಿ ಬಳಿ ವರದಾ ನದಿಯ ಸೇತುವೆಯಲ್ಲಿ ಮನೋಜ್ ಚಪ್ಪಲಿ ಸಿಕ್ಕಿದ್ದವು. ಇದೇ ಸುಳಿವು ಆಧರಿಸಿ ಬೋಟ್‌ ಮೂಲಕ ನದಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಗ್ರಾಮದ ಬಳಿ ವರದಾ ನದಿಯಲ್ಲಿ ಶುಕ್ರವಾರ ಮೃತದೇಹ ಪತ್ತೆ ಮಾಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಮಗ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದ ಪ್ರಕಾಶ, ಮೃತದೇಹ ಸಿಗುತ್ತಿದ್ದಂತೆ ಮರು ಹೇಳಿಕೆ ನೀಡಿದ್ದಾರೆ. ‘ಹಾವೇರಿ ನಿವಾಸಿ ಶಿವರಾಜ ವಿರೇಶ ಜಾಲವಡಗಿ ಹಾಗೂ ಇತರರು ಸೇರಿಕೊಂಡು ನನ್ನ ಮಗನನ್ನು ವರದಾ ನದಿಯಲ್ಲಿ ದೂಡಿ ಕೊಲೆ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಂದೆಯ ದೂರಿನಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಹಾನಗಲ್ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಪತ್ನಿ ಜೊತೆ ಸಲುಗೆ ಇಟ್ಟುಕೊಂಡಿದ್ದಕ್ಕೆ ಕೃತ್ಯ

‘ಆರೋಪಿ ಶಿವರಾಜ್, ಬೊಮ್ಮನಹಳ್ಳಿಯ ಯುವತಿಯೊಬ್ಬರನ್ನು ಮದುವೆಯಾಗಿದ್ದ. ದಂಪತಿ ಹಾಗೂ ಮಕ್ಕಳ ಜೊತೆ ಹಾವೇರಿಯಲ್ಲಿ ನೆಲೆಸಿದ್ದ. ಶಿವರಾಜ್ ಪತ್ನಿ ಜೊತೆ ಸ್ನೇಹ ಹೊಂದಿದ್ದ ಮೃತ ಮನೋಜ್, ಆಗಾಗ ಸಂದೇಶ ಕಳುಹಿಸುತ್ತಿದ್ದ, ಕರೆ ಮಾಡುತ್ತಿದ್ದ. ಇಬ್ಬರ ನಡುವೆ ಸಲುಗೆ ಇತ್ತೆಂದು ತಂದೆ ಪ್ರಕಾಶ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಪತ್ನಿ ಜೊತೆ ಮನೋಜ್ ಸಲುಗೆ ಇಟ್ಟುಕೊಂಡಿದ್ದ ಸಂಗತಿ ಆರೋಪಿ ಶಿವರಾಜ್‌ಗೆ ಗೊತ್ತಾಗಿತ್ತು. ಇದೇ ವಿಚಾರವಾಗಿ ಮನೋಜ್‌ಗೆ ಜೀವ ಬೆದರಿಕೆಯೊಡ್ಡಿದ್ದ. ಪತ್ನಿ ತಂಟೆಗೆ ಬಾರದಂತೆ ತಾಕೀತು ಮಾಡಿದ್ದ’ ಎಂದು ತಿಳಿಸಿದರು.

ಪಾರ್ಟಿ ತಯಾರಿಗೆ ಕರೆದು ಕೊಲೆ: ‘ಜುಲೈ 26ರಂದು ಮನೋಜ್‌ ಜನ್ಮದಿನವಿತ್ತು. ಜುಲೈ 25ರಂದು ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಿನ್ನ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸೋಣ. ತಯಾರಿ ಬಗ್ಗೆ ಮಾತನಾಡೋಣ ಬಾ’ ಎಂದು ಕರೆದಿದ್ದರು. ಮನೋಜ್, ಶಿವರಾಜ ಹಾಗೂ ಇತರೆ ಇಬ್ಬರು ಕುಣಿಮೆಳ್ಳಳ್ಳಿ ಬಳಿಯ ವರದಾ ನದಿಯ ಹಳೇ ಸೇತುವೆ ಬಳಿ ಹೋಗಿದ್ದರೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ಹೇಳಿದರು.

‘ನಾಲ್ವರು ಸೇರಿ ಮದ್ಯ ಕುಡಿದಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ಮನೋಜ್‌ ಅವರನ್ನು ನದಿಯ ನೀರಿಗೆ ತಳ್ಳಿದ್ದರೆಂಬುದು ದೂರುದಾರರ ಆರೋಪವಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂಬುದು ಗೊತ್ತಾಗಿದ್ದು, ಬೇರೆ ಏನಾದರೂ ಸಂಶಯವಿದೆಯಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ವಿವರಿಸಿದರು.

ನಾಪತ್ತೆಯಾಗಿದ್ದ ಮನೋಜ್‌ ಅವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು ಆರೋಪಿಗಳ ವಿಚಾರಣೆ ನಡೆದಿದೆ. ನಿಖರ ಮಾಹಿತಿ ಸದ್ಯದಲ್ಲೇ ತಿಳಿಸಲಾಗುವುದು
ಎಲ್.ವೈ. ಶಿರಕೋಳ ಹೆಚ್ಚುವರಿ ಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.