
ಪೊಲೀಸ್
ಸಾಂದರ್ಭಿಕ ಚಿತ್ರ
ರಾಣೆಬೆನ್ನೂರು: ‘ಮೊದಲ ಮದುವೆಯಾಗಿ ಎರಡು ಮಕ್ಕಳಿರುವ ವಿಷಯವನ್ನು ಮುಚ್ಚಿಟ್ಟು ಮಹಿಳೆಯೊಬ್ಬರು ನನ್ನನ್ನು ಎರಡನೇ ಮದುವೆಯಾಗಿ ವಂಚಿಸಿದ್ದಾರೆ’ ಎಂದು ಆರೋಪಿಸಿ ಯುವಕನೊಬ್ಬ ಠಾಣೆ ಮೆಟ್ಟಿಲೇರಿದ್ದು, ದೂರು ಸ್ವೀಕರಿಸಿರುವ ಹಲಗೇರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
‘ತುಮ್ಮಿನಕಟ್ಟಿ ಗ್ರಾಮದ ರವೀಂದ್ರ ಜವಳಿ ಎಂಬಾತ, ಹೊಸದುರ್ಗ ಗಿರಿಯಾಪುರದ ಮಹಿಳೆಯರನ್ನು ಫೆ. 5ರಂದು ಮದುವೆಯಾಗಿದ್ದ. ಮಹಿಳೆಗೆ ಮಕ್ಕಳಿರುವ ವಿಷಯ ಗೊತ್ತಾಗಿ, ಮಹಿಳೆ ಮೋಸ ಮಾಡಿದ್ದಾರೆಂದು ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಏನಿದು ಪ್ರಕರಣ: ರವೀಂದ್ರ ಜವಳಿ ಹಾಗೂ ಮಹಿಳೆ, ಮದುವೆ ಏಜೆಂಟರ ಮೂಲಕ ಪರಸ್ಪರ ಪರಿಚಯ ಆಗಿದ್ದರು. ಹಿರೇಕೆರೂರು ತಾಲ್ಲೂಕಿನ ದುರ್ಗಮ್ಮ ದೇವಸ್ಥಾನದಲ್ಲಿ ಫೆ. 5ರಂದು ಎರಡೂ ಕಡೆಯ ಸಂಬಂಧಿಕ ಸಮ್ಮುಖದಲ್ಲಿ ಮದುವೆಯಾಗಿದ್ದರು.
ಮದುವೆಯಾದ ಮೇಲೆ ಮಹಿಳೆ, ಗಂಡನ ಮನೆಯಲ್ಲಿ ವಾಸವಾಗಿದ್ದರು. 5 ದಿನಗಳ ನಂತರ, ಮೊಬೈಲ್‌ಗೆ ಕರೆ ಮಾಡಿದಾಗ ಅವರ ಮಕ್ಕಳು ಕರೆ ಸ್ವೀಕರಿಸಿ ಮಾತನಾಡಿದ್ದರು. ಅವಾಗಲೇ ಯುವಕನಿಗೆ ಸಂಶಯ ಬಂದಿತ್ತು. ಪರಿಶೀಲನೆ ನಡೆಸಿದಾಗ, ಮಹಿಳೆಯ ಮೊದಲ ಮದುವೆ ವಿಷಯ ಪತ್ತೆಯಾಗಿದೆ.
‘ನನಗೆ ವಂಚನೆಯಾಗಿದೆ’ ಎಂದು ಯುವಕ ಸಂಬಂಧಿಕರಿಗೆ ತಿಳಿಸಿದ್ದ. ಇದು ಗೊತ್ತಾಗಿ ಮಹಿಳೆ, ಮನೆ ಬಿಟ್ಟು ಹೋಗಿದ್ದರು. ಅವರನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
‘ಯುವಕನನ್ನು ಮದುವೆಯಾಗಲು ಮಹಿಳೆ ಹಾಗೂ ಅವರ ತಂಡದವರು, ₹ 2.50 ಲಕ್ಷ ಹಣವನ್ನು ವಧುದಕ್ಷಿಣಿಯಾಗಿ ಪಡೆದಿರುವ ಮಾಹಿತಿಯಿದೆ. ಕನ್ಯೆ ಸಿಗದೇ ನೊಂದಿದ್ದ ಯುವಕ, ಮೊದಲ ಮದುವೆಯಾಗಿದ್ದ ಮಹಿಳೆಯನ್ನು ಪುನಃ ಮದುವೆಯಾಗಿ ವಂಚನೆಗೆ ಗುರಿಯಾಗಿದ್ದಾನೆ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂತ್ರಸ್ತ ರವೀಂದ್ರ ಜವಳಿ, ‘ಹೊಸದುರ್ಗ ತಾಲ್ಲೂಕಿನ ಹೊಳಲ್ಕೆರೆಯ ಇಬ್ಬರೂ ಮದುವೆ ಏಜೆಂಟರು, ಮಹಿಳೆಯನ್ನು ಪರಿಚಯ ಮಾಡಿಸಿದ್ದರು. ನಂತರ, ಹೊಸ ಮದುವೆ ಎಂಬುದಾಗಿ ಹೇಳಿ ಮದುವೆ ಮಾಡಿಸಿದ್ದರು. ಈಗ ಎಲ್ಲ ವಿಷಯ ಗೊತ್ತಾಗಿದೆ. ₹ 2.50 ಲಕ್ಷ ಹಾಗೂ ಮದುವೆಗೆ ಮಾಡಿರುವ ಖರ್ಚು ಸಮೇತ ಹಣ ವಾಪಸು ಕೊಡಿಸಿ. ಏಜೆಂಟರ ಮೇಲೂ ಕಠಿಣ ಕ್ರಮವಾಗಬೇಕು. ನನ್ನ ರೀತಿಯಲ್ಲಿ ಯಾರಿಗೂ ಅನ್ಯಾಯವಾಗಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.