ADVERTISEMENT

ಸುರಕ್ಷತೆ, ಶಿಷ್ಟಾಚಾರಕ್ಕೆ ಗರಿಷ್ಠ ಒತ್ತು

ಸಿಸಿಟಿವಿ ಕ್ಯಾಮೆರಾ ದುರಸ್ತಿಗೆ ಕ್ರಮ: ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 15:35 IST
Last Updated 23 ಜನವರಿ 2021, 15:35 IST
ಹಾವೇರಿಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನದ ಶಿಷ್ಟಾಚಾರ ಹಾಗೂ ಸುರಕ್ಷಾ ಸಮಿತಿಯ ಪೂರ್ವಭಾವಿ ಸಭೆಯನ್ನು ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನಡೆಸಿದರು 
ಹಾವೇರಿಯಲ್ಲಿ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನದ ಶಿಷ್ಟಾಚಾರ ಹಾಗೂ ಸುರಕ್ಷಾ ಸಮಿತಿಯ ಪೂರ್ವಭಾವಿ ಸಭೆಯನ್ನು ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನಡೆಸಿದರು    

ಹಾವೇರಿ: ‘ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ಹಾಗೂ ಸಾಹಿತ್ಯಾಸಕ್ತರ ಸುರಕ್ಷತೆ ಹಾಗೂ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಗರಿಷ್ಠ ಎಚ್ಚರ ವಹಿಸಲಾಗುವುದು’ ಎಂದು ಸಮ್ಮೇಳನದ ಶಿಷ್ಟಾಚಾರ ಹಾಗೂ ಸುರಕ್ಷಾ ಸಮಿತಿ ಅಧ್ಯಕ್ಷರಾದ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಶನಿವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮ್ಮೇಳನದ ಶಿಷ್ಟಾಚಾರ ಹಾಗೂ ಸುರಕ್ಷಾ ಸಮಿತಿಯ ಪೂರ್ವಭಾವಿ ಸಭೆ ನಡೆಸಿ ಕಾರ್ಯಯೋಜನೆ ಕುರಿತಂತೆ ಸಮಿತಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಸಮ್ಮೇಳನದ ವೇದಿಕೆಗಳು, ಪುಸ್ತಕ ಮಳಿಗೆಗಳು, ಪಾಕಶಾಲೆಯಲ್ಲಿ ಬೆಂಕಿ ಅವಘಡ, ವಿದ್ಯುತ್ ಅವಘಡ, ಜನದಟ್ಟಣೆಯ ನಿಯಂತ್ರಣ, ವಾಹನ ನಿಲುಗಡೆ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತಂತೆ ಸಲಹೆ ನೀಡಿದರು.

ಸಮ್ಮೇಳನದ ಸಂದರ್ಭದಲ್ಲಿ ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವಂತೆ ಕ್ರಮವಹಿಸುವುದು, ಹಾವೇರಿ ನಗರ ಸೇರಿದಂತೆ ವಸತಿ ವ್ಯವಸ್ಥೆ ಕಲ್ಪಿಸಿರುವ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಂಪರ್ಕ, ಜನರ ಸುಕ್ಷರತೆಗೆ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜನೆ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದರು.

ADVERTISEMENT

ಹೋಂಗಾರ್ಡ್, ಎನ್.ಸಿ.ಸಿ., ಎನ್.ಎಸ್.ಎಸ್. ಸ್ವಯಂ ಸೇವಕರ ಬಳಕೆ, ಅಗ್ನಿಶಾಮಕ ವಾಹನಗಳ ಹೆಚ್ಚುವರಿ ನಿಯೋಜನೆ, ಅಬಕಾರಿ ಇಲಾಖೆ ಸಮ್ಮೇಳನದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಶಿಷ್ಟಾಚಾರದ ಪ್ರಕಾರ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಗಣ್ಯರಿಗೆ ಭದ್ರತಾ ವ್ಯವಸ್ಥೆ, ವೇದಿಕೆಯಲ್ಲಿ ಆಸನ ವ್ಯವಸ್ಥೆ, ವಾಹನಗಳ ವ್ಯವಸ್ಥೆ ಕುರಿತಂತೆ ಚರ್ಚಿಸಲಾಯಿತು. ಸಮ್ಮೇಳನಕ್ಕೆ ಆಗಮಿಸುವ ಗಣ್ಯರು ಹಾಗೂ ಕಲಾವಿದರು, ಸಾಹಿತಿಗಳು, ಜಿಲ್ಲಾವಾರು ಪ್ರತಿನಿಧಿಗಳ ವಾಸ್ತವ್ಯ ಸ್ಥಳಗಳಿಗೆ ಭದ್ರತಾ ವ್ಯವಸ್ಥೆ, ವಿಶೇಷವಾಗಿ ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಕುರಿತಂತೆ ಚರ್ಚಿಸಲಾಯಿತು.

ಸಭೆಯಲ್ಲಿ ಸಮಿತಿಯ ಸದಸ್ಯಕಾರ್ಯದರ್ಶಿ ಡಿ.ವೈ.ಎಸ್ಪಿ ವಿಜಯಕುಮಾರ ಸಂತೋಷ್, ಅಗ್ನಿಶಾಮಕ ದಳದ ನೋಡಲ್ ಅಧಿಕಾರಿ ಸೋಮಶೇಖರ ಅಗಡಿ, ಅಬಕಾರಿ ಇಲಾಖೆಯ ನಾಗವ್ವ ಮಣ್ಣನವರ, ಹೋಂ ಗಾರ್ಡ್ ಕಮಾಂಡೆಂಟ್ ಪ್ರಭಾಕರ ಮಂಟೂರ, ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ವಿಭಾಗದ ಶಿರಸ್ತೇದಾರ ಡಿ.ಎನ್.ಕುಲಕರ್ಣಿ, ಸಾರಿಗೆ ಇಲಾಖೆಯ ಶ್ರೀಪಾದ, ಹೆಸ್ಕಾಂ ಇಲಾಖೆಯ ಎಂಜಿನಿಯರ್‌ ಮರಿಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.