ADVERTISEMENT

ಮನರೇಗಾ ಯೋಜನೆ ಹೆಸರು ಬದಲು; ಕೇಂದ್ರ ಸರ್ಕಾರದಿಂದ ಗಾಂಧೀಜಿಗೆ ಅಪಮಾನ: ಬಣಕಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:16 IST
Last Updated 2 ಮಾರ್ಚ್ 2026, 7:16 IST
ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದಿಂದ ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು 
ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದಿಂದ ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು    

ರಟ್ಟೀಹಳ್ಳಿ: ‘20 ವರ್ಷಗಳ ಮನರೇಗಾ ಯೋಜನೆಯನ್ನು ಕೇವಲ 7 ಗಂಟೆ ಚರ್ಚಿಸಿ ಕಾಯ್ದೆ ಬದಲಾಯಿಸಿದ್ದು, ಮೋದಿ ಸರ್ಕಾರ ಮಹಾತ್ಮ ಗಾಂಧೀಜಿಗೆ ಮಾಡಿದ ದೊಡ್ಡ ಅಪಮಾನ. ಇದನ್ನು ರಾಷ್ಟ್ರದ ಜನತೆ ಕ್ಷಮಿಸಲು ಸಾಧ್ಯವಿಲ್ಲ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ತಾಲ್ಲೂಕಿನ ಗುಂಡಗಟ್ಟಿ ಗ್ರಾಮದಿಂದ  ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹೊರಟು ಇಂಗಳಗೊಂದಿ, ಸತ್ತಗಿಹಳ್ಳಿ, ಶಿರಗಂಬಿ, ಮಾರ್ಗವಾಗಿ ಮನರೇಗಾ ಯೋಜನೆ ಬೆಂಬಲಿಸಿ ಶನಿವಾರ ಸುಮಾರು 15 ಕಿ.ಮೀ. ಪಾದಯಾತ್ರೆಯೊಂದಿಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ದಾರಿಯುದ್ದಕ್ಕೂ ಗ್ರಾಮಗಳ ಜನರನ್ನು ಸಂಪರ್ಕಿಸಿ ಮನರೇಗಾ ಯೋಜನೆ ಬಡವರಿಗೆ ವರದಾನವಾಗಿದ್ದು, ಅದನ್ನು ಕೇಂದ್ರ ಸರ್ಕಾರ ಬದಲಾಯಿಸಿ, ಬಡ ಕೂಲಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.

ADVERTISEMENT

ಬಡವರ ಪರವಾದ ಈ ಯೋಜನೆಯನ್ನು ಮುಂದುವರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಿಂದ ನಿರಂತರ ಪ್ರತಿಭಟನೆ ನಡೆಯಲಿದೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಮಾತನಾಡಿ, ‘ಬಡವರಿಗಾಗಿ ಮನರೇಗಾ ಯೋಜನೆ ಜಾರಿಯಲ್ಲಿದ್ದು, ಅದನ್ನು ಬದಲಿಸಿರುವ ಕೇಂದ್ರ ಸರ್ಕಾರದ ಧೋರಣೆ ಸರಿಯಲ್ಲ, ಕೇಂದ್ರದ ಮೋದಿ ಸರ್ಕಾರ ಕೇವಲ ಶ್ರೀಮಂತರಿಗೆ ಕಾಯ್ದೆ ರೂಪಿಸುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮುಖಂಡರಾದ ಮೋಹನ ಲಿಂಬೆಕಾಯಿ, ಸಂಜೀವಕುಮಾರ ನೀರಲಗಿ, ವಸಂತ ದ್ಯಾವಕ್ಕಳವರ, ಪಿ.ಡಿ. ಬಸನಗೌಡ್ರ, ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ಮಹೇಶ ಗುಬ್ಬಿ, ಸರ್ಪರಾಜ ಮಾಸೂರು, ಬಾಬುಸಾಬ ಜಡದಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.