ADVERTISEMENT

ರಕ್ಷಣಾ ಇಲಾಖೆಗೆ ಹಾವೇರಿ ಹಾಲು; ನಿತ್ಯ 70 ಸಾವಿರ ಲೀಟರ್ ಹಾಲು ಬಳಕೆ

ಸಂತೋಷ ಜಿಗಳಿಕೊಪ್ಪ
Published 4 ಆಗಸ್ಟ್ 2025, 3:59 IST
Last Updated 4 ಆಗಸ್ಟ್ 2025, 3:59 IST
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿರುವ ಯುಎಚ್‌ಟಿ ಘಟಕ
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿರುವ ಯುಎಚ್‌ಟಿ ಘಟಕ   

ಹಾವೇರಿ: ಜಿಲ್ಲೆಯ ರೈತರು ಹಾಗೂ ಉತ್ಪಾದಕರಿಂದ ಸಂಗ್ರಹಿಸುವ ಹಾಲನ್ನು ರಕ್ಷಣಾ ಇಲಾಖೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲು ಸಿದ್ಧತೆ ನಡೆದಿದೆ.

ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿರುವ ಯುಎಚ್‌ಟಿ (ಅಲ್ಟ್ರಾ – ಹೈ ಟೆಂಪರೇಚರ್ ಪ್ರೊಸೆಸಿಂಗ್) ಘಟಕದ ನಿರ್ವಹಣೆ ಜವಾಬ್ದಾರಿಯನ್ನು ಕೆಎಂಎಫ್‌ (ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ) ವಹಿಸಿಕೊಂಡಿದ್ದು, ಮಾರುಕಟ್ಟೆ ವ್ಯವಸ್ಥೆ ಮತ್ತಷ್ಟು ವಿಸ್ತರಣೆಗೊಂಡಿದೆ.

ಧಾರವಾಡ ಹಾಲು ಒಕ್ಕೂಟದಿಂದ ವಿಭಜನೆಗೊಂಡು, ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಹಾವೆಮುಲ್) ಸ್ಥಾಪನೆಯಾಗಿದೆ. ಜಿಲ್ಲೆಯಲ್ಲಿ ಉತ್ಪಾದಕರಿಂದ ಹಾಲು ಸಂಗ್ರಹಿಸಿ ಮಾರುವ ಜವಾಬ್ದಾರಿ ವಹಿಸಿಕೊಂಡಿದೆ. ಆದರೆ, ಮಾರುಕಟ್ಟೆ ಕೊರತೆಯಿಂದಾಗಿ ಒಕ್ಕೂಟ ಸುಮಾರು ₹ 18 ಕೋಟಿ ನಷ್ಟ ಎದುರಿಸುತ್ತಿದೆ.

ADVERTISEMENT

ಹಾಲಿನ ಉತ್ಪನ್ನಗಳನ್ನು ತಯಾರಿಸುವ ಉದ್ದೇಶದಿಂದ ಯುಎಚ್‌ಟಿ ಘಟಕ ಆರಂಭಿಸಲಾಗಿದೆ. ಇದಕ್ಕೆ ಹಾವೆಮುಲ್ ಮೂಲಕ ಹಾಲು ಪೂರೈಸಿದರೂ ಸೂಕ್ತ ಬೆಲೆ ಸಿಗುತ್ತಿರಲಿಲ್ಲ. ಜೊತೆಗೆ, ಹಾವೇರಿ ಹೊರತುಪಡಿಸಿ ಬೇರೆಡೆ ಹಾಲು ಕಳುಹಿಸಲು ಕೆಎಂಎಫ್‌ ಅವಕಾಶ ನೀಡಿರಲಿಲ್ಲ. ಇದರ ನಡುವೆಯೇ, ಯುಎಚ್‌ಟಿ ಮೂಲಕ ಪ್ರಯಾಗರಾಜ್‌ನ ಮಹಾಕುಂಭಮೇಳಕ್ಕೆ ಕಳುಹಿಸಿದ್ದ ಹಾಲು ಗುಣಮಟ್ಟದ್ದಲ್ಲವೆಂದು ವರದಿ ಬಂದಿತ್ತು. ಅದರಿಂದ ಘಟಕಕ್ಕೆ ಕೆಲ ದಿನ ಬೀಗ ಹಾಕಲಾಗಿತ್ತು. ಇದೆಲ್ಲವೂ ಒಕ್ಕೂಟದ ನಷ್ಟಕ್ಕೆ ಕಾರಣವಾಗಿದೆ.

ಹಾವೆಮುಲ್‌ನ ನೂತನ ಅಧ್ಯಕ್ಷರಾದ ಮಂಜನಗೌಡ ಪಾಟೀಲ, ‘ಯುಎಚ್‌ಟಿ ಘಟಕವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ನಮ್ಮ ಹಾಲಿಗೆ ಉತ್ತಮ ಬೆಲೆ ನೀಡಿ’ ಎಂದು ಕೆಎಂಎಫ್‌ ಅಧ್ಯಕ್ಷರನ್ನು ಒತ್ತಾಯಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಧ್ವನಿಗೂಡಿಸಿದ್ದರು. ಇವರ ಆಗ್ರಹಕ್ಕೆ ಮಣಿದ ಕೆಎಂಎಫ್‌, ಯುಎಚ್‌ಟಿ ಘಟಕದ ನಿರ್ವಹಣೆ ವಹಿಸಿಕೊಂಡಿದೆ.

‘ಹಾವೇರಿಗೆ ಬಂದಿದ್ದ ಕೆಎಂಎಫ್‌ ಅಧಿಕಾರಿಗಳು, ಯುಎಚ್‌ಟಿ ಘಟಕ ಪರಿಶೀಲಿಸಿದ್ದರು. ಎಲ್ಲವೂ ಒಪ್ಪಿಗೆಯಾಯಿತು. ಯುಎಚ್‌ಟಿ ಘಟಕದ ನಿರ್ವಹಣೆಯನ್ನು ಜುಲೈ 1ರಿಂದ ಕೆಎಂಎಫ್‌ ವಹಿಸಿಕೊಂಡಿದ್ದು, ಹಾಲಿನ ಉತ್ಪನ್ನ ತಯಾರಿಗೆ ಸಿದ್ಧತೆ ನಡೆದಿದೆ. ಜುಲೈ 3ರಿಂದ ಉತ್ಪನ್ನ ತಯಾರಿ ಕೆಲಸ ಆರಂಭಿಸುವ ಮಾಹಿತಿಯಿದೆ’ ಎಂದು ಅಧ್ಯಕ್ಷ ಮಂಜನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಂಎಫ್‌ ಅವರಿಗೆ ಹೆಚ್ಚಿನ ಮಾರುಕಟ್ಟೆಯಿದೆ. ಅವರೇ ಉತ್ಪನ್ನ ತಯಾರಿಸಿ ಮಾರಲಿದ್ದಾರೆ. ನಾವು ಕೇವಲ ಹಾಲು ನೀಡುತ್ತೇವೆ. ಪ್ರತಿ ಲೀಟರ್‌ ಹಾಲಿಗೆ 25 ಪೈಸೆ ಹೆಚ್ಚುವರಿ ಲಾಭ ನೀಡುವುದಾಗಿ ಹೇಳಿದ್ದಾರೆ. ಘಟಕ ಚೆನ್ನಾಗಿ ನಡೆದರೆ, ನಮ್ಮ ಒಕ್ಕೂಟದ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ’ ಎಂದು ಹೇಳಿದರು.

ದಿನಕ್ಕೆ 70 ಸಾವಿರ ಲೀಟರ್‌ ಹಾಲು:

ಜಿಲ್ಲೆಯಲ್ಲಿ ಒಕ್ಕೂಟದಿಂದ ನಿತ್ಯವೂ 1.50 ಲಕ್ಷದಿಂದ 1.60 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ಯುಎಚ್‌ಟಿ ಘಟಕಕ್ಕೆ 70 ಸಾವಿರ ಲೀಟರ್ ಹಾಲಿನ ಅವಶ್ಯಕತೆಯಿದ್ದು, ಅದನ್ನು ಪೂರೈಸಲು ಒಕ್ಕೂಟ ಸಜ್ಜಾಗಿದೆ.

ಹಾವೇರಿಯ ಹಾಲಿನಿಂದ ‘ಗುಡ್‌ಲೈಫ್‌’ ಪೊಟ್ಟಣ ಹಾಗೂ ಇತರೆ ಉತ್ಪನ್ನಗಳನ್ನು ಕೆಎಂಎಫ್‌ ತಯಾರಿಸಲಿದೆ. ಇದೇ ಉತ್ಪನ್ನಗಳನ್ನು ರಕ್ಷಣಾ ಇಲಾಖೆಗೆ ಕಳುಹಿಸಲಿದೆ. ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯದ ಮಾರುಕಟ್ಟೆಗೂ ಇದೇ ಹಾಲು ಹೋಗಲಿದೆ.

‘70 ಸಾವಿರ ಲೀಟರ್‌ ಹಾಲು ಯುಎಚ್‌ಟಿಗೆ ನೀಡಲಾಗುತ್ತಿದೆ. 35 ಸಾವಿರ ಲೀಟರ್ ಕ್ಷೀರಭಾಗ್ಯಕ್ಕೆ ಬಳಸಲಾಗುತ್ತಿದೆ. 20 ಸಾವಿರ ಲೀಟರ್ ಸ್ಥಳೀಯ ಮಾರುಕಟ್ಟೆಗೆ ಪೂರೈಸಲಾಗುತ್ತಿದೆ. ಉಳಿದ ಹಾಲನ್ನು ಬೆಂಗಳೂರಿನ ಮದರ ಡೇರಿಗೆ ಕಳುಹಿಸಲಾಗುತ್ತಿದೆ’ ಎಂದು ಹಾವೆಮುಲ್ ಅಧಿಕಾರಿಯೊಬ್ಬರು ಹೇಳಿದರು.

‘ಪೊಟ್ಟಣದ ಮೇಲೆ ಹಾವೆಮುಲ್’

‘ಯುಎಚ್‌ಟಿ ಘಟಕವನ್ನು ಕೆಎಂಎಫ್‌ ಸುಪರ್ದಿಗೆ ಪಡೆದಿರುವುದು ಒಳ್ಳೆಯ ಬೆಳವಣಿಗೆ. ಪ್ರತಿ ಪೊಟ್ಟಣಗಳ ಮೇಲೂ ಹಾವೆಮುಲ್‌ ಯುಚ್‌ಟಿ ಘಟಕದ ಹೆಸರು ಇರಲಿದೆ. ಇದರಿಂದಾಗಿ ಹಾವೇರಿ ಹಾಲಿನ ಹೆಸರು ಮಾರುಕಟ್ಟೆಗೆ ಗೊತ್ತಾಗಲಿದೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ನಮ್ಮ ಹಾಲಿಗೆ ಬೇಡಿಕೆ ಸೃಷ್ಟಿಯಾಗಲಿದೆ’ ಎಂದು ಹಾವೆಮುಲ್ ಅಧಿಕಾರಿ ತಿಳಿಸಿದರು.

ಹಾಲಿನ ಉತ್ಪನ್ನಗಳ ತಯಾರಿಗಾಗಿ ಮೇಗಾ ಡೇರಿ ನಿರ್ಮಾಣವಾಗುತ್ತಿದೆ. ಇದು ಆರಂಭವಾದರೆ ಹಾಲಿನ ಬಳಕೆ ಹೆಚ್ಚಾಗಲಿದೆ. ಒಕ್ಕೂಟಕ್ಕೂ ಲಾಭದ ನಿರೀಕ್ಷೆಯಿದೆ.
ಮಂಜನಗೌಡ ಪಾಟೀಲ, ಹಾವೆಮುಲ್ ಅಧ್ಯಕ್ಷ
ಯುಎಚ್‌ಟಿ ಘಟಕಕ್ಕೆ ನಿತ್ಯವೂ ಹಾಲು ಪೂರೈಸಲು ಒಕ್ಕೂಟ ಸಿದ್ಧವಿದೆ. ಜಿಲ್ಲೆಯೊಳಗೆ ಒಕ್ಕೂಟದ ಹಾಲಿನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗಿದೆ
ಪ್ರದೀಪ್, ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹಾವೆಮುಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.