ADVERTISEMENT

ಕೋವಿಡ್ ಲಕ್ಷಣವಿದ್ದರೆ ಪರೀಕ್ಷೆ ಮಾಡಿಸಿ

ವೈಯಕ್ತಿಕ ₹ 50 ಸಾವಿರ ಪರಿಹಾರ ಧನ ವಿತರಿಸಿದ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 18 ಮೇ 2021, 2:47 IST
Last Updated 18 ಮೇ 2021, 2:47 IST
ಕೋವಿಡ್‌ ಸೋಂಕಿನಿಂದ ಮೃತಪಟ್ಟ ಹಿರೇಕೆರೂರ ತಾಲ್ಲೂಕಿನ ವಡೆಯನಪುರ ಗ್ರಾಮದ ವ್ಯಕ್ತಿಯೊಬ್ಬರ ಕುಟುಂಬದ ಸದಸ್ಯರಿಗೆ ಸಚಿವ ಬಿ.ಸಿ. ಪಾಟೀಲ ವೈಯಕ್ತಿಕ ₹50 ಸಾವಿರ ಪರಿಹಾರ ಧನ ವಿತರಿಸಿದರು
ಕೋವಿಡ್‌ ಸೋಂಕಿನಿಂದ ಮೃತಪಟ್ಟ ಹಿರೇಕೆರೂರ ತಾಲ್ಲೂಕಿನ ವಡೆಯನಪುರ ಗ್ರಾಮದ ವ್ಯಕ್ತಿಯೊಬ್ಬರ ಕುಟುಂಬದ ಸದಸ್ಯರಿಗೆ ಸಚಿವ ಬಿ.ಸಿ. ಪಾಟೀಲ ವೈಯಕ್ತಿಕ ₹50 ಸಾವಿರ ಪರಿಹಾರ ಧನ ವಿತರಿಸಿದರು   

ಹಿರೇಕೆರೂರ: ಕೋವಿಡ್‌ 2ನೇ ಅಲೆ ತೀವ್ರವಾಗಿ ಹರಡುತ್ತಿದೆ, ಜ್ವರ-ಕೆಮ್ಮು ಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಕೋವಿಡ್‌ ತಪಾಸಣೆ ಮಾಡಿಸಿಕೊಳ್ಳಬೇಕು. ಸೋಂಕು ಹರಡುವುದನ್ನು ತಡೆಯಲು ತಪ್ಪದೇ ನಿಯಮಾವಳಿ ಪಾಲಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಜನತೆಗೆ ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸೋಮವಾರ ವೈಯಕ್ತಿವಾಗಿ ₹ 50 ಸಾವಿರ ಪರಿಹಾರ ಧನ ವಿತರಿಸಿ ಅವರು ಮಾತನಾಡಿದರು. ಕೋವಿಡ್‌ 2ನೇ ಅಲೆಯಿಂದ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕಿನಲ್ಲಿ 18 ಜನ ಮೃತಪಟ್ಟಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡು ತೀವ್ರ ನೋವು ಅನುಭವಿಸುತ್ತಿರುವ ಕುಟುಂಬಗಳಿಗೆ ನನ್ನ ಅಳಿಲು ಸೇವೆ ಇದು ಎಂದರು.

ಕೋವಿಡ್ 2ನೇ ಅಲೆ ನಂತರ 3ನೇ ಅಲೆ ಸಹ ಬರಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದು, ಅದನ್ನು ಎದುರಿಸಲು ನಾವು ಸಿದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವ ಅಗತ್ಯವಿದೆ. ಸೋಂಕು ಹರಡುವುದನ್ನು ತಡೆಯಲು ಪರಸ್ಪರ ಅಂತರ ಕಾಪಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ತಪ್ಪದೇ ಬಳಸಬೇಕು ಎಂದು ಹೇಳಿದರು.

ADVERTISEMENT

ಅನಗತ್ಯವಾಗಿ ಹೊರಗೆ ಓಡಾಡುವುದನ್ನು ನಿಲ್ಲಿಸಿ, ಕೋವಿಡ್ ಸೋಂಕು ಕಾಣಿಸಿಕೊಂಡರೆ ಹೋಂ ಐಸೋಲೇಷನ್‌ ಬೇಡ, ಕೋವಿಡ್‌ ಕೇರ್‌ ಸೆಂಟರ್‌ಗೆ ಬಂದು ಚಿಕಿತ್ಸೆ ಪಡೆಯಿರಿ. ಇದರಿಂದ ನಿಮ್ಮ ಕುಟುಂಬದ ಇತರರಿಗೆ ರೋಗ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದರು.‌

ಕೋವಿಡ್‌ ಸೋಂಕಿನಿಂದ ಮೃತಪಟ್ಟ ತಾಲ್ಲೂಕಿನ ಹಂಸಭಾವಿ ಗ್ರಾಮದ 4 ಕುಟುಂಬಗಳು, ಹಿರೇಕೊಣ್ತಿ, ನಿಟ್ಟೂರು, ಹಂಸಭಾವಿ, ಯೋಗಿಕೊಪ್ಪ, ವಡೆಯನಪುರ, ಅರಳೀಕಟ್ಟಿ, ಆಲದಗೇರಿ ಹಾಗೂ ಕಳಗೊಂಡ ಗ್ರಾಮದ ಮೃತರ ಕುಟುಂಬಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಸ್ವತಃ ಭೇಟಿ ಮಾಡಿ, ₹ 50 ಸಾವಿರ ಪರಿಹಾರ ಧನ ವಿತರಿಸಿದರು.
ತಹಶೀಲ್ದಾರ್‌ ಕೆ.ಎ.ಉಮಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.